ಲಂಡನ್ 09: ತಂಡದ ಒಂದಿಬ್ಬರು ಆಟಗಾರರ ಹುರಿದುಂಬಿಸುವುದಕ್ಕಿಂತ ಇಡೀ ತಂಡಕ್ಕೆ ಪ್ರೋತ್ಸಾಹ ನೀಡಬೇಕು ಎಂದು ಅಭಿಮಾನಿಗಳಿಗೆ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮನವಿ ಮಾಡಿದ್ದಾರೆ.
ಲಂಡನ್ ನಲ್ಲಿರುವ ಭಾರತದ ರಾಯಭಾರ ಕಚೇರಿಯಲ್ಲಿ ಭಾರತೀಯ ಕ್ರಿಕೆಟ್ ತಂಡಕ್ಕೆ ಆತಿಥ್ಯವಹಿಸಲಾಗಿತ್ತು. ಈ ವೇಳೆ ಕ್ರಿಕೆಟಿಗರು ಮತ್ತು ತಂಡದ ಸಿಬ್ಬಂದಿಗೆ ರಾಯಭಾರ ಕಚೇರಿಯಲ್ಲಿ ಔತಣಕೂಟ ಏರ್ಪಡಿಸಲಾಗಿತ್ತು. ಈ ವೇಳೆ ನೆರೆದಿದ್ದ ಮಾಧ್ಯಮಗಳೊಂದಿಗೆ ಮಾತನಾಡಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ತಂಡಕ್ಕೆ ಎಂದಿಗೂ ಅಭಿಮಾನಿಗಳ ಪ್ರೋತ್ಸಾಹವೇ ಮುಖ್ಯವಾಗುತ್ತದೆ ಎಂದು ಹೇಳಿದರು.
'ತಂಡದ ಒಂದಿಬ್ಬರು ಆಟಗಾರರಿಗೆ ಮಾತ್ರ ಬೆಂಬಲ ನೀಡುವುದಕ್ಕಿಂತ ಇಡೀ ತಂಡಕ್ಕೆ ಪ್ರೋತ್ಸಾಹ ನೀಡಬೇಕು. ಇದರಿಂದ ಆಟಗಾರರು ಉತ್ತೇಜಿತರಾಗುತ್ತಾರೆ. ಯಾವುದೇ ಪಂದ್ಯವನ್ನು ಗೆಲ್ಲಬೇಕಾದರೂ ಅದಕ್ಕೆ ಇಡೀ ತಂಡದ ಬೆಂಬಲ ಮುಖ್ಯವಾಗುತ್ತದೆ. ಏಕಾಂಗಿಯಾಗಿ ಯಾವುದೇ ಪಂದ್ಯವನ್ನೂ ಗೆಲ್ಲಲು ಸಾಧ್ಯವಿಲ್ಲ. ನಾವು ಒಂದು ತಂಡವಾಗಿ ಆಡಲು ಇಚ್ಛಿಸುತ್ತೇವೆ. ಹೀಗಾಗಿ ನಮ್ಮಲ್ಲಿನ ಒಂದಿಬ್ಬರನ್ನು ಹುರಿದುಂಬಿಸುವುದಕ್ಕಿಂತ ಇಡೀ ತಂಡವನ್ನು ಅಭಿಮಾನಿಹಗಳು ಬೆಂಬಲಿಸಬೇಕು ಎಂದು
ಹೇಳಿದರು.
ಅಂತೆಯೇ ಎಡ್ಜ್ ಬ್ಯಾಸ್ಟನ್ ಟೆಸ್ಟ್ ಸೋಲಿನ ಕುರಿತು ಮಾತನಾಡಿದ ಕೊಹ್ಲಿ, ಜಯಕ್ಕೆ ತುಂಬಾ ಹತ್ತಿರವಿದ್ದಾಗ ನಾವು ಆ ಪಂದ್ಯವನ್ನು ಕಳೆದುಕೊಂಡೆವು. ಆದರೆ ಕ್ರಿಕೆಟ್ ಕಾಶಿ ಲಾಡ್ರ್ಸ ನಲ್ಲಿ ಅದು ಪುನಾರಾವರ್ತನೆಯಾಗುವುದಿಲ್ಲ ಎಂದು ಹೇಳಿದರು.
ಇದೇ ವೇಳೆ ಮಾತನಾಡಿದ ರಾಯಭಾರ ಕಚೇರಿಯ ಲಂಡನ್ ಭಾರತದ ರಾಯಭಾರಿ ವೈಕೆ ಸಿನ್ಗಾ ಅವರು, ಲಾಡ್ರ್ಸ ಟೆಸ್ಟ್ ಪಂದ್ಯವನ್ನು ನಾವು ಗೆಲ್ಲಲ್ಲಿದ್ದು, ಸರಣಿಯನ್ನೂ ಕೈವಶ ಮಾಡಿಕೊಳ್ಳಲ್ಲಿದ್ದೇವೆ ಎಂದು ಹೇಳಿದರು. ಅಂತೆಯೇ ಕೊಹ್ಲಿ ಕುರಿತು ಮಾತನಾಡಿದ ಸಿನ್ಹಾ, ಕೊಹ್ಲಿ ವಿಶ್ವದ ಶ್ರೇಷ್ಠ ಬ್ಯಾಟ್ಸಮನ್ ಎಂದು ಹೇಳಿದರು.