ಬೆಂಗಳೂರು, ಜ.20 : ಕೆಎಎಸ್ ಗೆಜೆಟೆಡ್ ಪ್ರೊಬೆಷನರಿ 2015ರ ಬ್ಯಾಚ್ ನ ಆಯ್ಕೆ ಪಟ್ಟಿಯಲ್ಲಿ ವ್ಯಾಪಕ ಅವ್ಯವಹಾರ ನಡೆದಿದ್ದು, ಈ ಬಗ್ಗೆ ಕೂಡಲೇ ಸಮಗ್ರ ತನಿಖೆಗೆ ಆದೇಶಿಸಬೇಕು ಎಂದು ನೋಂದ ಕೆ.ಎ.ಎಸ್ ಅಭ್ಯರ್ಥಿಗಳ ಹಿತ ರಕ್ಷಣಾ ವೇದಿಕೆ ಆಗ್ರಹಿಸಿದೆ.
ಒಂದು ವೇಳೆ ಸರ್ಕಾರ ತನಿಖೆ ನಡೆಸದಿದ್ದರೆ ಫ್ರೀಡಂ ಪಾರ್ಕ್ ನಲ್ಲಿ ಉಗ್ರ ಹೋರಾಟ ಮಾಡುವುದಾಗಿ ಕೆಎಎಸ್ ನೊಂದ ಅಭ್ಯರ್ಥಿಗಳ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಕೆ.ಶಿವರಾಂ ಎಚ್ಚರಿಸಿದ್ದಾರೆ.
ಕೆಪಿಎಸ್ ಸಿ ಗೋಲ್ ಮಾಲ್ ಸಂಸ್ಥೆಯಾಗಿದೆ. ಹಿಂದಿನ 1998 - 99, 2006-2011 ಹಾಗೂ 2015ರ ಕರ್ನಾಟಕ ಲೋಕಸೇವಾ ಆಯೋಗ ನಡೆಸಿರುವ ಗೆಡೆಟೆಡ್ ಪ್ರೊಬೆಷನರ್ಸ್ ಹುದ್ದೆಗಳ ಎಲ್ಲಾ ಪರೀಕ್ಷೆಗಳಲ್ಲಿ ಅಕ್ರಮ, ಭ್ರಷ್ಟಾಚಾರ ನಡೆದಿದ್ದು, ಈ ಅವ್ಯವಹಾರಗಳಿಂದ ಹಲವು ಪ್ರತಿಭಾನ್ವಿತರಿಗೆ ಭಾರಿ ಅನ್ಯಾಯವಾಗಿದೆ. ಆದ್ದರಿಂದ ಮರುಮೌಲ್ಯಮಾಪನ ನಡೆಸಬೇಕು. ಸರ್ಕಾರಕ್ಕೆ ಏಳುದಿನ ಸಮಯಾವಕಾಶ ನೀಡುತ್ತಿದ್ದು, ಒಂದು ವೇಳೆ ತನಿಖೆಗೆ ಆದೇಶಿಸದಿದ್ದರೆ ಫ್ರೀಡಂಪಾರ್ಕ್ ನಲ್ಲಿ ಧರಣಿ ಸಡೆಸುವುದಾಗಿ ಅವರು ಹೇಳಿದರು.
ಕೆಪಿಎಸ್‌ಸಿಯಲ್ಲಿ ಡಿಜಿಟಲ್ ಮತ್ತು ಹೈಟೆಕ್ ಭ್ರಷ್ಟಾಚಾರ ನಡೆಯುತ್ತಿದೆ. 2015ರ ಡಿಜಿಟಲ್ ಮೌಲ್ಯಮಾಪನ ಪಾರದರ್ಶಕವಾಗಿ ನಡೆದಿಲ್ಲ. ಮೌಲ್ಯಮಾಪಕರಿಗೆ ಕೆಪಿಎಸ್‌ಸಿಯವರೇ ಯೂಸರ್ ಐಡಿ ಹಾಗೂ ಪಾಸ್ ವರ್ಡ್ ಮಾಡಿಕೊಟ್ಟಿದ್ದು, ಮೌಲ್ಯಮಾಪನ ಮುಗಿದ ಬಳಿಕ ಕೆಪಿಎಸ್‌ಸಿಯಲ್ಲಿ ಅಂಕಗಳನ್ನು ತಿರುಚಿದ್ದಾರೆ. ಇದೆಲ್ಲದರಲ್ಲೂ ವ್ಯವಸ್ಥಿತವಾಗಿ ಭ್ರಷ್ಟಾಚಾರ ನಡೆಸಿದ್ದು, ಕೂಡಲೇ ತನಿಖೆಗೆ ಆಗ್ರಹಿಸಬೇಕೆಂದು ಅವರು ಒತ್ತಾಯಿಸಿದರು.
