ಸೋಂಕು ಪತ್ತೆಯಾಗದ ಜಿಲ್ಲೆಗಳಲ್ಲೂ ಕೋವಿಡ್‌-19 ತಪಾಸಣೆಗೆ ಸೂಚನೆ

ಬೆಂಗಳೂರು, ಏ.18, ಇದುವರೆಗೂ ಕೊರೋನಾ ಸೋಂಕು ಪತ್ತೆಯಾಗದ ಹತ್ತು ಜಿಲ್ಲೆಗಳಲ್ಲಿ ನಾಳೆಯವರೆಗೂ ಪ್ರತಿದಿನ ಒಂದು  ನೂರು ರೋಗಿಗಳ ಮಾದರಿಗಳನ್ನು ಅಧಿಕೃತ ಕೋವಿಡ್-19ರ ತಪಾಸಣಾ ಪ್ರಯೋಗಾಲಯಗಳಿಗೆ  ಕಳುಹಿಸಿಕೊಡುವಂತೆ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಸಂಬಂಧಿಸಿದ  ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.ಈ ಸಂಬಂಧ ಸೋಂಕು  ಪತ್ತೆಯಾಗದ ರಾಮನಗರ, ಕೋಲಾರ, ಹಾಸನ, ಶಿವಮೊಗ್ಗ, ಚಾಮರಾಜನಗರ, ಹಾವೇರಿ, ಕೊಪ್ಪಳ,  ರಾಯಚೂರು, ಯಾದಗಿರಿ, ಚಿಕ್ಕಮಗಳೂರು ಜಿಲ್ಲಾಧಿಕಾರಿಗಳಿಗೆ ಮುಖ್ಯ ಕಾರ್ಯದರ್ಶಿ ಟಿ.ಎಂ.  ವಿಜಯ ಭಾಸ್ಕರ್  ಪತ್ರ ಬರೆದಿದ್ದಾರೆ.
ಕೆಲವು‌ ತಜ್ಞರು  ಕೊರೋನಾ ಲಕ್ಷಣಗಳು‌ ಗೋಚರಿಸದಿದ್ದರೂ ಸೋಂಕು ಇರುವ ಸಾಧ್ಯತೆ ಇರುತ್ತದೆ ಎಂದು ಅಭಿಪ್ರಾಯ  ಪಟ್ಟಿರುವ ಹಿನ್ನೆಲೆಯಲ್ಲಿ, ತೀವ್ರ ಜ್ವರ, ಉಸಿರಾಟದ ತೊಂದರೆಯಂತಹ  ಅನಾರೋಗ್ಯ  ಲಕ್ಷಣವಿರುವ (ಎಸ್ ಎಆರ್ ಐ) ರೋಗಿಗಳ ಮಾದರಿಗಳನ್ನು ಪ್ರಯೋಗಾಲಯಗಳಿಗೆ ಕಳುಹಿಸಿಕೊಡಲು  ಪತ್ರದಲ್ಲಿ‌ ಸೂಚಿಸಿದ್ದಾರೆ.ಈ ಸಂಬಂಧ ತಮ್ಮ‌ ತಮ್ಮ ಜಿಲ್ಲೆಗಳಲ್ಲಿ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದ್ದಾರೆ.
ಅಲ್ಲದೆ, ಸೋಮವಾರದಿಂದ ಪ್ರತಿದಿನ 50 ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸುವಂತೆ ಸೂಚಿಸಿದ್ದಾರೆ. ರಾಜ್ಯದ ಈ ಹತ್ತು ಜಿಲ್ಲೆಗಳಲ್ಲಿ ಸೋಂಕು ಕಂಡುಬರದಿರುವುದು ಸಮಾಧಾನಕರ ಸಂಗತಿಯಾಗಿದೆ ಎಂದಿದ್ದಾರೆ.ಮುಖ್ಯಮಂತ್ರಿ  ಬಿ.ಎಸ್.ಯಡಿಯೂರಪ್ಪ ಅವರು ಪತ್ತೆಯಾಗದ ಜಿಲ್ಲೆಗಳಲ್ಲಿ ಸೋಂಕಿನ ಬಗ್ಗೆ ತಪಾಸಣೆ  ನಡೆಸಿದರಷ್ಟೇ ವಾಸ್ತವ ಸಂಗತಿ ಗೊತ್ತಾಗಲಿದೆ ಎಂದು ಹೇಳಿದ ಬೆನ್ನಲ್ಲೆ ಮುಖ್ಯ  ಕಾರ್ಯದರ್ಶಿ ತಪಾಸಣೆಗೆ ಸೂಚಿಸಿದ್ದಾರೆ.
ಇಡೀ ವಿಶ್ವವನ್ನೇ  ಬೆಚ್ಚಿ ಬೀಳಿಸಿರುವ ಕೊರೋನಾ ವೈರಸ್ ಸೋಂಕು ಹರಡುವುದನ್ನು ತಡೆಯಲು ರಾಜ್ಯದಲ್ಲಿ  ಕಟ್ಟುನಿಟ್ಟಿನ ಲಾಕ್ ಡೌನ್  ಕೈಗೊಂಡಿರುವ  ಸರ್ಕಾರ ಸೋಂಕು ಪತ್ತೆಯಾಗದ ಜಿಲ್ಲೆಗಳಲ್ಲೂ  ತಪಾಸಣೆ ನಡೆಸಲು ಮುಂದಾಗಿದೆ.ನಿರಂತರ ತಪಾಸಣೆ ಮಾಡುವ ಮೂಲಕ‌  ನಿಜವಾಗಲೂ ಈ ಜಿಲ್ಲೆಗಳಿಗೆ ಸೋಂಕು ಹರಡಿಲ್ಲವೇ ಅಥವಾ ಇದ್ದರೂ ಸೋಂಕಿನ ಲಕ್ಷಣಗಳು  ಕಂಡಬಂದಿಲ್ಲವೇ ಎಂಬುದನ್ನು ತಿಳಿಯುವ ಉದ್ದೇಶದಿಂದ‌ ಮಾದರಿಗಳ‌ ಪರೀಕ್ಷೆ  ಮಾಡಲಾಗುತ್ತದೆ.