ರಾಜ್ಯದಲ್ಲಿ ಕನ್ನಡಿಗರಿಗೆ ಸಿಂಹ ಪಾಲು ಉದ್ಯೋಗಕ್ಕಾಗಿ ಮೀಸಲಾತಿ ಅಗತ್ಯ: 85ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಡಾ.ಎಚ್‌.ಎಸ್. ವೆಂಕಟೇಶಮೂರ್ತಿ

ಕಲಬುರಗಿ, ಫೆ.5, ಪ್ರತಿಯೊಂದು ಮಗುವೂ ಮಾತೃಭಾಷೆಯಲ್ಲಿ ಕಲಿಯುವುದು ಅಗತ್ಯವೆಂದಾದಲ್ಲಿ ನೀವು ಕನ್ನಡವನ್ನು  ಶಿಕ್ಷಣ ಮಾಧ್ಯಮವಾಗಿ ಹೇರಿದಲ್ಲಿ ಕನ್ನಡೇತರ ಅನ್ಯಭಾಷಿಕರ ಮೂಲಭೂತ ಹಕ್ಕಿಗೆ, ಮಕ್ಕಳು  ಅವರವರ ಮಾತೃ ಭಾಷೆಯಲ್ಲಿ ಕಲಿಯುವ ಹಕ್ಕಿಗೆ ಚ್ಯುತಿಯೊದಗುತ್ತದೆ, ನಮ್ಮ ಮೂಲಭೂತ  ಹಕ್ಕನ್ನು ನಾವು ಅನುಭವಿಸಲು ಬಿಡಿ ಎಂಬುಬುದ ಮುಖವಾಡದ ಮಾತು. ಯಾವುದು ಪರಿಸರ ಭಾಷೆಯೋ  ಅದರಲ್ಲಿ ಮಾತ್ರ ಮಕ್ಕಳು ಲೋಕಾಕೃತಿಯನ್ನು ಚೆನ್ನಾಗಿ ಗ್ರಹಿಸಬಲ್ಲರು. ಆದ ಕಾರಣ  ಕನ್ನಡವು ಶಿಕ್ಷಣ ಮಾಧ್ಯಮವಾಗಬೇಕು ಎಂದು 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ. ಎಚ್.ಎಸ್. ವೆಂಕಟೇಶಮೂರ್ತಿ ಪ್ರತಿಪಾದಿಸಿದ್ದಾರೆ.ಕಲಬುರಗಿಯ ಗುಲ್ಬರ್ಗಾ ವಿಶ್ವವಿದ್ಯಾಲಯದ ವಿಜಯ ಪ್ರಧಾನ ವೇದಿಕೆಯಲ್ಲಿ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳಾನಾಧ್ಯಕ್ಷರ ಭಾಷಣ ಮಾಡಿದ ಅವರು, ಮಗುವೊಂದು ತನ್ನ  ಪಂಚೇಂದ್ರಿಯಗಳಿಂದ ಸಹಜವಾಗಿ ಗ್ರಹಿಸಿದ ಲೋಕ ಗ್ರಹಿಕೆಯು ಪರಿಷ್ಕಾರಗೊಳ್ಳಬೇಕಾದದ್ದು  ಪರಿಸರದ ಭಾಷೆಯಲ್ಲಿ. ಆಗ ಮಾತ್ರ ಅನುಭವ ಮತ್ತು ಅರಿವು ಒಂದಕ್ಕೊಂದು ಪೂರಕ-ಪೋಷಕವಾಗಿ  ಮಗುವಿನ ಕಲಿಕೆ ಅನುಭವದ ನೆಲೆಗೆ ಏರುತ್ತದೆ. ಹಾಗಾಗದೆ ಇಂಗ್ಲಿಷ್ ಭಾಷೆಯಲ್ಲಿ ಬೇರೆ ಬೇರೆ  ವಿಷಯಗಳನ್ನು ಮಕ್ಕಳಿಗೆ ಬೋಧಿಸಿದರೆ ಅದು ಮಾಹಿತಿಗಳ ಒದಗಣೆ ಆಗುವುದೇ ವಿನಹ ಲೋಕಾನುಭವವು ಭಾಷಾನುಭವವಾಗಿ ದಾಟಿಕೊಳ್ಳಲಾರದು ಎಂದು ಅಭಿಪ್ರಾಯಪಟ್ಟರು.

