ಕಾಶ್ಮೀರ ಪರಿಸ್ಥಿತಿ: ಇಮ್ರಾನ್ ಖಾನ್ ಮನವಿ ತಿರಸ್ಕರಿಸಿದ ಟ್ರಂಪ್

ವಾಷಿಂಗ್ಟನ್,  ಆ 17       ಕಾಶ್ಮೀರದ ಬಿಗುವಿನ ಪರಿಸ್ಥಿತಿ ತಿಳಿಗೊಳಿಸಲು  ಭಾರತ - ಪಾಕಿಸ್ತಾನ  ದ್ವಿಪಕ್ಷೀಯವಾಗಿಯೇ ಪ್ರಯತ್ನ ನಡೆಸಬೇಕು, ಮೂರನೆಯವರಿಗೆ ಜಾಗವಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಾಕಿಸ್ತಾನಕ್ಕೆ ಖಡಕ್  ಎಚ್ಚರಿಕೆ ನೀಡಿದ್ದಾರೆ.  

ಈ ಕುರಿತು ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ  ಅವರು, ಕಾಶ್ಮೀರದ ವಿಚಾರವಾಗಿ ಮಧ್ಯಸ್ಥಿಕೆ ವಹಿಸಲು ಸಿದ್ಧರಿಲ್ಲ. ಈ ವಿಚಾರವನ್ನು ಎರಡೂ ದೇಶಗಳೇ ಕುಳಿತು ಪರಸ್ಪರ  ದ್ವಿಪಕ್ಷೀಯವಾಗಿಯೇ ಪರಿಹರಿಸಿಕೊಳ್ಳಬೇಕು ಎಂದು ನೇರ , ಸ್ಪಷ್ಟ ಮಾತುಗಳಲ್ಲಿ ತಿಳಿಸಿದ್ದಾರೆ. 

ಭಾರತ ಸರ್ಕಾರ ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ವಾಪಸ್ ಪಡೆದ ನಂತರ ಕಾಶ್ಮೀರದಲ್ಲಿ ಪರಿಸ್ಥಿತಿ ಬಿಗಡಾಯಿಸಿದ್ದು ಇದರ ನಿವಾರಣೆಗೆ ವಿಶ್ವ ಸಮುದಾಯ ಮಧ್ಯಪ್ರವೇಶ ಮಾಡಬೇಕೆಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಮನವಿ ಮಾಡಿದ್ದರೂ  ಅವರ ಮನವಿಗೆ ಚೀನಾ ಹೊರತುಪಡಿಸಿದರೆ ಬೇರೆ ದೇಶಗಳು ಯಾವುದೇ  ಉತ್ಸಾಹ ತೋರಿಲ್ಲ . 

ಇದು ದ್ವಿಪಕ್ಷೀಯ ವಿಚಾರವಾಗಿದ್ದು ಭಾರತ ಮತ್ತು ಪಾಕಿಸ್ತಾನ ದೇಶಗಳೇ ಬಗೆಹರಿಸಿಕೊಳ್ಳಬೇಕು. ಇದರಲ್ಲಿ ಮೂರನೆಯವರು ತಲೆಹಾಕುವುದು ಸರಿ ಹೋಗುವುದಿಲ್ಲ ಎಂದೂ ರಷ್ಯಾ ಸ್ಪಷ್ಟವಾಗಿ ಹೇಳಿದೆ. 

ಕಾಶ್ಮೀರ ವಿವಾದವನ್ನು ಪರಿಹರಿಸಲು ಮಧ್ಯಸ್ಥಿಕೆ ವಹಿಸುವಂತೆ ಭಾರತ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿಕೊಂಡಿದ್ದರು ಎಂದು ಟ್ರಂಪ್ ಹೇಳಿ, ಭಾರೀ ದೊಡ್ಡ ಮಟ್ಟದ ಸುದ್ದಿಗೆ ಕಾರಣವಾಗಿದ್ದರು. ಆದರೆ ಈ ವಿಷಯವನ್ನು ಭಾರತ ಸ್ಪಷ್ಟವಾಗಿ ತಳ್ಳಿಹಾಕಿತ್ತು. 

ಈಗ ವೈರುಧ್ಯವೆಂದರೆ ಕಾಶ್ಮೀರ ವಿವಾದವನ್ನು ಬಗೆಹರಿಸಲು ಅಮೆರಿಕ ಅಧ್ಯಕ್ಷ ಟ್ರಂಪ್ ಸೇರಿದಂತೆ ವಿಶ್ವ ಸಮುದಾಯ ಮುಂದೆ ಬರಬೇಕೆಂದು ಪಾಕ್ ಪ್ರಧಾನಿ ಪರಿಪರಿಯಾಗಿ ಮನವಿ ಮಾಡಿದ್ದರೂ ಇದಕ್ಕೆ ಟ್ರಂಪ್ ಸೊಪ್ಪು ಹಾಕಿಲ್ಲ, ವಿಶ್ವ ಸಮುದಾಯ ಕೂಡ ಪಾಕ್ ಮನವಿಯನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ.  ಈ ವಿವಾದವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗುವುದಾಗಿ ಒಂದು ರೀತಿ ಭೀಷ್ಮ ಪ್ರತಿಜ್ಞೆ ಮಾಡಿದ್ದ ಇಮ್ರಾನ್ ಖಾನ್ ಅವರಿಗೆ ಟ್ರಂಪ್ ನಡೆ ತಣ್ಣೀರೆರಚಿದೆ. 

ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿರುವುದು ಭಾರತ ಆಂತರಿಕ ವಿಚಾರವಾಗಿದ್ದು ಇದರ ಬಗ್ಗೆ ಬೇರೆ ದೇಶಗಳು ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ ಎಂದು ವಿಶ್ವಸಂಸ್ಥೆಯ ಭಾರತದ ಪ್ರತಿನಿಧಿ ಸಯ್ಯದ್ ಅಕ್ಬರುದ್ದೀನ್  ಮೋದಿ ಸರಕಾರದ  ನಿಲುವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.