ತೀವ್ರ ವಿರೋಧದ ನಡುವೆಯೂ ಕೆಪಿಎಸ್ ಮ್ಯಾಗ್ನೆಟ್ ಜಾರಿ: ಎಐಡಿಎಸ್‌ಓ ಖಂಡನೆ!

ತೀವ್ರ ವಿರೋಧದ ನಡುವೆಯೂ ಕೆಪಿಎಸ್ ಮ್ಯಾಗ್ನೆಟ್ ಜಾರಿ: ಎಐಡಿಎಸ್‌ಓ ಖಂಡನೆ!  KPS Magnet implemented despite strong opposition: AIDSO condemns!

ಬೆಳಗಾವಿ 07: ಗ್ರಾಮೀಣ ಭಾಗದ 40 ಸಾವಿರಕ್ಕೂ ಅಧಿಕ ಶಾಲೆಗಳನ್ನು ಮುಚ್ಚಿ ಪಂಚಾಯಿತಿಗೊಂದರಂತೆ ಕೇವಲ 6 ಸಾವಿರ ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳನ್ನು ಸ್ಥಾಪಿಸಲು ಕರ್ನಾಟಕ ರಾಜ್ಯ ಸರ್ಕಾರವು ಮುಂದಾಗಿದೆ. ಮೊದಲ ಹಂತದಲ್ಲೇ 900 ಮ್ಯಾಗ್ನೆಟ್ ಶಾಲೆ ಮಾಡಲು ಆದೇಶಿಸಲಾಗಿದೆ.   

ಈ ಉದ್ದೇಶಕ್ಕಾಗಿ ಏಷಿಯನ್ ಡೆವಲಪ್ ಮೆಂಟ್ ಬ್ಯಾಂಕಿನಿಂದ 2500 ಕೋಟಿ ಸಾಲ ಪಡೆಯಲಾಗಿದೆ. ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ಕಲ್ಯಾಣ ಕರ್ನಾಟಕ ಭಾಗದ ಜನರ ಏಳಿಗೆಗಾಗಿ ಇರುವ KKRDB ಮತ್ತು ಗಣಿಗಾರಿಕೆಯಿಂದ ಬದುಕು ಕಳೆದುಕೊಂಡ 10 ತಾಲೂಕಿನ ಜನರ ಪುನಶ್ಚೇತನಕ್ಕಾಗಿ ಇರುವ KMERC ನಿಧಿಗಳಿಂದ 700ಕೋಟಿ ಹಣ ಪಡೆಯಲಾಗಿದೆ. ಅಲ್ಪಸಂಖ್ಯಾತರ ನಿಧಿಯಿಂದ 100ಕೋಟಿ ಪಡೆಯಲಾಗಿದೆ.   

ಜನಕಲ್ಯಾಣಕ್ಕಾಗಿ ಬಳಸಬೇಕಾದ ನಿಧಿಯನ್ನು ಅದೇ ಜನರ ಮಕ್ಕಳು ಓದುವ ಗ್ರಾಮೀಣ ಶಾಲೆಗಳನ್ನು ಮುಚ್ಚಲು ಬಳಸಲಾಗುತ್ತಿದೆ. ಇದು ಈ ಜನರಿಗೆ ಮಾಡುತ್ತಿರುವ ವಿಶ್ವಾಸ ದ್ರೋಹವಾಗಿದೆ. ಮೂಲಭೂತ ಸೌಲಭ್ಯಗಳಿಲ್ಲದೇ ನರಳುತ್ತಿರುವ ಶಾಲೆಗಳ ದುರಸ್ತಿಗೆ ಯಾವುದೇ ಕಾರಣಕ್ಕೂ ಈ ಅನುದಾನ ಬಳಸಬಾರದೆಂಬ ಆಘಾತಕಾರಿ ಅಂಶವನ್ನು ಡಿ. 30ರಂದು ಹೊರಡಿಸಿರುವ ಈ ಆದೇಶದಲ್ಲಿ ತಿಳಿಸಲಾಗಿದೆ.  

