ಕಲಾಲ್ ಸಮಾಜ ಸಣ್ಣ ಸಮುದಾಯವಾದರೂ ಶ್ರಮಿಕ ಸಮಾಜ: ಶಾಸಕ ಯಾಸೀರ್ ಖಾನ್ ಪಠಾಣ್

ಕಲಾಲ್ ಸಮಾಜ ಸಣ್ಣ ಸಮುದಾಯವಾದರೂ ಶ್ರಮಿಕ ಸಮಾಜ: ಶಾಸಕ ಯಾಸೀರ್ ಖಾನ್ ಪಠಾಣ್ Kalal Samaj is a small community but a hardworking society: MLA Yasir Khan Pathan

ಲೋಕದರ್ಶನ ವರದಿ  

 ಶಿಗ್ಗಾಂವಿ 01:  ಕಲಾಲ್ ಸಮಾಜ ಸಣ್ಣ ಸಮುದಾಯವಾಗಿದ್ದರೂ ಶ್ರಮಿಕ ಸಮಾಜವಾಗಿದೆ. ಸಮಾಜದ ಅಭಿವೃದ್ಧಿಗೆ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಶಾಸಕ ಯಾಸೀರ್ ಖಾನ್ ಪಠಾಣ್ ಹೇಳಿದರು.  

ಪಟ್ಟಣದ ಸೂರ್ಯವಂಶಿ ಕ್ಷತ್ರಿಯ ಕಲಾಲ್ ಖಾಟಿಕ್ ಸಮಾಜ ಹಾಗೂ ಸೂರ್ಯವಂಶಿ ಕ್ಷತ್ರಿಯ ಕಲಾಲ್ ಖಾಟಿಕ್ ಸಮಾಜದ ಯುವ ಘಟಕ ಶಿಗ್ಗಾಂವಿ ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ಸೀತಾರಾಮ ದೇವಸ್ಥಾನ ಹಾಗೂ ಶ್ರೀ ಸೀತಾರಾಮ ಸಭಾಭವನ ನಿರ್ಮಾಣದ ಭೂಮಿಪೂಜೆ ಮತ್ತು ಅಡಿಗಲ್ಲು ಸಮಾರಂಭದಲ್ಲಿ ಅವರು ಮಾತನಾಡಿದರು.  

ಸಮಾಜದ ಸಭಾಭವನ ನಿರ್ಮಾಣಕ್ಕೆ ಈಗಾಗಲೇ ಮೊದಲ ಹಂತದಲ್ಲಿ ?25 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ?25 ಲಕ್ಷ ಅನುದಾನ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ ಅವರು, ಕಲಾಲ್ ಸಮಾಜದ ಸಮುದಾಯ ಭವನ ನಿರ್ಮಾಣವನ್ನು ಸಂಪೂರ್ಣಗೊಳಿಸುವ ಕಾರ್ಯಕ್ಕೆ ಸಹಕಾರ ನೀಡುವುದಾಗಿ ತಿಳಿಸಿದರು.  

ದ್ವೇಷ ಮತ್ತು ಅಸೂಯೆಗಳನ್ನು ಬದಿಗೊತ್ತಿ ಪ್ರೀತಿ, ವಿಶ್ವಾಸ ಹಾಗೂ ಸೌಹಾರ್ದತೆಯ ಮನೋಭಾವದಿಂದ ಸಮಾಜದ ಅಭಿವೃದ್ಧಿಗೆ ಮುಂದಾದಾಗ ಮಾತ್ರ ಸಮಾನತೆ ಸಾಧಿಸಲು ಸಾಧ್ಯ. ಕಲಾಲ್ ಸಮಾಜದವರು ಯಾವುದೇ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿರುವುದನ್ನು ತಾವು ಕಂಡಿಲ್ಲ. ಸಣ್ಣ ಸಮುದಾಯವಾದರೂ ಸಮಾಜದವರು ಒಗ್ಗಟ್ಟಿನಿಂದ ಇರಬೇಕು ಎಂದು ಶಾಸಕ ಪಠಾಣ್ ಹೇಳಿದರು.  

ಶಿಗ್ಗಾಂವಿ ವಿರಕ್ತಮಠದ ಸಂಗನಬಸವ ಮಹಾಸ್ವಾಮೀಜಿ ಅವರ ಆಶೀರ್ವಾದ ಎಲ್ಲರ ಮೇಲಿರಲಿ. ಸಮಾಜದ ಅಭಿವೃದ್ಧಿಗೆ ಎಲ್ಲರೂ ಒಗ್ಗಟ್ಟಿನಿಂದ ಕೈಜೋಡಿಸಬೇಕು ಎಂದು ಅವರು ಆಶಿಸಿದರು.  ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮನಗೌಡ ಬೇವಿನಮರದ ಮಾತನಾಡಿ, ಸರ್ಕಾರ ಮಹಿಳೆಯರಿಗೆ ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಹಲವು ಯೋಜನೆಗಳ ಮೂಲಕ ಶಕ್ತಿ ನೀಡುತ್ತಿದೆ. ಇದರ ಸದುಪಯೋಗ ಪಡೆದುಕೊಂಡು ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದು ಹೇಳಿದರು.