ಬಿಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಅಥಣಿಯಿಂದ ಕುಮಠಳ್ಳಿ, ಕಾಗವಾಡದಿಂದ ಶ್ರೀನಿವಾಸ ಪಾಟೀಲ ಸ್ಪರ್ಧೆ
Kumathalli from Athani, Srinivas Patil contests from Kagawad in BDCC bank elections
ಅಥಣಿ 22: ಬಿಡಿಸಿಸಿ ಬ್ಯಾಂಕಿನ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಅಥಣಿಯಿಂದ ಮಾಜಿ ಶಾಸಕ ಮಹೇಶ ಕುಮಠಳ್ಳಿ ಮತ್ತು ಕಾಗವಾಡ ಕ್ಷೇತ್ರದಿಂದ ಬಿಜೆಪಿ ಯುವ ನಾಯಕ ಶ್ರೀನಿವಾಸ ಶ್ರೀಮಂತ ಪಾಟೀಲ ಅಭ್ಯರ್ಥಿಗಳಾಗಿ ಕಣಕ್ಕೆ ಇಳಿಯಲಿದ್ದಾರೆ ಎಂದು ಮಾಜಿ ಸಚಿವ, ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಘೋಷಿಸಿದರು.
ಅವರು ಆರ್.ಎಸ್.ಪಿ ಸಭಾ ಭವನದಲ್ಲಿ ಅಥಣಿ ಮತ್ತು ಕಾಗವಾಡ ಕ್ಷೇತ್ರಗಳ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡುತ್ತಿದ್ದರು.
ಅಥಣಿ ಶಾಸಕ ಲಕ್ಷ್ಮಣ ಸವದಿ ಸದ್ಯ ಬಿಡಿಸಿಸಿ ಬ್ಯಾಂಕಿಗೆ ಅಥಣಿಯಿಂದ ನಿರ್ದೇಶಕರಾಗಿದ್ದು, ಕಳೆದ ಅವಧಿಯಲ್ಲಿ ನಾವೆಲ್ಲ ಸೇರಿ ಸಾಕಷ್ಟು ಒತ್ತಡಗಳ ಮಧ್ಯೆಯೂ ಅವರ ಅವಿರೋಧ ಆಯ್ಕೆಗೆ ಸಹಕಾರ ನೀಡಿದ ಪರಿಣಾಮವೇ ಅವರು ನಿರ್ದೇಶಕರಾದರು ಎಂದ ಅವರು ವಿಶ್ವಾಸ ಉಳಿಸಿಕೊಳ್ಳದ ಲಕ್ಷ್ಮಣ ಸವದಿ ವಿರುದ್ಧ ಈ ಬಾರಿ ಅಭ್ಯರ್ಥಿಯಾಗಿ ಮಾಜಿ ಶಾಸಕ ಮಹೇಶ ಕುಮಠಳ್ಳಿ ಸ್ಪರ್ಧೆ ಮಾಡೇ ಮಾಡುತ್ತಾರೆ ಅದೇ ರೀತಿ ಯುವ ಉದ್ಯಮಿ, ಮಾಜಿ ಸಚಿವ ಶ್ರೀಮಂತ ಪಾಟೀಲ ಸುಪುತ್ರ ಮತ್ತು ಬಿಜೆಪಿಯ ಯುವ ನಾಯಕ ಶ್ರೀನಿವಾಸ ಪಾಟೀಲ ಕಾಗವಾಡ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ ಎಂದ ಅವರು ಈ ಬಾರಿಯ ಚುನಾವಣೆಯಲ್ಲಿ ಹೊಂದಾಣಿಕೆ ಇಲ್ಲವೇ ಇಲ್ಲ ಎಂದು ಸ್ಪಷ್ಟ ಪಡಿಸಿದರು.