ಪೋಷಕರು ಮಕ್ಕಳಿಗೆ ಇಂಗ್ಲಿಷ್ ಮಾಧ್ಯಮ ಬೇಕು ಎಂದು ಆಗ್ರಹಿಸುವಾಗ ನಾವಾದರೂ ಏನು  ಮಾಡಲಿಕ್ಕೆ ಸಾಧ್ಯ? ಬೇಡಿಕೆಯ ಅನುಸಾರ ಪೂರೈಕೆ ನಡೆಸಬೇಕಾದದ್ದು ನಮ್ಮ ಧರ್ಮ  ಎನ್ನುತ್ತವೆ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವ ಅಡಳಿತ ಮಂಡಳಿಗಳು. ಅದು ನಿಮ್ಮ  ಧರ್ಮ ಹೌದು. ಆದರೆ ಅದು ವ್ಯಾಪಾರಿ ಧರ್ಮ. ಶಿಕ್ಷಣ ಒಂದು ವ್ಯಾಪಾರೀ ಉದ್ಯಮವಲ್ಲ.  ಅನುಭವವನ್ನು ಮಾತಾಗಿಯೂ ಮಾತನ್ನು ಅನುಭವವಾಗಿಯೂ ಅಖಂಡತ್ವದಲ್ಲಿ ಸಿದ್ಧಿಸಿಕೊಳ್ಳುವ  ವ್ಯಕ್ತಿರೂಪಣದ ಸೃಷ್ಟಿಶಾಲೆ.  ಇಂಗ್ಲಿಷ್ ಅನ್ನವನ್ನು ಕೊಡುವ ಭಾಷೆ ಅನ್ನುವಿರೇ?  ಎಂದು ಅವರು ಪ್ರಶ್ನಿಸಿದರು. ನಮ್ಮ ರೈತರು ಇಂಗ್ಲಿಷ್ ಭಾಷೆಯ ಹಂಗಿಲ್ಲದೆ ಅನ್ನ ಬೆಳೆಯುವ ಕೊಡುವ  ನಿತ್ಯಾನುಷ್ಠಾನದಲ್ಲಿ  ತತ್ಪರರಾಗಿದ್ದಾರೆ. "ರಾಜರು ಉದಿಸಲಿ ರಾಜರು ಅಳಿಯಲಿ  ಬಿತ್ತುಳುವುದನವ ಬಿಡುವುದೆ ಇಲ್ಲ"-ಎಂದು ಕುವೆಂಪು ನೇಗಿಲಯೋಗಿ ಕವಿತೆಯಲ್ಲಿ ಹೇಳಿದ್ದನ್ನು ಇಲ್ಲಿ ನೆನೆಯೋಣ. ಆ ಕವಿತೆ ಈಗ ನಮ್ಮ ಸರ್ಕಾರ ಅಂಗೀಕರಿಸಿರುವ ರೈತಗೀತೆಯೂ ಹೌದು. ಲಕ್ಷಾಂತರ ಕೂಲಿ, ಕಾರ್ಮಿಕ, ನಿತ್ಯಸೇವಾ ಜನರು ಇಂಗ್ಲಿಷ್ ಭಾಷೆಯ  ಹಂಗಿಲ್ಲದೆ ಸ್ವಾಭಿಮಾನಿ ಬದುಕು ಬದುಕುತ್ತಿದ್ದಾರೆ. ಕರ್ನಾಟಕದಲ್ಲಿ ಕನ್ನಡವನ್ನು  ಅನ್ನದ  ಭಾಷೆಯಾಗಿ ರೂಢಿಸುವುದೆಂದರೆ, ಕರ್ನಾಟಕದಲ್ಲಿ ಕನ್ನಡಿಗರಿಗೆ ಸಿಂಹ ಪಾಲು  ಉದ್ಯೋಗ ಮೀಸಲಾತಿಯನ್ನು ಜಾರಿಗೆ ತರುವುದು ಬಹು ಮುಖ್ಯ ಅಗತ್ಯ. ಅನ್ನ ಸಂಪಾದನೆಯು ಕೈಂಕರ್ಯ ಮತ್ತು ದುಡಿಮೆಯ ಕಾಯಕಯೋಗವಲ್ಲದೆ ಭಾಷಾ ಪರಿಣತಿಯ ಫಲವಲ್ಲ ಎಂಬುದನ್ನು ನಾವು  ಗ್ರಹಿಸಬೇಕಾಗಿದೆ. ಇಂಗ್ಲಿಷ್ ಮೀಡಿಯಮ್ಮಿನಲ್ಲಿ ಓದುವ ನಮ್ಮ ಮಕ್ಕಳು ಹೆಚ್ಚು  ಜಾಣರಾಗುವರೇ?  ಕರ್ನಾಟಕದ ದೊಡ್ಡ ವಿಜ್ಞಾನಿಗಳು, ಉದ್ಯಮಿಗಳು, ಕವಿ, ಸಾಹಿತಿಗಳು,  ರಾಜಕೀಯ ಮುತ್ಸದ್ದಿಗಳು, ದೇಶಕ್ಕಾಗಿ ತಮ್ಮ ಬಾಳನ್ನೇ ಧಾರೆಯೆರೆದ ರಾಷ್ಟ್ರ ಪುರುಷರು  ಕನ್ನಡ ಭಾಷೆಯಲ್ಲೇ ತಮ್ಮ ಪ್ರಾಥಮಿಕ ಶಿಕ್ಷಣ ಮುಗಿಸಿ ಈಗ ಸಾಧನೆಯ ಉತ್ತುಂಗ  ಶಿಖರವೇರಿರುವಂಥವರು. ಐನ್‌ಸ್ಟೈನ್‌ರಂಥ ಮಹಾ ವಿಜ್ಞಾನಿಗೂ ಜರ್ಮನ್ ಭಾಷೆಯೇ ಜ್ಞಾನದ  ಮಾಧ್ಯಮವಾಗಿತ್ತು. ಇಂಗ್ಲಿಷ್ ಸಂವಹನದ ಭಾಷೆ ಮಾತ್ರ ಆಗಿತ್ತು ಎಂದು ವೆಂಕಟೇಶಮೂರ್ತಿ ಅಭಿಪ್ರಾಯ ಪಟ್ಟರು.

