ಅಗಾಧ ಪ್ರತಿಭೆಯ ಮೇರು ಕವಿ, ಮಹಾಕವಿ ಕಾಳಿದಾಸ: ಡಾಽಽ ಅಮೃತ ಯಾರ್ದಿ

ಅಗಾಧ ಪ್ರತಿಭೆಯ ಮೇರು ಕವಿ, ಮಹಾಕವಿ ಕಾಳಿದಾಸ: ಡಾಽಽ ಅಮೃತ ಯಾರ್ದಿ Kalidasa, a great poet of immense talent: Dr. Amrita Yardi

ಅಗಾಧ ಪ್ರತಿಭೆಯ ಮೇರು ಕವಿ, ಮಹಾಕವಿ ಕಾಳಿದಾಸ: ಡಾಽಽ ಅಮೃತ ಯಾರ್ದಿ 

ಧಾರವಾಡ 27: ಸಾಧನಕೇರಿಯ ‘ಚೈತ್ರ’ದ ಸಭಾಗೃಹದಲ್ಲಿ ಆಷಾಢದ ಮೊದಲ ದಿನ, ಮಹಾಕವಿ ಕಾಳಿದಾಸ ದಿನವಾದ ಗುರುವಾರ ದಿ: 26-06-2025 ರಂದು ಹಮ್ಮಿಕೊಂಡಿದ್ದ “ಕವಿಕುಲಗುರು ಕಾಳಿದಾಸ” ಈ ಕುರಿತಾದ ವಿಶೇಷ ಉಪನ್ಯಾಸ ಕಾರ‌್ಯಕ್ರಮವು ಅಧಿಕ ಸಂಖ್ಯೆಯಲ್ಲಿ ಉಪಸ್ಥಿತರಿದ್ದ ಶ್ರೋತುೃಗಳ ಸಮ್ಮುಖದಲ್ಲಿ ಯಶಸ್ವಿಯಾಗಿ ಜರುಗಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಧಾರವಾಡದ ಕರ್ನಾಟಕ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾಽಽ ಅಮೃತ ಯಾರ್ದಿಯವರು ಮಾತನಾಡಿ ಸಂಸ್ಕೃತ ಸಾಹಿತ್ಯದ ಈ ಮಹಾನ್ ಕವಿ ತಮಗೆ ಮೊದಲಿನಿಂದಲೂ ಅತ್ಯಂತ ಮೆಚ್ಚಿನ ಕವಿಯಾಗಿದ್ದು ಸಾಹಿತ್ಯ, ಲಲಿತಕಲೆ, ನಾಟ್ಯಶಾಸ್ತ್ರಗಳನ್ನು ಒಳಗೊಂಡಂತೆ ಸಕಲ ಶಾಸ್ತ್ರಗಳಲ್ಲಿಯೂ ಪ್ರಾವೀಣ್ಯ ಪಡೆದು ವಿವಿಧ ಕೃತಿಗಳನ್ನು ರಚಿಸಿದ ಈ ಕವಿಯ ರಚನೆಗಳೆಲ್ಲವೂ ಅಪರೂಪದ ರಸಘಟ್ಟಿಗಳಾಗಿವೆ ಎಂದು ಅಭಿಪ್ರಾಯಪಟ್ಟರು. ಋತು ಸಂಹಾರ, ಕುಮಾರ ಸಂಭವ, ‘ರಘುವಂಶ’ ಮುಂತಾದ ಕಾವ್ಯಗಳು, ಮಾಲವಿಕಾಗ್ನಿಮಿತ್ರ, ವಿಕ್ರಮೋರ್ವಶೀಯ, ಅಭಿಜ್ಞಾನ, ಶಾಕುಂತಲದಂತಹ ನಾಟಕಗಳೆಲ್ಲವೂ ಉಪಮಾಲಂಕಾರದಿಂದ ತುಂಬಿ ನಿಂತಿವೆ. ‘ಮೇಘಧೂತ’ವೆಂಬ ಖಂಡಕಾವ್ಯವಂತೂ ಪ್ರಕೃತಿ ವರ್ಣನೆ, ಪ್ರೇಮಿಗಳ ವಿರಹ ವರ್ಣನೆಗಳ ಚಿತ್ರಮಾಲೆಯಾಗಿ ಮೂಡಿ ಬಂದಿದೆ ಎಂದು ಕಾಳಿದಾಸನ ಅದ್ಭುತ ಪ್ರತಿಭೆಯನ್ನು ಡಾಽಽ ಅಮೃತ ಯಾರ್ದಿ ರುಚಿಪೂರ್ಣವಾಗಿ ತೆರೆದಿಡುತ್ತ ಶ್ರೋತೃ ವೃಂದದ ಮನ ತಣಿಸಿದರು. ಕಾರ‌್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಕವಿ, ಚಿಂತಕ, ಅನುವಾದಕ ಆನಂದ ಝುಂಜರವಾಡರು ಕವಿವರ‌್ಯ ದ.ರಾ. ಬೇಂದ್ರೆಯವರ “ಸಖೀಗೀತೆ” ಮತ್ತು ಬೇಂದ್ರೆಯವರೇ ಕನ್ನಡದಲ್ಲಿ ಅನುವಾದಿಸಿದ ‘ಮೇಘದೂತ’ದ ಅಂತಃ ಸಂಬಂಧಗಳ ಬಗ್ಗೆ ಮಾತನಾಡಿ ಕವಿ ಕಾಳಿದಾಸನ ಸಾಹಿತ್ಯಿಕ ಕೃತಿಗಳ ತಾತ್ವಿಕ ಚಿಂತನೆಗಳನ್ನು ಮಂಡಿಸಿದರು.ಅನ್ವೇಷಣ ಕೂಟದ ಅಧ್ಯಕ್ಷ ನರಸಿಂಹ ಪರಾಂಜಪೆ ಎಲ್ಲರನ್ನೂ ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿದರು. ವೆಂಕಟೇಶ ದೇಸಾಯಿ ಕಾರ‌್ಯಕ್ರಮ ನಿರೂಪಿಸಿದರು, ಅನಿಲ ಕಾಖಂಡಿಕಿ ವಂದಿಸಿದರು.ಗಣ್ಯರಾದ ಡಾಽಽ ಅರವಿಂದ ಯಾಳಗಿ, ಡಾ. ರಾಜಶೇಖರ ಜಾಡರ, ಡಾಽಽ ಹ.ವೆಂ. ಕಾಖಂಡಿಕಿ, ರವಿ ಜೋಶಿ, ಶ್ರೀಧರ ಗಾಂವಕರ, ಎಚ್‌.ಎಮ್‌. ಪಾಟೀಲ, ಡಾಽಽ ಮೋಹನ ಸುಂಕದ, ರಾಜೀವ ಪಾಟೀಲ ಕುಲಕರ್ಣಿ, ಬಿ.ಆಯ್‌. ಈಳಿಗೇರ, ಗೋವಿಂದ ಚಿಪಳೂಣಕರ, ಡಾಽಽ ಅರುಣ ಅಂಗಡಿ, ವಿ.ಎಸ್‌. ಕುಲಕರ್ಣಿ, ಶ್ರೀಪಾದ ನಾಡಗೀರ, ಜೋಸೇಫ್ ಮಲ್ಲಾಡಿ, ಹಿರಿಯ ಚಿತ್ರಕಲಾವಿದ ಎಮ್‌.ಆರ್‌. ಬಾಳೀಕಾಯಿ, ಜಿ.ಎನ್‌. ಇನಾಮದಾರ, ಕೆ.ಸಿ. ಪುರಾಣಿಕಮಠ, ಅನಂತ ಸಿದ್ಧೇಶ್ವರ, ಎಸ್‌.ಎಸ್‌. ಬಂಗಾರಿಮಠ, ಸಂಜೀವ ಯಾರ್ದಿ, ಅವಿನಾಶ ರಸಾಳಕರ, ಆನಂದ ಕುಲಕರ್ಣಿ, ಎನ್‌.ಎಸ್‌. ಗಂಜೀಹಾಳ, ಎಸ್‌. ಎಮ್‌. ದೇಶಪಾಂಡೆ, ಮಾಲತಿ ಮುದಕವಿ, ಡಾಽಽ ವಿಜಯಾ ತೇಲಂಗ, ಡಾಽಽ ಪ್ರಜ್ಞಾ ಮತ್ತಿಹಳ್ಳಿ, ಸರೋಜಾ ಕುಲಕರ್ಣಿ, ಸೀಮಾ ಪರಾಂಜಪೆ, ಮುಂತಾದವರು ಉಪಸ್ಥಿತರಿದ್ದರು.