ಸಂಸ್ಕಾರ, ಸಂಸ್ಕೃತಿ ವೃದ್ಧಿಸುವ ಕಾರ್ಯ ಕಸಾಪ ಮಾಡುತ್ತಿದೆ: ಸಂಗನಬಸವ ಸ್ವಾಮಿ

ಸಂಸ್ಕಾರ, ಸಂಸ್ಕೃತಿ ವೃದ್ಧಿಸುವ ಕಾರ್ಯ ಕಸಾಪ ಮಾಡುತ್ತಿದೆ: ಸಂಗನಬಸವ ಸ್ವಾಮಿ Kasapa is doing the work of enhancing culture and ethics: Sangana Basava Swamy

ಶಿಗ್ಗಾವಿ 08: ಸಮಾಜಕ್ಕೆ ಮೌಲ್ಯಗಳನ್ನು ತುಂಬುವ ಕಾರ್ಯಗಳ ಜೊತೆಗೆ ಜ್ಞಾನ, ದಾನಗಳ ಸಂಗಮವಾಗುವ ಮೂಲಕ ಪ್ರತಿಯೊಬ್ಬರಲ್ಲಿ ಸಂಸ್ಕಾರ, ಸಂಸ್ಕೃತಿಗಳು ವೃದ್ಧಿಸುವ ಕಾರ್ಯಗಳನ್ನ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಮಾಡುತ್ತಿದೆ ಎಂದು ಶಿಗ್ಗಾವಿ  ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ಹೇಳಿದರು. 

ಪಟ್ಟಣದ ವಿರಕ್ತಮಠದಲ್ಲಿ ಶಿಗ್ಗಾವಿಯ ಕನ್ನಡ ಸಾಹಿತ್ಯ ಪರಿಷತ್, ಶರಣ ಸಾಹಿತ್ಯ ಪರಿಷತ್ ಕಾರ್ಯನಿರತ ಪತ್ರಕರ್ತರ ಸಂಘ, ಪಂ. ಪುಟ್ಟರಾಜ ಕವಿಗವಾಯಿಗಳವರ ಕಲಾಸಂಸ್ಥೆ, ಪೃಥ್ವಿ ಆರಿ ವರ್ಕ್‌ ಇವರ ಸಹಯೋಗದಲ್ಲಿ ನಡೆದ ಆಯ್ದ ಬರಹಗಾರರ ಹೊಸ ಪುಸ್ತಕಗಳ ವಿಮರ್ಶೆ, ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಾಲೂಕಿನ ಕಸಾಪ ಸಂಘಟನೆ ಶಾಲು, ಮಾಲಿಯ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತು ನೀಡದೇ ಬರಹಗಾರರ ಪುಸ್ತಗಳನ್ನು ಓದುಗ ದೊರೆಗಳಿಗೆ ತಲಪಿಸಿ ತನ್ನ ವಿಶಿಷ್ಟ ಕಾರ್ಯಕ್ರಮಗಳ ಮೂಲಕ ನಾಡು-ನುಡಿಯ ಸೇವೆ ಮಾಡುತ್ತಿದೆ, ಸಾಹಿತ್ಯದಲ್ಲಿ ತನ್ನದೇ ಆದ ನೈತಿಕತೆ ಇದ್ದು ಅದನ್ನ ಮುಂದುರೆಸಿಕೊಂಡು ಹೋಗುತ್ತಿದೆ ಎಂದರು. 

ತಾಲೂಕಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅರುಣ ಹುಡೇದಗೌಡ್ರ ಮಾತನಾಡಿ, ಕಸಾಪ ಸಂಘಟನೆ ಸಮಾಜದ ಎಲ್ಲರನ್ನು ಒಳಗೊಂಡ ವಿಶಾಲ ವ್ಯಾಪ್ತಿಯನ್ನು ಹೊಂದಿದೆ. ಸಾಹಿತ್ಯ ಸೌರಭ ಮರುಕಳಿಸುವ ಮೂಲಕ ಹೊಸ ಬರಹಗಾರರನ್ನು ಪ್ರೋತ್ಸಾಹಿಸಿ, ಹಿರಿಯ ಸಾಹಿತಿಗಳ ಅನುಭವಗಳನ್ನು ಪಸರಿಸುವ ಕಾರ್ಯಗಳಾಗಬೇಕು. ತಾಲೂಕು ಪುಸ್ತಕಗಳ ಮಟ್ಟದಲ್ಲಿ ವಿಮರ್ಶೆ ನಡೆಯುತ್ತಿರುವುದು ಶ್ಲಾಘನೀಯ ಎಂದರು.  

