ಲಕ್ಷ್ಮೇಶ್ವರ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲು ಸರ್ಕಾರಕ್ಕೆ ಕರವೇ ಮನವಿ
KaRaVe urges the government to declare Lakshmeshwar taluk a drought-hit area
ಲಕ್ಷ್ಮೇಶ್ವರ, ಜು.09: ಲಕ್ಷ್ಮೇಶ್ವರ ತಾಲೂಕನ್ನು ತಕ್ಷಣವೇ ಬರಪೀಡಿತ ಪ್ರದೇಶವೆಂದು ಘೋಷಿಸಿ, ರೈತರಿಗೆ ವಿಶೇಷ ಪರಿಹಾರ, ಬೆಳೆ ವಿಮೆ, ಸಾಲ ಮನ್ನಾ ಹಾಗೂ ತುರ್ತು ನೆರವು ನೀಡುವಂತೆ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಸ್ವಾಭಿಮಾನಿ ಸೇನೆ ಸರ್ಕಾರಕ್ಕೆ ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಅಧ್ಯಕ್ಷ ಶರಣು ಗೋಡಿ, 2025-26ನೇ ಸಾಲಿನ ಬೆಳೆ ವಿಮೆ ಜಾರಿಗೆ ತರಬೇಕು ಹಾಗೂ 2026-27ನೇ ಸಾಲಿನ ಮುಂಗಾರು ಮಳೆಯ ಕೊರತೆಯಿಂದ ತಾಲೂಕಿನಲ್ಲಿ ಹೆಸರು, ಜೋಳ, ಮೆಣಸಿನಕಾಯಿ, ಹತ್ತಿ, ತೊಗರಿ ಸೇರಿದಂತೆ ಬಹುತೇಕ ಬೆಳೆಗಳು ಹಾನಿಗೊಳಗಾಗಿವೆ ಎಂದು ತಿಳಿಸಿದರು.
ಅನೇಕ ಗ್ರಾಮಗಳಲ್ಲಿ ಬೆಳೆ ಸಂಪೂರ್ಣ ನಾಶವಾಗಿದ್ದು, ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಳೆಯ ಕೊರತೆಯಿಂದ ಕೃಷಿ ಮಾತ್ರವಲ್ಲದೆ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವು ಮತ್ತು ನೀರಿನ ಸಮಸ್ಯೆಯೂ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದೆ ಎಂದು ಅವರು ಹೇಳಿದರು.
ಸರ್ಕಾರ ತಕ್ಷಣ ವಿಶೇಷ ತಂಡಗಳನ್ನು ರಚಿಸಿ ಬೆಳೆಹಾನಿ ಸಮೀಕ್ಷೆ ನಡೆಸಬೇಕು. ಹಾನಿಗೊಳಗಾದ ರೈತರಿಗೆ ಪ್ರತಿ ಎಕರೆಗೆ ಸೂಕ್ತ ಪರಿಹಾರ ಧನ ನೀಡಬೇಕು. ರಾಷ್ಟ್ರೀಯ ಹಾಗೂ ರಾಜ್ಯ ಬೆಳೆ ವಿಮೆ ಯೋಜನೆಯಡಿ ಅರ್ಹ ರೈತರಿಗೆ ವಿಮೆ ಮೊತ್ತವನ್ನು ಶೀಘ್ರ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ ಬೆಳೆ ವಿಮೆ ಪರಿಹಾರ ಹೆಸರಿನಲ್ಲಿ ಹಣ ವಸೂಲಿ ಮಾಡುತ್ತಿರುವ ಮಧ್ಯವರ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ರೈತರ ಖಾತೆಗೆ ನೇರವಾಗಿ ಡಿಬಿಟಿ (ಆಃಖಿ) ಮೂಲಕ ಪರಿಹಾರ ಧನ ಜಮಾ ಮಾಡಬೇಕು ಎಂದು ಒತ್ತಾಯಿಸಿದರು.
ಕೃಷಿ ಹಾಗೂ ಸಹಕಾರಿ ಬ್ಯಾಂಕುಗಳ ಸಾಲ ವಸೂಲಾತಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ, ಬಡ್ಡಿ ಮನ್ನಾ ಮತ್ತು ಮರುಪಾವತಿಗೆ ವಿಶೇಷ ಸೌಲಭ್ಯ ಕಲ್ಪಿಸಬೇಕು. ಕುಡಿಯುವ ನೀರು ಹಾಗೂ ಜಾನುವಾರುಗಳ ಮೇವು ಮತ್ತು ನೀರಿನ ವ್ಯವಸ್ಥೆಗೆ ವಿಶೇಷ ಅನುದಾನ ನೀಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ರಾಜ್ಯ ಸರ್ಕಾರ ಶೀಘ್ರ ಕ್ರಮ ಕೈಗೊಳ್ಳದಿದ್ದರೆ ರೈತರೊಂದಿಗೆ ಸೇರಿ ಪ್ರಜಾಸತ್ತಾತ್ಮಕ ಹಾಗೂ ಕಾನೂನುಬದ್ಧ ಹೋರಾಟ ನಡೆಸಲಾಗುವುದು ಎಂದು ಕರವೇ ಮುಖಂಡರು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಕರವೇ ಸ್ವಾಭಿಮಾನಿ ಸೇನೆಯ ತಾಲೂಕು ಅಧ್ಯಕ್ಷ ಮಹಾಂತೇಶ ಮಣಕವಾಡ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಗಗನಯಾನ ಮಿಷನ್ಗಾಗಿ ಮಹತ್ವದ ಪ್ಯಾರಾಶೂಟ್ ಏರ್ಡ್ರಾಪ್ ಪರೀಕ್ಷೆಯನ್ನು ಇಸ್ರೋ ಯಶಸ್ವಿಯಾಗಿ ನಡೆಸಿತು
ಗದಗದಲ್ಲಿ ಮಾನಸಿಕ ಅಸ್ವಸ್ಥ ಯುವತಿಯ ಮೇಲೆ ಅತ್ಯಾಚಾರ ಆರೋಪ
ಹಿಡಕಲ್ ಜಲಾಶಯದ ನೀರಿನಲ್ಲಿ ವೃದ್ದೆಯ ಶವ ಪತ್ತೆ : ಹಳೇಗುಡನಟ್ಟಿ ಬಳಿ ಘಟನೆ
ಡ್ರಗ್ ಅವೇರ್ನೆಸ್ ವೀಕ್: ಆಚರಣೆ, ಕಾರ್ಯಾಚರಣೆ 12.38 ಲಕ್ಷ ಮಾಕದ ವಶ, 16 ಪ್ರಕರಣ ದಾಖಲು, 4 ಬಂಧನ
ರಾಜ್ಯ ನೇಕಾರರ ಸಂಘದಿಂದ ನಾಳೆ ಬೆಳಗಾವಿ ಚಲೋ ಕಾರ್ಯಕ್ರಮ : ಸಿಎಂ ಮುಂದೆ ಬೇಡಿಕೆಗಳ ಪಟ್ಟಿ
ಕ್ರಿಕೇಟಿಗ್ ಧೋನಿ ಬೆಳಗಾವಿಗೆ ಕರೆಸಿ : ವಿದ್ಯಾರ್ಥಿಗಳಿಂದ ಡಿಸಿಗೆ ವಿಭಿನ್ನ ಮನವಿ 