ಪರೀಕ್ಷೆ ಬರೆದು ಒಂದು ವರ್ಷದೊಳಗೆ ಆಯ್ಕೆ ಪಟ್ಟಿ ಬಿಡುಗಡೆ ಮಾಡಬೇಕು. ಆದರೆ ಎರಡು ವರ್ಷಗಳ ಬಳಿಕ ತಾತ್ಕಾಲಿಕ ಆಯ್ಕೆ ಪಟ್ಟಿ ಬಿಡುಗಡೆ ಮಾಡಲಾಗಿದೆ. ಆದರೆ ಆಯ್ಕೆ ಪಟ್ಟಿ ನೋಡಿದಾಗ ಅದರಲ್ಲಿ ಹಲವು ಪ್ರತಿಭಾವಂತ ಅಭ್ಯರ್ಥಿಗಳು ಅವಕಾಶ ವಂಚಿತರಾಗಿದ್ದಾರೆ. ಈ ಕುರಿತು ಆಕ್ಷೇಪಣೆ ಸಲ್ಲಿಸಲು ಹೆಚ್ಚು ಅವಕಾಶ ನೀಡಿಲ್ಲ. ಆಕ್ಷೇಪಣೆ ಸಲ್ಲಿಸಲು 45 ದಿನಗಳ ಕಾಲಾವಕಾಶ ಇರುತ್ತದೆ. ಆದರೆ ಕೇವಲ ಏಳು ದಿನ ಮಾತ್ರ ಅವಕಾಶ ನೀಡಿದ್ದು, ಅದರಲ್ಲೂ ಮೂರು ದಿನ ರಜೆ ದಿನಗಳಾಗಿವೆ. 265ಕ್ಕೂ ಹೆಚ್ಚು ಆಕ್ಷೇಪಣಾ ಪತ್ರ ಸಲ್ಲಿಸಲಾಗಿದೆ. ಆದರೆ ಆಕ್ಷೇಪಣೆಯನ್ನು ತಳ್ಳಿ ಹಾಕಿ, ನ್ಯಾಯಾಲಯ ಹಾಗೂ ಕೆಎಟಿಗೆ ರಜೆ ಇರುವುದನ್ನು ನೋಡಿಕೊಂಡೇ ಅಂತಿಮ ಆಯ್ಕೆಪಟ್ಟಿ ಬಿಡುಗಡೆ ಮಾಡಲಾಗಿದೆ ಎಂದು ಶಿವರಾಂ ಆರೋಪಿಸಿದರು.
2015ರ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಪ್ರೊಬೆಷನರಿ ಆಯ್ಕೆ ಪಟ್ಟಿಯಲ್ಲಿ ಕೇವಲ ಎರಡು ಸಮುದಾಯಕ್ಕೆ ಸೇರಿದ ಅಭ್ಯರ್ಥಿಗಳನ್ನು ಹೆಚ್ಚು ಸಂಖ್ಯೆಯಲ್ಲಿ ಆಯ್ಕೆ ಮಾಡಲಾಗಿದೆ. 3A ಸಮುದಾಯಕ್ಕೆ 17 ಹುದ್ದೆಗಳು ಮೀಸಲಾಗಿದ್ದು ಆಯ್ಕೆಯಾದವರ ಸಂಖ್ಯೆ 68 ಹಾಗೂ 3B ಸಮುದಾಯಕ್ಕೆ 19 ಹುದ್ದೆ ಮೀಸಲಾಗಿದ್ದರೆ 66 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಈ ನೇಮಕಾತಿ ಹಿಂದೆ ಕಳೆದ ಸಮ್ಮಿಶ್ರ ಸರ್ಕಾರದ ಪ್ರಭಾವಿ ಸಚಿವರ ಕೈವಾಡವಿದೆ ಎಂದು ದೂರಿದರು.
