ಕಾರವಾರ ನಗರ ಸಭೆಯಿಂದ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ರಿಂದ 37.09 ಕೋಟಿ ರೂ. ಬಜೆಟ್ ಮಂಡನೆ

ಕಾರವಾರ ನಗರ ಸಭೆಯಿಂದ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ರಿಂದ 37.09 ಕೋಟಿ ರೂ. ಬಜೆಟ್ ಮಂಡನೆ  Karwar City Council presents budget of Rs 37.09 crore from Deputy Commissioner Lakshmi Priya

          ಕಾರವಾರ 29: ಇಲ್ಲಿನ ಕಾರವಾರ ನಗರಸಭೆಯು 2026-27ನೇ ಸಾಲಿನ, 37.09 ಕೋಟಿ ರೂಪಾಯಿಗಳ ಮೊತ್ತದ ಬಜೆಟ್ ನ್ನು ಆಡಳಿತಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ಮಂಡಿಸಿದರು. ಕಾರವಾರ ನಗರಸಭೆಯ ಒಟ್ಟು ಬಜೆಟ್ ನಲ್ಲಿ 21.43 ಲಕ್ಷ ರೂಪಾಯಿಗಳ ಉಳಿತಾಯದ ಆಯವ್ಯಯವನ್ನು ಹೊಂದಿದೆ. ಜಿಲ್ಲಾಧಿಕಾರಿ ಹಾಗೂ ನಗರಸಭೆ ಆಡಳಿತಾಧಿಕಾರಿಯೂ ಆಗಿರುವ ಕೆ. ಲಕ್ಷ್ಮಿಪ್ರಿಯಾ ಅವರು ಈ ಬಜೆಟ್ ಪ್ರತಿಯನ್ನು , ನಗರಸಭೆ ಪೌರಾಯುಕ್ತ ಜಗದೀಶ ಹುಲುಗುಜ್ಜಿ ಅವರಿಗೆ ನೀಡಿದರು. ನಂತರ ಬಜೆಟ್ ವಿವರವನ್ನು ಪೌರಾಯುಕ್ತರು ಓದಿದರು.

          ಈ ಬಾರಿಯ ಮುಂಗಡಪತ್ರದಲ್ಲಿ ಒಟ್ಟು 37.09 ಕೋಟಿ ರೂಪಾಯಿಗಳ ವಾರ್ಷಿಕ ಆದಾಯವನ್ನು ನೀರೀಕ್ಷಿಸಲಾಗಿದ್ದು, ನಗರದ ಅಭಿವೃದ್ಧಿ ಮತ್ತು ಸಾರ್ವಜನಿಕ ಸೇವೆಗಳಿಗಾಗಿ ಒಟ್ಟು 36.87 ಕೋಟಿ ರೂಪಾಯಿಗಳ ವೆಚ್ಚವನ್ನು ಅಂದಾಜಿಸಲಾಗಿದೆ. 31 ವಾರ್ಡ್ಗಳ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಅತ್ಯುತ್ತಮ ಮೂಲಭೂತ ಸೌಕರ್ಯ ಹಾಗೂ ಸ್ವಚ್ಛತೆಯನ್ನು ಒದಗಿಸುವುದಕ್ಕೆ ಈ ಬಜೆಟ್ ನಲ್ಲಿ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ.

