ಕೋವಿಡ್‌-19: ಮೃತಪಟ್ಟ ವೃದ್ಧನ ಸಂಪರ್ಕದಲ್ಲಿದ್ದ 53 ಮಂದಿಯ ಕ್ವಾರಂಟೈನ್‌

ಬೆಂಗಳೂರು, ಏ.14,ಕೋವಿಡ್‌ -19 ಸೋಂಕು ಹಾಗೂ ಹೃದಯ ಸಂಬಂಧಿ ಕಾಯಿಲೆಗಳಿಂದ ನಿನ್ನೆ ಮೃತಪಟ್ಟ ವೃದ್ಧನ ಸಂಪರ್ಕದಲ್ಲಿದ್ದ 53 ಮಂದಿಯನ್ನು ಗುರುತಿಸಿ ಕ್ವಾರಂಟೈನ್‌ನಲ್ಲಿರಿಸಲಾಗಿದೆ.
ಸಾವನ್ನಪ್ಪುವ ಮೊದಲು 65 ವರ್ಷ ಪ್ರಾಯದ ವೃದ್ಧ ನಗರದ ಮೂರು ಆಸ್ಪತ್ರೆಗಳಿಗೆ ಭೇಟಿ ನೀಡಿದ್ದರು. 65  ವರ್ಷದ ವೃದ್ಧನ ನೇರ ಸಂಪರ್ಕಕ್ಕೆ ಬಂದಿದ್ದ ಅವರ ಕುಟುಂಬದ 20 ಮಂದಿ ಅಲ್ಲದೆ ಪರೋಕ್ಷ  ಸಂಪರ್ಕದಲ್ಲಿದ್ದ 33 ಮಂದಿ ಸೇರಿ 53 ಮಂದಿಯನ್ನು  ಕ್ವಾರಂಟೈನ್‌ನಲ್ಲಿ ಇಡಲಾಗಿದೆ.ವೃದ್ಧನಲ್ಲಿ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಳೆದ ವಾರ ಅವರು ರಾಜೀವ್ ಗಾಂಧಿ ಆಸ್ಪತ್ರೆಗೆ ಬಂದಿದ್ದಾರೆ. ಅಲ್ಲಿ ಅವರಿಗೆ ನ್ಯೂಮೋನಿಯಾ ಲಕ್ಷಣ ಕಾಣಿಸಿಕೊಂಡಿದೆ ಎಂದು ವೈದ್ಯರು ಕೊರೊನಾ ಪರೀಕ್ಷೆಗೆ ಮುಂದಾಗಿದ್ದಾರೆ. ಪರೀಕ್ಷೆ ನಡೆಸಿದ ವೈದ್ಯರು ವೃದ್ಧನಿಗೆ ಆಸ್ಪತ್ರೆಗೆ ದಾಖಲಾಗಿ ಎಂದು ತಿಳಿಸಿದ್ದಾರೆ.
ಆದರೆ ಆತ ನನಗೆ ಹೃದ್ರೋಗ ಸಮಸ್ಯೆಯಿದ್ದು  ನಾನು  ಜಯದೇವ ಆಸ್ಪತ್ರೆಗೆ ಹೋಗುತ್ತೇನೆ ಎಂದು ಹೇಳಿ ಹೋಗಿದ್ದಾರೆ.  ಜಯದೇವ ಆಸ್ಪತ್ರೆಯಲ್ಲಿ ಸಾಮಾನ್ಯ ರೋಗಿಯಾಗಿದ್ದ  ವೃದ್ಧನಿಗೆ  ಜಯದೇವ ಆಸ್ಪತ್ರೆಯವರು ಕೂಡ ರಾಜೀವ್ ಗಾಂಧಿಗೆ ಹೋಗಿ ಎಂದು ಕಳುಹಿಸಿಕೊಟ್ಟಿದ್ದಾರೆ. ಅದನ್ನು  ನಿರ್ಲಕ್ಷ್ಯ ಮಾಡಿದ  ವೃದ್ಧ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ಹೋಗಿದ್ದು ಅಲ್ಲಿಯೂ ರಾಜೀವ್ ಗಾಂಧಿಗೆ ಹೋಗುವಂತೆ ಕಳುಹಿಸಿದ್ದಾರೆ.  
