ಕನಕದಾಸರ ವೈಚಾರಿಕ ಚಿಂತನೆಗಳು ಇಂದಿಗೂ ಪ್ರಸ್ತುತ : ರವಿ ಕಂಬಳಿ

Kanakadasa's philosophical thoughts are still relevant today : Ravi Kambali

ಹಂಪಿ 30:ಕನ್ನಡ ನಾಡಿನ ವೈಚಾರಿಕ ಚಿಂತಕರಲ್ಲಿ ಒಬ್ಬರಾದ ಕನಕದಾಸರು “ಕವಿಗಳಲ್ಲಿ ದಾಸ-ದಾಸರಲ್ಲಿ ಕವಿ” ಎಂದು ಪ್ರಸಿದ್ಧರು. ಸಮಾಜದ ಅಂಕುಡೊಂಕುಗಳನ್ನು ಹತ್ತಿರದಿಂದ ನೋಡಿದ್ದ, ನೋವು-ನಲಿವುಗಳನ್ನು ಅನುಭವಿಸಿದ್ದ ಕನಕದಾಸರು ಸಹಜವಾಗಿ ದೇಸಿಯತೆಯನ್ನು ಮೈಗೂಡಿಸಿಕೊಂಡಿದ್ದರು. ಸ್ಥಳೀಯ ಸಂಸ್ಕೃತಿ, ಭಾಷೆ, ಜನರ ನೋವು ನಲಿವುಗಳಿಗೆ ಸ್ಪಂದಿಸುತ್ತಿದ್ದರು. ಇದಕ್ಕೆ ಅವರು ಬಳಸಿದ ಪಡೆನುಡಿಗಳು, ಗಾದೆ ಮಾತುಗಳು, ಜನರ ಜೊತೆಗಿನ ಸಂಭಾಷಣೆಗಳು ಯಥಾವತ್ತಾಗಿ ಕಾವ್ಯಗಳಲ್ಲಿ, ಕೀರ್ತನೆಗಳಲ್ಲಿ ಎಡೆಪಡೆದಿವೆ ಎಂದು ಸಂಶೋಧನ ವಿದ್ಯಾರ್ಥಿ ರವಿ ಕಂಬಳಿ ಅವರು ಅಭಿಪ್ರಾಯಪಟ್ಟರು. 

ಕನ್ನಡ ವಿಶ್ವವಿದ್ಯಾಲಯದ ಹಾಲುಮತ ಅಧ್ಯಯನ ಪೀಠದ ವತಿಯಿಂದ ಹಾಲುಮತ ಮಂಟಪ 10 ಕಾರ್ಯಕ್ರಮದಲ್ಲಿ ಕನಕದಾಸರ ಸಾಹಿತ್ಯದಲ್ಲಿ ದೇಸಿಯತೆ ಎಂಬ ವಿಶೇಷ ಉಪನ್ಯಾಸ ನೀಡುತ್ತಾ, ಸಮಾಜದಲ್ಲಿ ಮೇಲು-ಕೀಳು, ವರ್ಗ-ವರ್ಣ, ನೋವು-ನಲಿವು ಮೊದಲಾದವುಗಳನ್ನು ಹತ್ತಿರದಿಂದ ಗಮನಿಸಿದ್ದಾರೆ. ಇದಕ್ಕೆ ರಾಮಧಾನ್ಯ ಚರಿತೆಯಲ್ಲಿ ಬರುವ. ರಾಗಿ-ಅಕ್ಕಿಯ ಸಂಕೇತಗಳೇ ಸಾಕ್ಷಿ. ರಾಗಿ ಬಡವರ ಸಂಕೇತವಾಗಿ, ಭತ್ತವನ್ನು ಬಲ್ಲಿದರ ಸಂಕೇತವನ್ನಾಗಿ ಬಳಸಿದ್ದಾರೆ. ಇನ್ನೂ ಕನಕದಾಸರು ತಾವು ಕಂಡದ್ದನ್ನು ಅನುಭವಿಸಿದ್ದನ್ನು ಹೇಳಿದವರು. ಕುಲದ ಪ್ರಶ್ನೆ ಬಂದಾಗ, ಕುಲಕುಲವೆಂದು ಹೊಡೆದಾಡುವಿರಿ. ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ? ಎಂದು ಪ್ರಶ್ನೆ ಮಾಡಿದ್ದಾರೆ. ಆಡು ಭಾಷೆಯ ಬಳಕೆ, ಜನಜೀವನದ ಚಿತ್ರಣ ಸೊಗಸಾಗಿ ತಮ್ಮ ಕೃತಿಗಳಲ್ಲಿ ಹೇಳಿದ್ದಾರೆ. ಈ ನಿಟ್ಟಿನಲ್ಲಿ ಕನಕದಾಸರ ಕೃತಿಗಳ ಬಗ್ಗೆ ಇನ್ನೂ ಹೊಸ ದೃಷ್ಟಿಕೋನದಿಂದ ಅಧ್ಯಯನ ಮಾಡುವ ಅಗತ್ಯವಿದೆ ಎಂದರು. 

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಭಾಷಾ ನಿಕಾಯದ ಡೀನರು ಮತ್ತು ಹಾಲುಮತ ಅಧ್ಯಯನ ಪೀಠದ ಸಂಚಾಲಕರಾದ ಡಾ.ಎಫ್‌.ಟಿ.ಹಳ್ಳಿಕೇರಿ ಅವರು ಕನಕದಾಸರ ಕಾವ್ಯಗಳು ಮತ್ತು ಕೀರ್ತನೆಗಳು ಸಹಜ ಮತ್ತು ಸರಳತೆಯಿಂದ ಕೂಡಿದವುಗಳು. ಇಲ್ಲೆಲ್ಲ ಕನಕದಾಸರ ಸಾಮಾಜಿಕ ದೃಷ್ಟಿಕೋನ ಹೇಗಿತ್ತು ಎಂಬುದು ಗೊತ್ತಾಗುತ್ತದೆ. ಹಾಲುಮತ ಮಂಟಪ ಕಾರ್ಯಕ್ರಮವು ವಿದ್ಯಾರ್ಥಿಗಳ ಜ್ಞಾನದ ತಿಳುವಳಿಕೆಯನ್ನು ವಿಸ್ತರಿಸುವ ವೇದಿಕೆಯಾಗಿದೆ. ಹಾಲುಮತ ಸಾಹಿತ್ಯ ಸಂಸ್ಕೃತಿ ಬಗ್ಗೆ ಚಿಂತನೆ ನಡೆಸುವ ವಿದ್ಯಾರ್ಥಿಗಳು ಈ ವೇದಿಕೆಯ ಪ್ರಯೋಜನ ಪಡೆಯಬಹುದು ಎಂದು ತಿಳಿಸಿದರು. 

ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳ ಪ್ರಾಧ್ಯಾಪಕರು, ಸಂಶೋಧನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸಬೀನಾ ಅವರು ಕೀರ್ತನೆ ಗಾಯನದ ಮೂಲಕ ಚಾಲನೆ ನೀಡಿದರು. ಸಂಚಾಲಕ ಶ್ರೀ ಗೋಣಿಬಸಪ್ಪ ಸ್ವಾಗತಿಸಿದರು. ನಂದಿನಿ ಕೆ. ನಿರೂಪಣೆ ಮಾಡಿದರು, ಅಶ್ವಿನಿ ಡಿ. ವಂದಿಸಿದರು.