          ನಗರಸಭೆಯ ಆದಾಯದ ಮೂಲಗಳಲ್ಲಿ ಆಸ್ತಿ ತೆರಿಗೆಯು ಅತ್ಯಂತ ಪ್ರಮುಖ ಪಾತ್ರ ವಹಿಸಿದೆ. ಕಟ್ಟಡ ಮತ್ತು ಭೂಮಿಯ ಮೇಲಿನ ತೆರಿಗೆಯಿಂದ 5.20 ಕೋಟಿ ರೂಪಾಯಿ ಆದಾಯದ ನೀರೀಕ್ಷೆಯಿದ್ದು, ತೆರಿಗೆ ದಂಡ ಹಾಗೂ ಅನಧಿಕೃತ ಆಸ್ತಿ ತೆರಿಗೆಯಿಂದ 70 ಲಕ್ಷ ರೂಪಾಯಿ ಸಂಗ್ರಹವಾಗುವ ಅಂದಾಜಿದೆ. ವಾಣಿಜ್ಯ ಆಸ್ತಿಗಳ ಲೀಜ್ ಬಾಡಿಗೆ 78 ಲಕ್ಷ ರೂ.ಆದಾಯ : ವಾಣಿಜ್ಯ ಮೂಲಗಳಾದ ಲೀಜ್ ಬಾಡಿಗೆಯಿಂದ 78 ಲಕ್ಷ ರೂಪಾಯಿ, ಮೀನು ಮತ್ತು ತರಕಾರಿ ಮಾರುಕಟ್ಟೆ ಶುಲ್ಕದಿಂದ ಸುಮಾರು 50 ಲಕ್ಷ ರೂಪಾಯಿ ಹಾಗೂ ಇತರ ಬಾಡಿಗೆ ಮೂಲಗಳಿಂದ 20 ಲಕ್ಷ ರೂಪಾಯಿಗಳಷ್ಟು ಹಣ ನೀರೀಕ್ಷಿಸಲಾಗಿದೆ.

           ಇದರೊಂದಿಗ ನೀರು ಸರಬರಾಜು ಶುಲ್ಕದಿಂದ 1.06 ಕೋಟಿ ರೂಪಾಯಿ ಹಾಗೂ ಘನತ್ಯಾಜ್ಯ ನಿರ್ವಹಣಾ ಶುಲ್ಕದಿಂದ 96 ಲಕ್ಷ ರೂಪಾಯಿ ಆದಾಯ ಬರಲಿದೆ. ಸರ್ಕಾರದ ಅನುದಾನಗಳಾದ ಸಿಬ್ಬಂದಿ ವೇತನಕ್ಕಾಗಿ 5.65 ಕೋಟಿ ರೂಪಾಯಿ ಹಾಗೂ 15ನೇ ಹಣಕಾಸು ಯೋಜನೆಯಡಿ 5.78 ಕೋಟಿ ರೂಪಾಯಿಗಳನ್ನು ಅಂದಾಜಿಸಲಾಗಿದೆ. ಅಭಿವೃದ್ಧಿ ಯೋಜನೆಗಳ ಅಡಿಯಲ್ಲಿ ರಸ್ತೆ ಮತ್ತು ಚರಂಡಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಹೊಸ ರಸ್ತೆಗಳಿಗೆ 2.92 ಕೋಟಿ ರೂ. : ಹೊಸ ರಸ್ತೆಗಳ ನಿರ್ಮಾಣಕ್ಕೆ 2.92 ಕೋಟಿ ರೂಪಾಯಿ ಹಾಗೂ ಚರಂಡಿ ಮತ್ತು ಕಲ್ವರ್ಟ್‌ ಗಳ ನಿರ್ಮಾಣಕ್ಕಾಗಿ 2.62 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ.

          ನಗರದ ಆಧುನೀಕರಣದ ಭಾಗವಾಗಿ ಹೊಸ ಬೀದಿ ದೀಪಗಳು ಮತ್ತು ಸಂಚಾರಿ ದೀಪಗಳ ಅಳವಡಿಕೆಗೆ 50 ಲಕ್ಷ ರೂಪಾಯಿ ಕಾಯ್ದಿರಿಸಲಾಗಿದ್ದು, ಅಸ್ತಿತ್ವದಲ್ಲಿರುವ ಬೀದಿ ದೀಪಗಳ ನಿರ್ವಹಣೆಗೆ 2.65 ಕೋಟಿ ರೂಪಾಯಿ ಹಾಗೂ ವಿದ್ಯುತ್ ಬಿಲ್ ಪಾವತಿಗೆ 1.60 ಕೋಟಿ ರೂಪಾಯಿ ನಿಗದಿಪಡಿಸಲಾಗಿದೆ. ನಗರದ ಸೌಂದರ್ಯೀಕರಣಕ್ಕಾಗಿ ಪ್ರಮುಖ ಸರ್ಕಲ್ಗಳ ಅಭಿವೃದ್ಧಿ ಹಾಗೂ ಸ್ಮಶಾನಗಳ ಅಭಿವೃದ್ಧಿಗೆ 50 ಲಕ್ಷ ರೂಪಾಯಿ ವೆಚ್ಚ ಮಾಡಲಾಗುತ್ತಿದೆ. ಕುಡಿಯುವ ನೀರು ಪೂರೈಕೆಯ ಅಮೃತ 2.0 ಯೋಜನೆಗೆ ನಗರಸಭೆಯ ವಂತಿಕೆಯಾಗಿ 85.20 ಲಕ್ಷ ರೂಪಾಯಿಗಳನ್ನು ಒದಗಿಸಲಾಗಿದೆ.