ಚುನಾವಣೆ ಫಲಿತಾಂಶ ಏನೇ ಆಗಲಿ ಅದು ಬೇರೆ ಫಲಿತಾಂಶದ ಬಗೆಗೆ ನಾನು ಮಾತನಾಡುವುದಿಲ್ಲ ಆದರೆ ಬಿಡಿಸಿಸಿ ಬ್ಯಾಂಕಿನ ಆಡಳಿತ ಚುಕ್ಕಾಣಿ ನಮ್ಮ ಕೈಗೆ ಬಂದೇ ಬರುತ್ತದೆ ನಮ್ಮವರೇ ಒಬ್ಬರು ಅಧ್ಯಕ್ಷರಾಗುತ್ತಾರೆ ಆಗ ಅಥಣಿ ಮತ್ತು ಕಾಗವಾಡ ಕ್ಷೇತ್ರಗಳ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಪತ್ತು ಹಂಚಿಕೆಯಲ್ಲಿ ಯಾವ ಕಾರಣಕ್ಕೂ ಅನ್ಯಾಯ ವಾಗಲು ಬಿಡುವುದಿಲ್ಲ ಎಂದ ಅವರು ಬಿಡಿಸಿಸಿ ಬ್ಯಾಂಕಿಗೆ ಚುನಾವಣೆಯ ನಂತರ ಲಿಂಗಾಯತ ಸಮುದಾಯಕ್ಕೆ ಸೇರಿದ ಆಡಳಿತ ಮಂಡಳಿ ಸದಸ್ಯರೊಬ್ಬರು ನಿಶ್ಚಿತವಾಗಿಯೂ ಅಧ್ಯಕ್ಷರಾಗುತ್ತಾರೆ ಹೊರತು ಜಾರಕಿಹೊಳಿ ಮನೆತನದವರಲ್ಲ ಎಂದು ಸ್ಪಷ್ಟ ಪಡಿಸಿದರು.
ಲಕ್ಷ್ಮಣ ಸವದಿ ವಿಧಾನ ಸಭೆ ಚುನಾವಣೆಯಲ್ಲಿ ಸೋತರೂ ಕೂಡ ಬಿಜೆಪಿ ಸರಕಾರದಲ್ಲಿ ಡಿಸಿಎಮ್ ಆಗಿದ್ದರು ಅವರನ್ನು ಡಿಸಿಎಮ್ ಮಾಡುವಲ್ಲಿ ಬಿಜೆಪಿ ವರೀಷ್ಠ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯುರ್ಪನವರ ಕೈವಾಡ ಇಲ್ಲ. ಯಡಿಯುರ್ಪ ಮತ್ತು ನನ್ನ ಮಧ್ಯೆ ಸಾಕಷ್ಟು ಭಿನ್ನಾಭಿಪ್ರಾಯಗಳಿವೆ ಆದರೆ ಲಕ್ಷ್ಮಣ ಸವದಿ ಡಿಸಿಎಮ್ ಆಗುವಲ್ಲಿ ಅವರ ಪಾತ್ರ ಇಲ್ಲ ಎಂದು ಹೇಳಿದ ಅವರು ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಅಥಣಿಯಿಂದ ಮಹೇಶ ಕುಮಠಳ್ಳಿ ಮತ್ತು ಕಾಗವಾಡ ಕ್ಷೇತ್ರದಿಂದ ಶ್ರೀಮಂತ ಪಾಟೀಲರು ಗೆದ್ದೇ ಗೆಲ್ಲುತ್ತಾರೆ ಇದರಲ್ಲಿ ಯಾವುದೇ ಸಂಶಯ ಬೇಡ ಎಂದರು.
