ಬೆಂಗಳೂರು, ಮೇ 7, ನೆರೆ ರಾಜ್ಯಗಳಲ್ಲಿ ಸಿಲುಕಿರುವ ರಾಜ್ಯದ ಕಾರ್ಮಿಕರನ್ನು ಇನ್ನೊಂದೆರಡು ದಿನಗಳಲ್ಲಿ ವಾಪಸ್ ಕರೆಸಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ನೀಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಮ್ಮತಿ ನೀಡಿದ್ದು ರಾಜ್ಯದ ಕಾರ್ಮಿಕರು ಆತಂಕಪಡಬಾರದು ಎಂದು ಸುರಪುರ ಶಾಸಕ ರಾಜುಗೌಡ ಹೇಳಿದ್ದಾರೆ.ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಗೋವಾ, ಮಹಾರಾಷ್ಟ್ರ, ತಮಿಳುನಾಡು ರಾಜ್ಯಗಳಲ್ಲಿ ನಮ್ಮ ರಾಜ್ಯದ ಕಾರ್ಮಿಕರು ಲಾಕ್ ಡೌನ್ ನಲ್ಲಿ ಸಿಲುಕಿದ್ದಾರೆ. ನನ್ನ ಕ್ಷೇತ್ರದ ನಾಲ್ಕು ಸಾವಿರಕ್ಕೂ ಅಧಿಕ ಕಾರ್ಮಿಕರಿದ್ದಾರೆ, ಹೈದರಾಬಾದ್ ಕರ್ನಾಟಕ ಭಾಗದವರ ಸಂಖ್ಯೆ ಹೆಚ್ಚಿದೆ ಅವರ ಪಟ್ಟಿಯನ್ನು ಮುಖ್ಯಮಂತ್ರಿಗಳಿಗೆ ನೀಡಿ ನಮ್ಮ ಕೂಲಿ ಕಾರ್ಮಿಕರನ್ನು ವಾಪಸ್ ಕರೆಸಿಕೊಳ್ಳಬೇಕು ಎಂದು ಮನವಿ ಮಾಡಿದ್ದೇವೆ. ಇದಕ್ಕೆ ಮುಖ್ಯಮಂತ್ರಿ ಸಕಾರಾತ್ಮಕವಾಗಿ ಸ್ಪಂಧಿಸಿಸಿದ್ದಾರೆ.ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಸಭೆ ಮಾಡಿ ಆದಷ್ಟು ಬೇಗ ಅವರನ್ನು ಕರೆಸಿಕೊಳ್ಳುವ ಭರವಸೆ ನೀಡಿದ್ದಾರೆ ಎಂದರು.
ನಮ್ಮ ಕಾರ್ಮಿಕರನ್ನು ವಾಪಸ್ ಕರೆಸಿಕೊಳ್ಳಲು ತಗಲುವ ವೆಚ್ಚವನ್ನು ಭರಿಸಲು ನಾವು ಸಿದ್ಧರಿದ್ದೇವೆ ಎಂದು ಹೇಳಿಕೆ ನೀಡಿದ್ದೆವು. ಆದರೆ ಅದಕ್ಕೆ ಮುಖ್ಯಮಂತ್ರಿ ನಮ್ಮ ಸರ್ಕಾರ ಬಡವರ ಪರ ಸರ್ಕಾರ ಎಷ್ಟು ಖರ್ಚಾದರೂ ಅದನ್ನು ನಮ್ಮ ಸರ್ಕಾರವೇ ಭರಿಸಲಿದೆ ಎಂದಿದ್ದಾರೆ. ಹಾಗಾಗಿ ಹೊರ ರಾಜ್ಯದಲ್ಲಿರುವ ಕಾರ್ಮಿಕರು ಆತಂಕಪಡಬೇಕಿಲ್ಲ. ಒಂದೆರಡು ದಿನಗಳಲ್ಲಿ ಅವರನ್ನೆಲ್ಲಾ ಕರೆಸಿಕೊಳ್ಳಲಾಗುತ್ತದೆ ಎಂದರು.ಹೊರ ರಾಜ್ಯದಿಂದ ಬಂದವರ ಕ್ವಾರಂಟೈನ್ ಗೆ ಶಾಲೆಗಳು, ಹಾಸ್ಟೆಲ್ ಗಳು, ಕಿತ್ತೂರಾಣಿ ಚೆನ್ನಮ್ಮ ಶಾಲೆ, ಮೊರಾರ್ಜಿ ದೇಸಾಯಿ ಶಾಲೆ ಈ ರೀತಿ ಎಲ್ಲವನ್ನೂ ಕೂಡ ವಶಕ್ಕೆ ತೆಗೆದುಕೊಂಡು ಅಲ್ಲಿ ಅವರನ್ನು ಇರಿಸಲಾಗುತ್ತದೆ, 15 ದಿನಗಳ ನಂತರ ಅವರನ್ನು ಊರಿಗೆ ವಾಪಸ್ ಕಳುಹಿಸಿದ್ದೇವೆ ಅದಕ್ಕೆ ಮುಖ್ಯಮಂತ್ರಿಗಳು ಒಪ್ಪಿದ್ದಾರೆ ಎಂದರು.