ಕಸಾಪ ಅಧ್ಯಕ್ಷ ನಾಗಪ್ಪ ಬೆಂತೂರ ಅಧ್ಯಕ್ಷತೆ ವಹಿಸಿ ಮಾತನಾಡಿ, ಸೇವಾ ಮನೋಭಾವದ ನಿಟ್ಟಿನಲ್ಲಿ ಕನ್ನಡ ಕಟ್ಟುವ ಕಾರ್ಯ ನಡೆದಿದೆ. ತಾಲೂಕಿನ ವಿವಿಧ ಸಂಘಟನೆಗಳ ಮತ್ತು ಗಣ್ಯರ ಸಹಕಾರದಿಂದ ಕಸಾಪ ಹಲವಾರು ಯಶಸ್ವಿ ಕಾರ್ಯಕ್ರಮ ಮಾಡಲು ಸಾಧ್ಯವಾಗುತ್ತಿದೆ ಎಂದು ಹೇಳಿದರು. 

ಉಪನ್ಯಾಸಕ ಶಶಿಕಾಂತ ರಾಠೋಡ ಅವರು ಶಿವಾನಂದ ಮ್ಯಾಗೇರಿಯವರ ಶಿಗ್ಗಾವಿ ಊರು ಸಾಹಿತ್ಯ ನೂರು ಕೃತಿಯನ್ನು ವಿಮರ್ಶಿಸಿದರು. ಶಿಕ್ಷಕ ದೇವರಾಜ ಹುಣಸಿಕಟ್ಟಿ ಅವರು ಶಕುಂತಲಾ ಕೋಣನವರ ಅವರ ಚಿತ್ತದೊಳಗಿನ ಚಿತ್ತಾರ ಕೃತಿಯನ್ನು ವಿಮರ್ಶಿಸಿದರು. 

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿನ ಸಾಧನೆಗೈದ ಪತ್ರಕರ್ತ ಸಂಘದ ಅಧ್ಯಕ್ಷ ಪರಮೇಶ ಲಮಾಣಿ, ಪತ್ರಕರ್ತ ಬಸವರಾಜ ಹೊನ್ನಣ್ಣನವರ, ರೈತ ಸಂಘಟನೆ ಉಪಾಧ್ಯಕ್ಷ ಶಂಕರಗೌಡ ಪಾಟೀಲ, ಕರವೇ ಜಿಲ್ಲಾ ಮಹಿಳಾ ಅಧ್ಯಕ್ಷೆ ವಿಜಯಲಕ್ಷ್ಮಿ ಗುಡೆಮ್ಮಿ ಅವರನ್ನು ಸನ್ಮಾನಿಸಲಾಯಿತು. 

ಶಿವಾನಂದ ಮ್ಯಾಗೇರಿ, ಶಕುಂತಲಾ ಕೋಣನವರ, ಮಾಂತೇಶ ನಾಕ್ಕೋಡಿ, ಫಕ್ಕಿರೇಶ ಕೊಂಡಾಯಿ, ಶಂಭು ಕೇರಿ, ಲಕ್ಷ್ಮೀ ಕಾಡಪ್ಪನವರ, ಬಸವರಾಜ ಶಿಗ್ಗಾವಿ, ಶಶಿಕಾಂತ ರಾಠೋಡ, ಶರೀಫ್ ಮಾಕಪ್ಪನವರ, ದೇವರಾಜ ಹುಣಸಿಕಟ್ಟಿ ಇತರರಿದ್ದರು.