ಪರೀಕ್ಷೆ ಬರೆದ ಅಭ್ಯರ್ಥಿಗಳು ಒಂದು ಕಡೆ ಕಾನೂನು ಹೋರಾಟ ನಡೆಸುತ್ತಿದ್ದರೆ ಮತ್ತೊಂದೆಡೆ ಬೀದಿಗಿಳಿದು ಹೋರಾಟ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಕರ್ನಾಟಕ ಲೋಕ ಸೇವಾ ಆಯೋಗ ಕರ್ನಾಟಕದ ಲೂಟಿಕೋರರ ಸಂಸ್ಥೆಯಾಗಿದ್ದು, ಅವ್ಯವಹಾರದ ಕುರಿತು ಕ್ರಮ ತೆಗೆದುಕೊಳ್ಳಲು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರೂ ಸೂಕ್ತ ರೀತಿಯಲ್ಲಿ ಸ್ಪಂದಿಸಿಲ್ಲ ಎಂದರು.
ಕೆಪಿಎಸ್ ಸಿಯ ಕೆಲವು ಸದಸ್ಯರಿಗೆ ಮೌಲ್ಯಮಾಪನ ಕೊಠಡಿಗೆ ಪ್ರವೇಶ ನಿರ್ಬಂಧವಿದೆ. ಆದರೂ ಕೆಲವರು ಕೊಠಡಿಗೆ ಪ್ರವೇಶಿಸಿದ್ದು ಇದು ಹಲವಾರು ಅಕ್ರಮಕ್ಕೆ ಎಡೆ ಮಾಡಿಕೊಟ್ಟಿದೆ. ಹಿಂದೆ ಸಂದರ್ಶನಕ್ಕೆ ಆಯ್ಕೆಯಾಗದ ಅಭ್ಯರ್ಥಿಗಳ ಅಂಕಪಟ್ಟಿಯನ್ನು ಅವರಿಗೆ ಈ ಮೇಲ್ ಮಾಡಲಾಗುತ್ತಿತ್ತು. ಆದರೆ ಈಗ ಅಂಕಪಟ್ಟಿಯನ್ನು ನೀಡುತ್ತಿಲ್ಲ. ಆಯೋಗವು ಎಲ್ಲಿಯವರೆಗೆ ಪಾರದರ್ಶಕತೆಯಿಂದ ಕೆಲಸ ನಿರ್ವಹಿಸುವುದಿಲ್ಲವೋ ಅಲ್ಲಿಯವರೆಗೆ ಭ್ರಷ್ಟಾಚಾರ, ಅಕ್ರಮಗಳಿಗೆ ಕೊನೆಯಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನೊಂದ ಅಭ್ಯರ್ಥಿ ಆಯೇಷಾ ಮಾತನಾಡಿ, ಹಿಂದಿನ ಸರ್ಕಾರದ ಪ್ರಭಾವಿ ಸಚಿವರೊಬ್ಬರು ಈ ಹಗರಣದಲ್ಲಿ ಭಾಗಿಯಾಗಿದ್ದಾರೆ. ಸಚಿವರ ಹಸ್ತಕ್ಷೇಪದ ಕುರಿತು ದಾಖಲೆಗಳನ್ನು ಕಲೆ ಹಾಕಲಾಗುತ್ತಿದೆ. ಮುಂದಿನ ದಿನಗಳಲ್ಲಿ ದಾಖಲೆ ಸಮೇತ ಹೆಸರು ಬಹಿರಂಗ ಪಡಿಸುತ್ತೇವೆ.
ಎಂದು ಅವರು ಹೇಳಿದರು.