            ಸ್ವಚ್ಛತೆ ಮತ್ತು ಸಮಾಜ ಕಲ್ಯಾಣಕ್ಕೆ ಬಜೆಟ್ನಲ್ಲಿ ವಿಶೇಷ ಒತ್ತು ನೀಡಲಾಗಿದೆ. ಘನತ್ಯಾಜ್ಯ ನಿರ್ವಹಣೆಗೆ 90 ಲಕ್ಷ ರೂ. : ಘನತ್ಯಾಜ್ಯ ನಿರ್ವಹಣೆಯ ಎಮ್‌.ಆರ್‌.ಎಫ್ ಘಟಕ ಸ್ಥಾಪನೆಗೆ 90 ಲಕ್ಷ ರೂಪಾಯಿ, ವೈಯಕ್ತಿಕ ಶೌಚಾಲಯಗಳ ನಿರ್ಮಾಣಕ್ಕೆ 45 ಲಕ್ಷ ರೂಪಾಯಿ ಹಾಗೂ ಜಲ್ ಹಿ ಅಮೃತ್ ಮತ್ತು ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ಯಂತ್ರೋಪಕರಣಗಳ ಖರೀದಿಗೆ 50 ಲಕ್ಷ ರೂಪಾಯಿಗಳನ್ನು ವಿನಿಯೋಗಿಸಲಾಗುತ್ತಿದೆ ಎಂದು ಬಜೆಟ್ ನಲ್ಲಿ ಹೇಳಲಾಗಿದೆ. ಪೌರ ಕಾರ್ಮಿಕರಿಗೆ 1.14 ಕೋಟಿ : ನಗರದ ಪೌರಕಾರ್ಮಿಕರ ಕ್ಷೇಮಕ್ಕಾಗಿ ಹಾಗೂ ಗೃಹಭಾಗ್ಯ ಯೋಜನೆಗೆ 1.14 ಕೋಟಿ ರೂಪಾಯಿ ಹಾಗೂ ಅವರ ಬೆಳಗಿನ ಉಪಹಾರಕ್ಕಾಗಿ 10 ಲಕ್ಷ ರೂಪಾಯಿ ಮೀಸಲಿಡಲಾಗಿದೆ.

          ಪರಿಶಿಷ್ಟ ಜಾತಿ, ಪಂಗಡ ಹಾಗೂ ಅಂಗವಿಕಲರ ಕಲ್ಯಾಣಕ್ಕಾಗಿ 33.05 ಲಕ್ಷ ರೂಪಾಯಿ ಅನುದಾನ ಕಲ್ಪಿಸಲಾಗಿದೆ. ಆಡಳಿತಾತ್ಮಕ ವೆಚ್ಚಗಳಾಗಿ ಸಿಬ್ಬಂದಿ ವೇತನಕ್ಕೆ 5.60 ಕೋಟಿ ರೂಪಾಯಿ, ವಾಹನಗಳ ಇಂಧನಕ್ಕೆ 75 ಲಕ್ಷ ರೂಪಾಯಿ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣೆಗೆ 20 ಲಕ್ಷ ರೂಪಾಯಿಗಳನ್ನು ಇಡಲಾಗಿದೆ. ಜಿಲ್ಲಾ ಕೇಂದ್ರ ಕಾರವಾರ ನಗರದ ಸರ್ವತೋಮುಖ ಅಭಿವೃದ್ಧಿಯನ್ನು ಇಟ್ಟುಕೊಳ್ಳಲಾಗಿದೆ......