ಊರಿನ ಶಾಲೆಗಳನ್ನು ಕೊಂದು ಸೃಷ್ಟಿಸಲಾಗುತ್ತಿರುವ ಈ ಕೆಪಿಎಸ್ ಶಾಲೆಗಳಲ್ಲಿ ಕೌಶಲ್ಯದ ಹೆಸರಿನಲ್ಲಿ ಬಡಮಕ್ಕಳನ್ನು ಕಾರ್ಮಿಕರನ್ನಾಗಿಸುವ ವೃತ್ತಿಶಿಕ್ಷಣವನ್ನು 6ನೇ ತರಗತಿಯಿಂದಲೇ ಖಡ್ಡಾಯಗೊಳಿಸಲಾಗಿದೆ. ಮಣ್ಣಿನ ಹಣತೆ ತಯಾರಿಸುವುದು, ಅಡಿಕೆ ಸುಲಿಯುವುದು, ಟೈಲರಿಂಗ್ ಸೇರಿದಂತೆ ಮುಂತಾದ ಕಸುಬುಗಳನ್ನು ಕಲಿಸಲಾಗುವುದು. ಈ ಕುರಿತಾದ ಪಠ್ಯಕ್ರಮವನ್ನು ಉದ್ಯಮ ಪಾಲುದಾರರೊಂದಿಗೆ ರೂಪಿಸಲು ಹೊರಟಿರುವ ಸರ್ಕಾರವು ರೈತ-ಕಾರ್ಮಿಕರ ಮಕ್ಕಳನ್ನು ಮತ್ತೆ ಅವರ ಕಾರ್ಖಾನೆಗಳಲ್ಲಿ ಅಗ್ಗದ ಕೂಲಿಗೆ ದೂಡುವ ಹುನ್ನಾರವನ್ನು ರಚಿಸಿದೆ. ಶಿಕ್ಷಣವು ಚಾರಿತ್ರ್ಯ ನಿರ್ಮಾಣದ ಪ್ರಕ್ರಿಯೆಯಾಗಬೇಕೆಂಬ ದೇಶದ ಮಹಾನ್ ವ್ಯಕ್ತಿಗಳ ಆಶಯಕ್ಕೆ ತಿಲಾಂಜಲಿಯಿಟ್ಟು ಕನಿಷ್ಟ ವಿಷಯಗಳ ಜ್ಞಾನ ಹೊಂದಿರದ, ಚಿಂತನೆಯ ಪರಿವೆಯಿಲ್ಲದ ಯಂತ್ರಮಾನವರನ್ನು ಸೃಷ್ಟಿಸುವ ನಾಗರೀಕತೆ ವಿರೋಧಿ ಕೆಲಸಕ್ಕೆ ಕರ್ನಾಟಕ ರಾಜ್ಯ ಸರ್ಕಾರವು ಮುಂದಾಗಿದೆ.  

ಎಐಡಿಎಸ್‌ಓ ನೇತೃತ್ವದಲ್ಲಿ ರಾಜ್ಯದಲ್ಲೆಡೆ ಜನ ಹೋರಾಟ ನಡೆಯುತ್ತಿದೆ. ಸಾವಿರಾರು ಸಂಖ್ಯೆಯಲ್ಲಿ ಪಾಲಕರು ಹಾಗೂ ಗ್ರಾಮಸ್ಥರು ಬೀದಿಗಿಳಿದು ಊರಿನ ಶಾಲೆಗಳನ್ನು ಮುಚ್ಚುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ತೀವ್ರ ಜನವಿರೋಧದ ನಡುವೆಯೂ ಸರ್ಕಾರವು ಈ ಕುಕೃತ್ಯವನ್ನು ಮುಂದುವರೆಸಿದೆ. ಜನಾಭಿಪ್ರಾಯವನ್ನು ಧಿಕ್ಕರಿಸಿರುವ ಸರ್ಕಾರದ ಈ ನಿರಂಕುಶ ಮತ್ತು ಅಪ್ರಜಾತಾಂತ್ರಿಕ ನಡೆಯನ್ನು ಎಐಡಿಎಸ್‌ಓ ಅತ್ಯುಗ್ರ ಪದಗಳಲ್ಲಿ ಖಂಡಿಸುತ್ತದೆ. ಕೂಡಲೇ ಕರಾಳ ಕೆಪಿಎಸ್ ಮ್ಯಾಗ್ನೆಟ್ ಯೋಜನೆಯನ್ನು ಹಿಂಪಡೆಯಬೇಕು ಮತ್ತು ಶಿಕ್ಷಕರು ಹಾಗೂ ಸೌಲಭ್ಯಗಳ ಕೊರತೆಯಿಂದ ನರಳುತ್ತಿರುವ ರಾಜ್ಯದ ಸರ್ಕಾರಿ ಶಾಲೆಗಳಿಗೆ ಸಮರ​‍್ಕ ಸೌಲಭ್ಯ ನೀಡಿ ಅಭಿವೃದ್ಧಿಪಡಿಸಬೇಕೆಂದು ರಾಜ್ಯದ ವಿದ್ಯಾರ್ಥಿಗಳು ಶಿಕ್ಷಕರು ಪಾಲಕರು ಹಾಗೂ ಶಿಕ್ಷಣ ಪ್ರೇಮಿ ಜನತೆಯ ಪರವಾಗಿ ಸರ್ಕಾರವನ್ನು ಆಗ್ರಹಿಸುತ್ತದೆ.