ಅಸ್ಖಲಿತವಾಗಿ ಇಂಗ್ಲಿಷ್ ಭಾಷೆಯಲ್ಲಿ ನಿರರ್ಗಳವಾಗಿ ಮಾತಾಡುವ ವಾಗ್ಮಿಗಳು  ಸತ್ಯವಾಚಿಗಳೆಂದೂ ಹೇಳಲಾಗದು. ಅದಕ್ಕೇ ಭಾಷೆಯು ಹೇಗಿರಬೇಕೆಂದು ವಿವೇಚಿಸುವಾಗ  ಬಸವಣ್ಣನವರು ಮುತ್ತಿನಹಾರ, ಮಾಣಿಕ್ಯದ ದೀಪ್ತಿ, ಸ್ಫಟಿಕದ ಶಲಾಕೆ ಇವುಗಳ ಅನಂತರ ಲಿಂಗ  ಮೆಚ್ಚಿ ಅಹುದೆನ್ನಬೇಕೆಂಬ ಪರಮಪ್ರಮೇಯವನ್ನು ಶೃಂಗ ಸ್ಥಾನದಲ್ಲಿ ಇರಿಸಿದ್ದು. ನಡೆ ನುಡಿ  ಒಂದಾಗದ ಬದುಕು ಅಕ್ಷಮ್ಯವೆಂದು ಸತ್ಯನಿಷ್ಠುರವಾದ ಕಟೂಕ್ತಿಯನ್ನಾಡಿದ್ದು ಎಂದು ಅವರು ಹೇಳಿದರು.ನಮ್ಮ ಖಾಸಗಿ ವಿದ್ಯಾಸಂಸ್ಥೆಗಳನ್ನು ನಡೆಸುವ  ಉದ್ಯಮಿಗಳು ಮಾತೃಭಾಷೆಯಲ್ಲಿ ಕಲಿಯುವುದು  ಅನ್ಯಭಾಷಿಕರ, ಅಲ್ಪಸಂಖ್ಯಾತರ ಹಕ್ಕು ಮತ್ತು ಪೋಷಕರ ಬೇಡಿಕೆಯ ಒತ್ತಾಯ ಎನ್ನುವ ವಾದವನ್ನು ಮುಂದಿಟ್ಟು ಉಚ್ಚ ನ್ಯಾಯಾಲಯಕ್ಕೆ  ಮೊರೆಹೋಗುತ್ತಾರೆ. ಆಗ ಉಚ್ಚ ನ್ಯಾಯಾಲಯವು  ಕನ್ನಡ ಪರವಲ್ಲದ, ಮಕ್ಕಳ ಶಿಕ್ಷಣ  ಮಾಧ್ಯಮವನ್ನು ನಿರ್ಧರಿಸುವುದು ಪೋಷಕರ ಹಕ್ಕು ಅನ್ನುವ ತೀರ್ಪು ನೀಡುತ್ತದೆ. ಹಿಂದೆ  ಅದೇ ಉಚ್ಚ ನ್ಯಾಯಾಲಯವು ಕನ್ನಡ (ಅಂದರೆ ತಾಯ್ನುಡಿ-ಪರಿಸರ ನುಡಿ) ಶಿಕ್ಷಣ  ಮಾಧ್ಯಮವಾಗಬೇಕು ಎಂಬ ತೀರ್ಪು ನೀಡಿತ್ತು ಎಂಬುದನ್ನು ನೆನಪಿಸಿಕೊಳ್ಳಬೇಕು. ಮತ್ತೆ ನಾವು  ನ್ಯಾಯಾಂಗದ ಮೊರೆಹೋಗಬೇಕಾದ, ಕಾನೂನಿನ ಹೋರಾಟ ನಡೆಸಬೇಕಾದ ತಿರುಮುರುವು ಸ್ಥಿತಿ  ಉಂಟಾಗುತ್ತದೆ. ಶಿಕ್ಷಣ ಮಾಧ್ಯಮ ಕನ್ನಡ ಆಗಬೇಕು ಎನ್ನುವು ತತ್ವಕ್ಕೆ ಕಾನೂನಿನ ತೊಡಕುಗಳು ಉಂಟಾಗುವುವು ಎಂದು ಅವರು ಕನ್ನಡದ ಸ್ಥಿತಿಯನ್ನು ವಿವರಿಸಿದರು.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಉಪಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಚಿವ ಸಿ.ಟಿ.ರವಿ, ಕನ್ನಡ ನಾಡಿನ ಹಿರಿಯ ಕವಿಗಳೂ, ನಾಟಕಕಾರರೂ ಆದ ಜ್ಞಾನಪೀಠ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ,  ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮನು ಬಳಿಗಾರ್ ಮತ್ತಿತರರು ಉಪಸ್ಥಿತರಿದ್ದರು.