ಕೊನೆಗೆ  ವೃದ್ಧ ರಾಜೀವ್ ಗಾಂಧಿ ಆಸ್ಪತ್ರೆಗೆ ಬಂದಿದ್ದಾರೆ. ಆದರೆ ಎರಡನೇ ಬಾರಿ ಆಸ್ಪತ್ರೆಗೆ  ಬಂದಾಗ ಆರೋಗ್ಯ ಸಂಪೂರ್ಣ ಹದಗೆಟ್ಟಿತ್ತು. ಕೊನೆಗೆ ವೃದ್ಧನನ್ನು ಶನಿವಾರ  ರಾತ್ರಿ 8:30  ರ ವೇಳೆಗೆ ದಾಖಲು  ಮಾಡಿಕೊಳ್ಳಲಾಗಿದೆ.  ಚಿಕಿತ್ಸೆ ಪಡೆಯುತ್ತಿದ್ದ ವೃದ್ಧ ನಿನ್ನೆ  ಬೆಳಗ್ಗೆ ವಾರ್ಡಿನಲ್ಲಿದ್ದ ಶೌಚಾಲಯಕ್ಕೆ  ತೆರಳಿದ್ದು ಅಲ್ಲಿಯೇ ಕುಸಿದು  ಬಿದ್ದಿದ್ದಾರೆ. ತಕ್ಷಣ ಅವರನ್ನು ವೈದ್ಯರು ಐಸಿಯುಗೆ ಸಾಗಿಸಿ ನೀಡಿದ  ಚಿಕಿತ್ಸೆ  ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಸಾವನ್ನಪ್ಪಿದ ಇವರು ಹೃದ್ರೋಗದ ಸಮಸ್ಯೆಯಿಂದಲೂ  ಬಳಲುತ್ತಿದ್ದರು. ಇವರನ್ನು ಪ್ರತ್ಯೇಕ ಚಿಕಿತ್ಸಾ ಕೇಂದ್ರದಲ್ಲಿ ದಾಖಲಿಸಿ, ಕೊರೊನಾ  ಪರೀಕ್ಷೆ ಮಾಡಲಾಗಿದ್ದು, ಅವರ ವರದಿಯಲ್ಲಿ ಸೋಂಕು ದೃಢಪಟ್ಟಿದೆ.ವೃದ್ಧ ಭೇಟಿ ನೀಡಿದ ಆಸ್ಪತ್ರೆಯ ವೈದ್ಯರು ಹಾಗೂ ಆತ ಯಾವುದರಲ್ಲಿ ಪ್ರಯಾಣ ಬೆಳೆಸಿದ್ದ ಎಂಬ ಎಲ್ಲ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ. ಸೋಂಕಿತನ ಜೊತೆ 20 ಜನ ಪ್ರಾಥಮಿಕ ಸಂಪರ್ಕ ಹೊಂದಿರುವ ಬಗ್ಗೆ ಮಾಹಿತಿ  ಲಭ್ಯವಾಗಿದೆ. ಹೀಗಾಗಿ ಪ್ರಾಥಮಿಕ ಕ್ವಾರಂಟೈನ್ ಕಳುಹಿಸಿ ಪರೋಕ್ಷವಾಗಿ ಸಂಪರ್ಕ   ಹೊಂದಿರುವವರ 33 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಮಧ್ಯೆ ದೆಹಲಿಯಿಂದ ರೈಲಿನಲ್ಲಿ‌ ಸಂಚರಿಸಿದ‌  ದೊಡ್ಡಬಳ್ಳಾಪುರದ ಯುವಕನೊಬ್ಬನಿಗೆ ನಿನ್ನೆ  ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಮಧುರೆ  ಹೋಬಳಿ ಕೋಡಿಪಾಳ್ಯದ 39 ವರ್ಷದ ವ್ಯಕ್ತಿಯೊಬ್ಬರು ಉದ್ಯೋಗ ನಿಮಿತ್ತ ದೆಹಲಿಯಿಂದ  ಹಿಂದಿರುಗಿದ್ದರು. ಅಲ್ಲಿಂದ ಬಂದ ನಂತರ ಹೋಂ ಕ್ವಾರಂಟೈನ್‌ ನಲ್ಲಿದ್ದರು. ಆದರೆ, ಎರಡು  ದಿನಗಳಿಂದ ಕೆಮ್ಮು, ಜ್ವರ ಕಾಣಿಸಿಕೊಂಡಿದ್ದರಿಂದ ರಕ್ತದ ಮಾದರಿಯನ್ನು ಪರೀಕ್ಷೆಗೆ  ಕಳುಹಿಸಲಾಗಿತ್ತು ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಇದು ಪ್ರಥಮ ಪ್ರಕರಣವಾಗಿದ್ದು  ಇದರಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಆರಕ್ಕೆ  ಏರಿಕೆಯಾಗಿದೆ.ಕೊರೊನಾ ವೈರಸ್‌ ಸೋಂಕು ಗ್ರಾಮದಲ್ಲಿ ಇತರರಿಗೆ ಹರಡದಂತೆ  ತಾಲ್ಲೂಕು ಆಡಳಿತ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ತಹಶೀಲ್ದಾರ್  ಟಿ.ಎಸ್‌.ಶಿವರಾಜ್‌ ಆರೋಗ್ಯ ಇಲಾಖೆ, ಪೊಲೀಸ್‌ ಇಲಾಖೆ ಅಧಿಕಾರೊಗಳೊಂದಿಗೆ ಗ್ರಾಮಕ್ಕೆ  ಭೇಟಿ ನೀಡಿ ಸೋಂಕು ಹರಡದಂತೆ ಕೈಗೊಳ್ಳಬೇಕಿರುವ ಕ್ರಮಗಳ ಕುರಿತಂತೆ ಪ್ರಾಥಮಿಕ ಹಂತದ ಸಭೆ  ನಡೆಸಿದರು. ಸೋಂಕು ದೃಢಪಟ್ಟಿರುವ ವ್ಯಕ್ತಿಯ ಮನೆಯಲ್ಲಿ ಪತಿ, ಮಗಳು ಇದ್ದಾರೆ. ಈ  ಇಬ್ಬರನ್ನು ನಗರದ ಸರ್ಕಾರಿ ಆಸ್ಪತ್ರೆ ನಿಗಾ ಘಟಕದಲ್ಲಿ ಇಡಲಾಗಿದೆ. ಗ್ರಾಮದಲ್ಲಿನ  ಎಲ್ಲರನ್ನು ಪರೀಕ್ಷೆಗೆ ಒಳಪಡಿಸುವ ಬಗ್ಗೆಯೂ ಚಿಂತನೆ ನಡೆದಿದೆ ಎಂದು ಆರೋಗ್ಯ ಇಲಾಖೆ  ಅಧಿಕಾರಿಗಳು ತಿಳಿಸಿದರು.