ಕಟ್ಟೀಮನಿ ದುಡಿಯುವ ಜನಗಳ ಸಾಹಿತಿ : ಡಾ. ಯಲ್ಲಪ್ಪ ಹಿಮ್ಮಡಿ

ಕಟ್ಟೀಮನಿ ದುಡಿಯುವ ಜನಗಳ ಸಾಹಿತಿ : ಡಾ. ಯಲ್ಲಪ್ಪ ಹಿಮ್ಮಡಿ  Kattimani is a writer for the working people: Dr. Yallappa Himmadi

ಬೆಳಗಾವಿ 04: ದೇಶದಲ್ಲಿ ಮೊದಲ ಬಾರಿಗೆ ಬದುಕಿನ ಬದಲಾವಣೆಗಾಗಿ ಕಲೆ ಸಾಹಿತ್ಯಾದಿಗಳನ್ನು ದುಡಿಸಿಕೊಳ್ಳಬೇಕೆಂದು ಬಲವಾಗಿ ಪ್ರತಿಪಾದಿಸಿದ್ದು ಪ್ರಗತೀಶೀಲ ಸಾಹಿತ್ಯ ಚಳುವಳಿ. ಪ್ರಗತೀಶೀಲ ಚಳುವಳಿಯ ಪ್ರತಿಪಾದಕರಲ್ಲಿ ಕನ್ನಡದ ಬಸವರಾಜ ಕಟ್ಟಿಮನಿಯವರು ಅಗ್ರಗಣ್ಯರಾಗಿದ್ದರು. ಗ್ರಾಮೀಣ ಭಾಗದಿಂದ ಬಂದ ಅವರು ದುಡಿಯುವ ಜನರ ಪರವಾಗಿ ತಮ್ಮೆಲ್ಲ ಕಥೆ ಕಾದಂಬರಿಗಳನ್ನು ಬರೆದು ಜನಗಳ ಸಾಹಿತಿ ಎಂದು ಪ್ರಸಿದ್ಧರಾಗಿದ್ದರು ಎಂದು ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಅಧ್ಯಕ್ಷ ಯಲ್ಲಪ್ಪ ಹಿಮ್ಮಡಿ ಹೇಳಿದರು.   ಅವರಿಂದು ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ವತಿಯಿಂದ  ಕೆಎಲ್‌ಇ ಸಂಸ್ಥೆಯ ಲಿಂಗರಾಜ ಮಹಾವಿದ್ಯಾಲಯದ ಕನ್ನಡ ವಿಭಾಗದ ಸಹಯೋಗದಲ್ಲಿ ಆಯೋಜಿಸಿದ್ದ ಬಸವರಾಜ ಕಟ್ಟೀಮನಿಯವರ ಸಾಹಿತ್ಯದಲ್ಲಿ ಪ್ರಗತೀಶೀಲತೆ ಎನ್ನುವ ಒಂದು ದಿನದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.  

ಸಮಾಜ ವ್ಯವಸ್ಥೆಯ ವಿಷದ ಮತ್ತು ವಿಷಮತೆಯ ಬೇರು ಮೊದಲು ನಾಶವಾಗಬೇಕು. ಅನಂತರ ನವ ನಿರ್ಮಾಣ ಸಾಧ್ಯ, ಅದಕ್ಕಾಗಿ ಜನಮನ ಸಿದ್ಧಗೊಳಿಸುವುದೇ ಸಾಹಿತಿಗಳ ಮತ್ತು ಇನ್ನಿತರ ಬರಹಗಾರರ ಕರ್ತವ್ಯವೆಂದು ಕಟ್ಟೀಮನಿಯವರು ಜೀವನದ ಕೊನೆಯವರೆಗೂ ನಂಬಿಕೊಂಡು ಬರೆದರು ಎಂದು ಹಿಮ್ಮಡಿ ತಿಳಿಸಿದರು.  