ಮಾಜಿ ಶಾಸಕ ಮಹೇಶ ಕುಮಠಳ್ಳಿ ಮಾತನಾಡಿ, ಬಿಡಿಸಿಸಿ ಬ್ಯಾಂಕಿನ ಚುನಾವಣೆಗೆ ನಿಶ್ಚಿತವಾಗಿಯೂ ಸ್ಪರ್ಧೆ ಮಾಡುತ್ತೇನೆ ನೀವು ನಮಗೆ ಬೆನ್ನೆಲುಬಾಗಿ ನಿಲ್ಲಬೇಕು ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿಯವರಲ್ಲಿ ಮನವಿ ಮಾಡಿದರು. ಬಿಡಿಸಿಸಿ ಬ್ಯಾಂಕಿನ ಚುನಾವಣೆಯಲ್ಲಿ ರಾಜಕೀಯ ಬೇಡ ಎಂದು ಹೇಳುತ್ತಾರೆ ಆದರೆ ಸಹಕಾರ ಸಂಘಗಳ ಮೂಲಕ ರೈತರಿಗೆ ಪತ್ತು ಹಂಚಿಕೆ ಮಾಡುವಾಗ ರಾಜಕೀಯ ಬೇಡ ಎಂದವರೇ ರಾಜಕೀಯ ಮಾಡುತ್ತಾರೆ ಹೀಗಾಗಿ ಅನಿವಾರ್ಯವಾಗಿ ಚುನಾವಣೆಯಲ್ಲಿ ಸ್ಪರ್ಧೆ ಮಾಡೇ ಮಾಡುವೆ ಸೋಲು, ಗೆಲುವಿನ ಬಗ್ಗೆ ತಲೆ ಖೆಡಿಸಿಕೊಳ್ಳುವುದಿಲ್ಲ ಎಂದರು.
ಕರಿ ಮಸೂತಿ ಏತ ನೀರಾವರಿಯಿಂದ ವಂಚಿತಗೊಂಡ ಪೂರ್ವ ಭಾಗದ ಏಳು ಗ್ರಾಮಗಳಿಗೆ ನೀರಾವರಿ ಒದಗಿಸುವ ಕೊಟ್ಟಲಗಿ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆಗೆ ಇಂದಿನ ಶಾಸಕ ಲಕ್ಷ್ಮಣ ಸವದಿಯವರ ಕೊಡುಗೆ ಶೂನ್ಯ ಈ ಯೋಜನೆಯ ಮಂಜೂರಾತಿಗೆ ಶ್ರಮಿಸಿದವರು ಮಾಜಿ ನೀರಾವರಿ ಸಚಿವ ರಮೇಶ ಜಾರಕಿಹೊಳಿಯವರು ಎಂದ ಅವರು ನಾನು ಈ ಯೋಜನೆಗಾಗಿ 2002 ರಿಂದ ಶಾಸಕನಾಗುವವರೆಗೂ ನಿರಂತರವಾಗಿ ಹೋರಾಟ ಮಾಡಿದ್ದೇನೆ ಅದೃಷ್ಟಕ್ಕೆ ಈ ಯೋಜನೆಗೆ ನನ್ನ ಅವಧಿಯಲ್ಲಿಯೇ ಮಂಜೂರಾತಿ ದೊರಕಿತು ಎಂದು ಹೇಳಿದರು.
ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಮಾಜಿ ಸಚಿವ ಶ್ರೀಮಂತ ಪಾಟೀಲ, ಕಾಗವಾಡ ಕ್ಷೇತ್ರದಲ್ಲಿ ನಾನು ಹಾಗೂ ಅಥಣಿ ಕ್ಷೇತ್ರದಲ್ಲಿ ಮಹೇಶ ಕುಮಠಳ್ಳಿಯವರು ಯುದ್ಧೋಪಾದಿಯಲ್ಲಿ ಅಭಿವೃದ್ಧಿ ಮತ್ತು ಜನಪರ ಕಾರ್ಯಗಳನ್ನು ಅನುಷ್ಠಾನಗೊಳಿಸಿದ್ದರೂ ಕೂಡ ಜನ ನಮ್ಮಿಬ್ಬರ ಕೈ ಹಿಡಿಯಲಿಲ್ಲ ಇದರಿಂದ ನಮ್ಮ ಸೋಲಿನಿಂದ ಬೇಜಾರಾಗಿದ್ದ ರಮೇಶ ಜಾರಕಿಹೊಳಿ ನಮ್ಮ ಕ್ಷೇತ್ರಗಳ ಕಡೆಗೆ ತಮ್ಮ ಪ್ರವಾಸ ನಿಲ್ಲಿಸಿದ್ದರು ಎಂದ ಅವರು ನೀವು ಆಗಾಗ ಕೇವಲ ಅಥಣಿ ಅಷ್ಟೇ ಅಲ್ಲ ಜಿಲ್ಲಾ ಪಂಚಾಯತ ಕ್ಷೇತ್ರಗಳಲ್ಲಿಯೂ ಕಾರ್ಯಕರ್ತರ ಸಮಾವೇಶಗಳಿಗೆ ಬನ್ನಿ ಆಗ ಕಾರ್ಯಕರ್ತರ ಉತ್ಸಾಹ ಇಮ್ಮಡಿಗೊಳ್ಳುತ್ತದೆ ಎಂದರು.
