ಕನ್ನಡ ಲಾಂಛನ ಕನ್ನಡಿಗರ ಅಸ್ಮಿತೆ : ಶಾಸಕ ತಮ್ಮಣ್ಣವರ

ಕನ್ನಡ ಲಾಂಛನ ಕನ್ನಡಿಗರ ಅಸ್ಮಿತೆ : ಶಾಸಕ ತಮ್ಮಣ್ಣವರ Kannada logo is the identity of Kannadigas: MLA Thammanavara


ಹಾರೂಗೇರಿ : ಕನ್ನಡ ಲಾಂಛನ ಸಮಸ್ತ ಕನ್ನಡಿಗರ ಅಸ್ಮಿತೆ. ದ್ವೇಷಕ್ಕೆ ಕನ್ನಡ ಸಾಹಿತ್ಯ ಮತ್ತು ಪರಂಪರೆಯಲ್ಲಿ ಅವಕಾಶವಿಲ್ಲ. ಕನ್ನಡಕ್ಕಿದೆ ಸಮಾನತೆ ಮತ್ತು ಮಾನವೀಯತೆ ಸಂದೇಶ ಎಂದು ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ, ಶಾಸಕ ಮಹೇಂದ್ರ ತಮ್ಮಣ್ಣವರ ಹೇಳಿದರು. 

   ಪಟ್ಟಣದ ಎಂ.ಬಿ.ಪಾಟೀಲ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದ ಸಭಾಭವನದಲ್ಲಿ ರವಿವಾರ ನಡೆದ 17ನೇ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. 

   ಸಾಹಿತ್ಯ ಸಮ್ಮೇಳನದ ಮೂಲಕ ಸಮಾಜದಲ್ಲಿ ಸಾಮರಸ್ಯ, ಸಾಹಿತ್ಯಾಭಿರುಚಿ ಮೂಡಿಸಿ, ಈ ಭಾಗದಲ್ಲಿ ಕನ್ನಡ ಸಾಹಿತ್ಯದ ಕ್ರಾಂತಿಯಾಗಬೇಕಿದೆ. ಕನ್ನಡ ಉಳಿವಿಗೆ ಪ್ರತಿಯೊಬ್ಬರೂ ಕಂಕಣಬದ್ಧರಾಗಿ ಕಾರ್ಯನಿರ್ವಹಿಸಬೇಕಿದೆ. ಪ್ರತಿಯೊಬ್ಬರೂ ಕನ್ನಡ ಅಭಿಮಾನ ಬೆಳೆಸಿಕೊಳ್ಳಬೇಕು. ನಾವೆಲ್ಲರೂ ನವಂಬರ್ 1 ಕನ್ನಡಿಗರಾಗದೇ ನಂ.1 ಕನ್ನಡಿಗರಾಗಬೇಕೆಂದು ಹೇಳಿದರು. 

  ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಕಸಾಪ ಅಧ್ಯಕ್ಷ ಈರಣ್ಣಗೌಡ ಪಾಟೀಲ ಮಾತನಾಡುತ್ತ ಬನ್ನಿ ಕಲ್ಯಾಣ ನಾಡನ್ನು ಕಟ್ಟೋಣ ಎಂಬ ಧ್ಯೇಯವಾಕ್ಯದಲ್ಲಿ 17ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಲಾಂಛನದಲ್ಲಿ ಈ ಬಾರಿ ವಿಶೇಷತೆ ಒಳಗೊಂಡಿದ್ದು, ಈ ಹಿಂದಿನ 16 ಜಿಲ್ಲಾ ಸಮ್ಮೇಳನಗಳ ಸರ್ವಾಧ್ಯಕ್ಷರ ಭಾವಚಿತ್ರ. ಸರ್ವಾಧ್ಯಕ್ಷ ಡಾ.ವಿ.ಎಸ್‌.ಮಾಳಿ ಅವರ ಮಸ್ತಕದ ಮೇಲೆ ತಾಯಿ ಭುವನೇಶ್ವರಿ, ಕವಿ ಅಲಬೈರಿ ಮತ್ತು ಗಣಿತ ಭಾಸ್ಕರ ರಾಜಾದಿತ್ಯರ ಚಿತ್ರ ಮತ್ತು ಕಿತ್ತೂರು ರಾಣಿಚೆನ್ನಮ್ಮ, ಸಂಗೋಳ್ಳಿ ರಾಯಣ್ಣ ಮತ್ತು ಚನ್ನವೃಷಭೇಂದ್ರ ದೇವರಕೊಂಡಜ್ಜನವರಿಂದ ಲಾಂಛನ ಕಂಗೊಳಿಸುತ್ತಿದೆ ಎಂದರು. 

  ಜಿಲ್ಲಾ ಕಸಾಪ ಕಾರ್ಯಕಾರಿ ಸಮಿತಿ ಸದಸ್ಯ ಅವಳೆ ಕುಮಾರ, ಪ್ರದೀಪ ಹಾಲ್ಗುಣಿ, ರವೀಂದ್ರ ಪಾಟೀಲ, ಸುರೇಶ ಐಹೊಳೆ, ಸರದಾರ ಜಮಾದಾರ, ಬಿ.ವಿ.ಬಿರಾದಾರ, ಅಬ್ಬಾಸ ಲತೀಪನವರ, ರಮೇಶ ಪಾಟೀಲ, ವರ್ಧಮಾನ ಶಿರಹಟ್ಟಿ, ಜಿ.ಎಸ್‌.ದುಂಡಗಿ, ವಿ.ಬಿ.ಜೋಡಟ್ಟಿ, ಟಿ.ಎಸ್‌.ವಂಟಗೂಡಿ, ಬಿ.ಎಸ್‌.ಸಬರಗಿ, ಎಸ್‌.ಪಿ.ಮೋಕಾಸಿ, ಉಮೇಶ ಜಗದಾಳೆ, ಬಸವರಾಜ ಹಾರೂಗೇರಿ ಮತ್ತಿತರರು ವೇದಿಕೆಯಲ್ಲಿದ್ದರು.      

  ತಾಲೂಕು ಕದಳಿ ವೇದಿಕೆ ಅಧ್ಯಕ್ಷೆ ಅನುಸೂಯಾ ಮುಳವಾಡ ಹಾಗೂ ಗೀತಾ ಮಾಳಶೆಟ್ಟಿ ಪ್ರಾರ್ಥನಾ ಗೀತೆ ಹಾಡಿದರು. ವಸಂತ ಬೆಕ್ಕೇರಿ ಸ್ವಾಗತಿಸಿದರು. ಲಕ್ಷ್ಮಣ ಜಾಯಗೋಣಿ ಕಾರ್ಯಕ್ರಮ ನಿರೂಪಿಸಿದರು. ಎಸ್‌.ಬಿ.ಹಣಸಿ ವಂದಿಸಿದರು.