ಕನಕದಾಸರು ತಾರತಮ್ಯ ತೊಲಗಿಸಿ ಸಮಾನತೆ ಸಾರಿದ ಮಹಾನ್ ಸಂತ: ಪ್ರೊ.ಬಿ.ಕೆ ರವಿ

ಕನಕದಾಸರು ತಾರತಮ್ಯ ತೊಲಗಿಸಿ ಸಮಾನತೆ ಸಾರಿದ ಮಹಾನ್ ಸಂತ: ಪ್ರೊ.ಬಿ.ಕೆ ರವಿ Kanakadasa is a great saint who abolished discrimination and preached equality: Prof. BK Ravi


ಕೊಪ್ಪಳ 27:  ಕನಕದಾಸರ ಸಾಹಿತ್ಯ ಜನರ ನೋವಿಗೆ ಸಮಾಧಾನ ಹೇಳುತ್ತದೆ. ಯುವಜನಾಂಗ ದಾಸ ಸಾಹಿತ್ಯದಲ್ಲಿನ ಅಂಶಗಳನ್ನು ಅಳವಡಿಸಿಕೊಂಡಲ್ಲಿ, ಪರಸ್ಪರ ಸ್ನೇಹ, ತಾಳ್ಮೆ, ವಿಶ್ವಾಸ ಬೆಳೆದು ಹೃದಯವು ಜನರ ಕಷ್ಟಗಳಿಗೆ ಮಿಡಿಯುವಷ್ಟು ಮೃದುವಾಗುತ್ತದೆ ಎಂದು ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಡಿ.ವಿ ಪರಮಶಿವಮೂರ್ತಿ  ಹೇಳಿದರು.       ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಹಾಲುಮತ ಅಧ್ಯಯನ ಪೀಠ ಹಾಗೂ ಕೊಪ್ಪಳ ವಿಶ್ವವಿದ್ಯಾಲಯದಿಂದ ಕನಕದಾಸ ಜಯಂತಿ ನಿಮಿತ್ತ ಆಯೋಜಿಸಲಾಗಿದ್ದ ವಿಶೇಷ ಉಪನ್ಯಾಸಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕರ್ನಾಟಕವು ಸಾಕಷ್ಟು ದಾರ್ಶನಿಕರ ನಾಡಾಗಿದ್ದು, ದಾಸರ ಸ್ಮರಣೆ ಮಾಡದೇ ಸಮಯ ವ್ಯರ್ಥ ಮಾಡುವುದು ಸರಿಯಲ್ಲ. ವಿದ್ಯಾರ್ಥಿಗಳು, ಶ್ರಮಿಕರು ಸೇರಿ ಪ್ರತಿಯೊಬ್ಬರೂ ತಮ್ಮ ತಮ್ಮ ಕಾರ್ಯವನ್ನು ಮಾಡಿದರೆ ಬದುಕ ಸಾರ್ಥಕವಾಗುತ್ತದೆ ಎಂದರು. ವಿಶೇಷ ಉಪನ್ಯಾಸ ನೀಡಿದ ಮುಳಗುಂದದ ಕನ್ನಡ ಪ್ರಾಧ್ಯಾಪಕರಾದ  ಡಾ. ರಮೇಶ ಕಲ್ಲನಗೌಡ ಅವರು ಮಾತನಾಡಿ, ಸಮ ಸಮಾಜ ನಿರ್ಮಾಣದ ಅವಶ್ಯಕತೆ ಕನಕದಾಸರ ಅವಧಿಯಲ್ಲಿಯೂ ಇತ್ತು. ಈಗಲೂ ಇದೆ. ಕನಕದಾಸರ ರಾಮಧ್ಯಾನ ಚರಿತೆ ಗ್ರಂಥವು ವರ್ಗ ಸಂಘರ್ಷ, ಆಹಾರ ಸಂಸ್ಕೃತಿ ಸೇರಿದಂತೆ ಹಲವು ವಾದಗಳಿಗೆ ಉತ್ತರ ನೀಡುತ್ತದೆ ಎಂದು ತಿಳಿಸಿದರು.  