ಬಿಜೆಪಿ ಧುರೀಣ ಉದ್ಯಮಿ ರವಿ ಪೂಜಾರಿ ಮಾತನಾಡಿ, 2028 ರಲ್ಲಿ ನಡೆಯಲಿರುವ ವಿಧಾನ ಸಭಾ ಚುನಾವಣೆಯಲ್ಲಿ ನಿಶ್ಚಿತವಾಗಿಯೂ ಅಥಣಿ ಮತ್ತು ಕಾಗವಾಡ ಕ್ಷೇತ್ರಗಳಲ್ಲಿ ಮಹೇಶ ಕುಮಠಳ್ಳಿ ಮತ್ತು ಶ್ರೀಮಂತ ಪಾಟೀಲರನ್ನು ಗೆಲ್ಲಿಸುವ ಮೂಲಕ ನೀವು ಮತ್ತೊಮ್ಮೆ ರಾಜ್ಯದ ನೀರಾವರಿ ಸಚಿವರಾಗುವಂತೆ ಮಾಡುತ್ತೇವೆ ಎಂದ ಅವರು ಇದಕ್ಕಾಗಿ ನೀವು ಆಗಾಗ ಎರಡೂ ಕ್ಷೇತ್ರಗಳಿಗೆ ಭೇಟಿ ನೀಡಿ ಕಾರ್ಯಕರ್ತರಲ್ಲಿ ವಿಶ್ವಾಸ ಹೆಚ್ಚಿಸಿ ಎಂದು ಮನವಿ ಮಾಡಿದರು.
ಬಿಜೆಪಿ ಧುರೀಣ, ಮಾಜಿ ಜಿ.ಪಂ ಸದಸ್ಯ ಸಿದ್ಧಪ್ಪಾ ಮುದಕಣ್ಣವರ ಮಾತನಾಡಿ, ಬಿಡಿಸಿಸಿ ಬ್ಯಾಂಕಿನ ಚುನಾವಣೆಯಲ್ಲಿ ಅಥಣಿ ತಾಲೂಕಿನಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯನ್ನು ಸ್ಪರ್ಧೆಗಿಳಿಸಿ ಇಲ್ಲದೇ ಹೋದಲ್ಲಿ ಕಾರ್ಯಕರ್ತರು ಉತ್ಸಾಹ ಕಳೆದುಕೊಳ್ಳುತ್ತಾರೆ ಎಂದ ಅವರು ಯಾವ ಕಾರಣಕ್ಕೂ ಹೊಂದಾಣಿಕೆ ಮಾಡಿಕೊಳ್ಳಬೇಡಿ ಎಂದು ಮನವಿ ಮಾಡಿದರು.
ಸಮಾವೇಶದಲ್ಲಿ ಅಪ್ಪಾಸಾಹೇಬ ಅವತಾಡೆ, ಡಾ.ರವಿ ಸಂಕ, ಪ್ರಭಾಕರ ಚವ್ಹಾಣ, ಧರೆಪ್ಪ ಠಕ್ಕಣ್ಣವರ, ಧರೆಪ್ಪ ನಂದೇಶ್ವರ, ನಾನಾಸಾಹೇಬ ಅವತಾಡೆ, ಮಲ್ಲಿಕಾರ್ಜುನ ಅಂದಾನಿ, ಮಲ್ಲಿಕಾರ್ಜುನ ಹಂಚಿನಾಳ, ಅಶೋಕ ಯಲ್ಲಡಗಿ ಸೇರಿದಂತೆ ನೂರಾರು ಕಾರ್ಯಕರ್ತರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 