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಎಚ್ ಎಸ್ ಮೇಲಿನಮನಿ ಮಾತನಾಡಿ ಬೀದಿಗೆ ಬಿದ್ದವರು, ಗಿರಣಿ ಕಾರ್ಮಿಕರು, ಕೂಲಿಕಾರರು, ಮಹಿಳೆಯರು ಮತ್ತು ದಲಿತರ ಪರವಾಗಿ ಅತಿ ಹೆಚ್ಚು ಕಥೆ ಕಾದಂಬರಿ ಬರೆದವರಲ್ಲಿ ಬಸವರಾಜ ಕಟ್ಟೀಮನಿಯವರು ಮೊದಲಿಗರಾಗಿದ್ದರು. ಅವರು ಬರೆದಂತೆ ಬದುಕಿದ ಬದ್ಧತೆಯ ಸಾಹಿತಿಯಾಗಿದ್ದರು ಎಂದರು.       

ಧಾರವಾಡದ ಕನ್ನಡ ಪ್ರಾಧ್ಯಾಪಕಿ ಡಾ. ಸರಸ್ವತಿ ಭಗವತಿ ಅವರು ಬಸವರಾಜ ಕಟ್ಟೀಮನಿಯವರ ಕಥೆಗಳಲ್ಲಿ ಪ್ರಗತೀಶೀಲತೆ ವಿಷಯ ಕುರಿತು ಪ್ರಬಂಧ ಮಂಡಿಸಿ, ಪ್ರಗತೀಶೀಲ ವಿಚಾರಗಳ ಪ್ರತಿಪಾದನೆಯ ಜೊತೆಗೆ ಕನ್ನಡದಲ್ಲಿ ಕಥೆ ಕಾದಂಬರಿಗಳ ಬಹುದೊಡ್ಡ ಓದುಗ ವರ್ಗವನ್ನು ನಿರ್ಮಾಣ ಮಾಡಿದ್ದು ಬಸವರಾಜ ಕಟ್ಟೀಮನಿ ಮತ್ತು ಪ್ರಗತಿಲ ಸಾಹಿತಿಗಳು ಎಂದು ವಿವರಿಸಿದರು.ವಿಚಾರ ಸಂಕಿರಣದಲ್ಲಿ ಸೋಮನಾಥ ಚಿಕ್ಕನರಗುಂದ, ಪಿ ಜಿ ಕೆಂಪಣ್ಣವರ,  ಆಶಾ ಯಮಕನಮರಡಿ, ಮಹೇಶ್ ಗುರನಗೌಡರ,  ಶಶಿಕಾಂತ ತಾರದಾಳೆ, ಅಡಿವೆಪ್ಪ ಇಟಗಿ, ಸಂತೋಷ್ ಚೌವ್ಹಾಣ್, ರೋಹಿಣಿ ಹಣಬರಟ್ಟಿ, ಸ್ವಾತಿ ಮಾಳಿಗೆ, ವರ್ಷಾ ಮುರಗೋಡ, ಜಾನ್ವಿ ಬೆಳ್ಳೆ, ಸೃಷ್ಟಿ ಕೊರೆನ್ನವರ ಮುಂತಾದವರು ಉಪಸ್ಥಿತರಿದ್ದರು. 

ಪ್ರತಿಷ್ಠಾನದ ಸದಸ್ಯರಾದ ಕೆ ಆರ್ ಸಿದ್ದಗಂಗಮ್ಮ ಅವರು ಆಶಯ ನುಡಿಗಳನ್ನಾಡಿದರು. ಆರಂಭದಲ್ಲಿ ಅಕ್ಷಯ ಪಾಟೀಲ್ ಕೀರ್ತನೆ ಹಾಡಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಎಚ್ ಎಮ್ ಚನ್ನಪ್ಪಗೋಳ ಸ್ವಾಗತಿಸಿದರು. ಡಾ. ಪಾಂಡುರಂಗ ಗಾಣಿಗೇರ ವಂದಿಸಿದರು. ಕುಮಾರಿ ನಾಗವೇಣಿ ದೂದ್ಯಾಗೋಳ ಮತ್ತು ತ್ರಿವೇಣಿ ಪೂಜೇರ ಕಾರ್ಯಕ್ರಮ ನಿರೂಪಿಸಿದರು.