ಬೆಂಗಳೂರು, ಮೇ 8,ಬೆಂಗಳೂರು ನಗರದಲ್ಲಿ ಕೋವಿಡ್ 19 ಸೋಂಕು ಹರಡುವುದನ್ನು ಹತ್ತಿಕ್ಕುವ ಸಲುವಾಗಿ ನಗರಾದ್ಯಂತ ಆರೋಗ್ಯ ಸಮೀಕ್ಷೆ ನಡೆಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಂದಾಗಿದೆ. ಇದಕ್ಕಾಗಿ ಬಿಬಿಎಂಪಿ 4500ಕ್ಕೂ ಹೆಚ್ಚು ಸಮೀಕ್ಷರಿಗೆ ತರಬೇತಿ ನೀಡಿದೆ. ಇವರು ಶುಕ್ರವಾರದಿಂದಲೇ ಮನೆ ಮನೆಗೆ ತೆರಳಿ ಜನರ ಆರೋಗ್ಯ ಮಾಹಿತಿ ಕಲೆ ಹಾಕಲಿದ್ದಾರೆ.ಶೀತ ಜ್ವರದ ಲಕ್ಷಣ (ಐಎಲ್ಐ) ಹಾಗೂ ತೀವ್ರ ಉಸಿರಾಟದ ಸಮಸ್ಯೆ (ಎಸ್ಎಆರ್ಐ) ಸಮಸ್ಯೆ ಹೊಂದಿರುವವರು, ಗರ್ಭಿಣಿಯರು, ಮಧುಮೇಹ , ರಕ್ತದೊತ್ತಡದಿಂದ ಬಳಲುತ್ತಿರುವವರು, 65 ವರ್ಷ ಮೇಲ್ಪಟ್ಟವನ್ನು ಗುರುತಿಸಿ ಅವರನ್ನು ಕೋವಿಡ್-19 ಸೋಂಕಿನಿಂದ ರಕ್ಷಿಸುವ ಸಲುವಾಗಿ ಈ ಸಮೀಕ್ಷೆ ಕೈಗೊಳ್ಳಲಾಗಿದೆ. ಕಂಟೈನ್ಮೆಂಟ್ ವಲಯಗಳನ್ನು ಹೊರತಾಗಿ ಉಳಿದೆಲ್ಲ ಕಡೆ ಎಲ್ಲಾ ಕುಟುಂಬಗಳ ಸಾರ್ವತ್ರಿಕ ಆರೋಗ್ಯ ಸಮೀಕ್ಷೆ ನಡೆಸಲಾಗುತ್ತಿದೆ. ಬೂತ್ ಮಟ್ಟದ, ಮತಗಟ್ಟೆ ಮಟ್ಟದ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿರುವ ಸರ್ಕಾರಿ, ಅನುದಾನಿತ, ಖಾಸಗಿ ಮತ್ತು ಬಿಬಿಎಂಪಿ ಶಾಲೆಗಳ ಶಿಕ್ಷಕರನ್ನೊಳಗೊಂಡ ಆರೋಗ್ಯ ಸಮೀಕ್ಷೆ ತಂಡ ರಚಿಸಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜನರು ಸಮೀಕ್ಷಾ ತಂಡದೊಂದಿಗೆ ಸಹಕರಿಸಿ ಕೋವಿಡ್-19 ಅನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಈ ಕಾರ್ಯದಲ್ಲಿ ಕೈ ಜೋಡಿಸಬೇಕು ಎಂದು ಬಿಬಿಎಂಪಿ ಸಾರ್ವಜನಿಕರಲ್ಲಿ ಮನವಿ ಮಾಡಿದೆ.