ಕನಕದಾಸರ ಸಾಹಿತ್ಯವನ್ನು ಅಳವಡಿಸಿಕೊಂಡಲ್ಲಿ ಬದುಕು ಸುಂದರಗೊಳ್ಳುತ್ತದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಕೊಪ್ಪಳ ವಿ.ವಿ.ಯ ಕುಲಪತಿಗಳಾದ ಪ್ರೊ.ಬಿ.ಕೆ ರವಿಯವರು ಮಾತನಾಡಿ,  ಕನಕದಾಸರು ತಾರತಮ್ಯ ತೊಲಗಿಸಿ ಸಮಾನತೆ ಸಾರಿದ ಮಹಾನ್ ಸಂತ. ದಾಸ ಸಾಹಿತ್ಯಕ್ಕೆ ಅವರ ಕೊಡುಗೆ ಅಪಾರ. ಇಂದಿನ ಯುವಕರು, ಕನಕ ದಾಸರು ಸಾರಿದ ತಾಳ್ಮೆಯ ಮಹತ್ವವನ್ನು ಅರಿತರೆ, ಭವಿಷ್ಯ ಬಲಿಷ್ಠವಾಗಲಿದೆ ಎಂದರು. ಇದೇ ವೇಳೆ ಕನಕದಾಸರ ಕೀರ್ತನೆಗಳು ಮತ್ತು  ಸಮಕಾಲೀನತೆ ವಿಷಯದ ಕುರಿತು ಉಪನ್ಯಾಸ ನೀಡಿದ ಗದಗದ ಜನಪದ ವಿಧ್ವಾಂಸರಾದ ಡಾ. ಸಿದ್ದಣ್ಣ ಜಕನಾಳ ಅವರು, ಕನಕದಾಸರು  ಕೀರ್ತನೆಗಳ ಮೂಲಕಮಾಡಿದ ಸಾಮಾಜಿಕ ಜಾಗೃತಿಯ ಬಗ್ಗೆ , ಕನಕದಾಸರ ಅಪಾರ ಸಾಹಿತ್ಯದಲ್ಲಿನ ಜನಪರ , ಸಮಾಜದ ಪರ ಕಾಳಜಿ ಬಗ್ಗೆ, ಅವರ ಸಾಹಿತ್ಯದ ಬಗ್ಗೆ ವಿಶ್ಲೇಷಣೆ ಮಾಡಿದರು. ಈ ಸಂದರ್ಭದಲ್ಲಿ ಕಾಗಿನೆಲೆ ಅಭಿವೃದ್ದಿ ಪ್ರಾಧಿಕಾರದ ನಿಕಟಪೂರ್ವ ಆಯುಕ್ತರಾದ ಮಲ್ಲೇಶಪ್ಪ ಹೊರಪೇಟೆ ಮಾತನಾಡಿ ಕನಕದಾಸರು ಅಂದಿನ ದಿನಗಳಲ್ಲಿ ಕೀರ್ತನೆಗಳ ಮೂಲಕ ಜನಜಾಗೃತಿ ಮೂಡಿಸಿದ್ದು, ಅವರು ತಮ್ಮ ಸಾಹಿತ್ಯ ಮೂಲಕ ಬದುಕಿನ ದಾರಿ ತೋರಿದರು ಎಂದರು.  ಹಾಲುಮತ ಅಧ್ಯಯನ ಪೀಠದ  ಸಂಚಾಲಕರಾದ ಡಾ. ಎಫ್‌.ಟಿ.ಹಳ್ಳಿಕೇರಿಯವರು ಈ ವೇಳೆ ಪ್ರಾಸ್ತಾವಿಕವಾಗಿ ಮಾತನಾಡಿ ದರು.ಪ್ರಭಾರ ಕುಲಸಚಿವರಾದ ಡಾ. ಎಸ್‌.ವಿ.ಡಾಣಿಯವರು ಸ್ವಾಗತಿಸಿದರು. ಕನ್ನಡ ಪ್ರಾಧ್ಯಾಪಕ ಡಾ. ವೀರೇಶ ಡಾಣಿ ನಿರೂಪಿಸಿದರು. ವಿ.ವಿ ಆಡಳಿತಾಧಿಕಾರಿ ಪ್ರೊ.ತಿಮ್ನಾರೆಡ್ಡಿ ಮೇಟಿಯವರು ವಂದಿಸಿದರು.