ಕೆಐಡಿಬಿ ಬ್ರೋಕರ್ ಕೆಲಸ : ಭೂ ಸಂತ್ರಸ್ಥ ರೈತರಿಂದ ಅತಿ ಶೀಘ್ರದಲ್ಲಿ ಭೂ ಪ್ರವೇಶ : ವಿ.ರಾಜಶೇಖರ

ಕೆಐಡಿಬಿ ಬ್ರೋಕರ್ ಕೆಲಸ : ಭೂ ಸಂತ್ರಸ್ಥ ರೈತರಿಂದ ಅತಿ ಶೀಘ್ರದಲ್ಲಿ ಭೂ ಪ್ರವೇಶ : ವಿ.ರಾಜಶೇಖರ KIDB Broker Work: Land access for land-affected farmers at the earliest: V. Rajashekar

ಲೋಕದರ್ಶನ ವರದಿ

ಕಂಪ್ಲಿ 15  : ಭೂ ಸಂತ್ರಸ್ಥ ರೈತರು ಹಲವು ದಿನಗಳಿಂದ ನಿರಂತರ ಹೋರಾಟ ಮತ್ತು ಉಪವಾಸ ಸತ್ಯಾಗ್ರಹ ಮಾಡಿಕೊಂಡು ಬಂದಿದ್ದು, ಆದರೆ, ಇಲ್ಲಿತನಕ ಹೋರಾಟಕ್ಕೆ ನ್ಯಾಯ ಸಿಕ್ಕಿಲ್ಲ. ಆದ್ದರಿಂದ ಭೂ ಸಂತ್ರಸ್ಥ ರೈತರು ಅತಿ ಶೀಘ್ರದಲ್ಲಿ ಭೂ ಪ್ರವೇಶ ಮಾಡಲಿದ್ದಾರೆ ಎಂದು ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ವಿ.ರಾಜಶೇಖರ ಹೇಳಿದರು.ಸಮೀಪದ ಕುಡತಿನಿ ಪಟ್ಟಣದಲ್ಲಿ ಭೂ ಸಂತ್ರಸ್ತರ ರೈತರ ಹೋರಾಟವು ಗುರುವಾರ 1245ನೇ ದಿನಕ್ಕೆ ಕಾಲಿಡುವ ಜೊತೆಗೆ ಮೇ.12ರಿಂದ ಆರಂಭಗೊಂಡ ಮೂರನೇ ದಿನದ ಸರದಿ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಬೆಂಬಲ ನೀಡಿದ ನಂತರ ಮಾತನಾಡಿ, ಕುಡತಿನಿಯಲ್ಲಿ ರೈತರು ಭೂ ಸ್ವಾಧೀನ ಮತ್ತು ಅಕ್ರಮ ಭೂ ವರ್ಗಾವಣೆ ಖಂಡಿಸಿ ದೀರ್ಘಕಾಲದಿಂದ ನಿರಂತರ ಹೋರಾಟ ನಡೆಸುತ್ತಿದ್ದಾರೆ.

2012ರಲ್ಲಿ ಅರ್ಸೆಲರ್ ಮಿತ್ತಲ್ ಕಂಪನಿಗಾಗಿ ಕೆಐಎಡಿಬಿ ಅತಿ ಕಡಿಮೆ ಬೆಲೆಗೆ ಸ್ವಾಧೀನಪಡಿಸಿಕೊಂಡಿದ್ದ ಜಮೀನನ್ನು, ಇದುವರೆಗೂ ಕಂಪನಿಯು ಉಪಯೋಗಿಸಿರಲಿಲ್ಲ. ಈಗ ಈ ಜಮೀನನ್ನು ಜಿಂದಾಲ್ ಕಂಪನಿಗೆ ಅಕ್ರಮವಾಗಿ ವರ್ಗಾವಣೆ ಮಾಡುತ್ತಿರುವುದು ಸರಿಯಲ್ಲ. ಕೆಐಡಿಬಿ ಬ್ರೋಕರ್ ಕೆಲಸ ಮಾಡುತ್ತಿದೆ. ಭೂ ಸಂತ್ರಸ್ತ ರೈತರಿಗೆ ನ್ಯಾಯಯುತ ಪರಿಹಾರ ಒದಗಿಸುವ ಜೊತೆಗೆ ಮತ್ತು ಅಕ್ರಮ ಭೂ ವರ್ಗಾವಣೆಯನ್ನು ತಕ್ಷಣವೇ ತಡೆಯಬೇಕಾಗಿದೆ. ನಮ್ಮ ಊರು ನಮ್ಮ ಹೊಣೆ ಎಂಬಂತೆ ಸ್ಥಳೀಯ ರೈತರ ಹೋರಾಟಕ್ಕೆ ಸದಾ ಬೆಂಬಲವಾಗಿ ನಿಂತುಕೊಳ್ಳುತ್ತೇವೆ ಎಂದರು.

ಭೂ ಸಂತ್ರಸ್ಥರ ಹೋರಾಟ ಸಮಿತಿ ಗೌರವಾಧ್ಯಕ್ಷ ಯು.ಬಸವರಾಜ ಮಾತನಾಡಿ, ಭೂ ಬೆಲೆಯಲ್ಲಿ ರೈತರಿಗೆ ಮೋಸವಾಗಿದ್ದು, ನ್ಯಾಯ ಕೊಡಿಸಬೇಕಾದ ಸಿಎಂ ಸಿದ್ದರಾಮಯ್ಯ ಮೂಗಿಗೆ ತುಪ್ಪ ಸವರುವ ಜೊತೆಗೆ ಮೌನವಹಿಸಿರುವುದು ದುರ್ಧೈವವಾಗಿದೆ. ಕುಡತಿನಿ ಸುತ್ತಮುತ್ತಲಿನ ಸಾವಿರಾರು ಎಕರೆ ಭೂಮಿಯನ್ನು ಜಿಂದಾಲ್‌ಗೆ ವರ್ಗಾಯಿಸುವ ಸರ್ಕಾರದ ನಿರ್ಧಾರ ತುಂಬ ಖಂಡನೀಯವಾಗಿದೆ. ಎರಡನೇ ಹಂತದಲ್ಲಿ ಹೋರಾಟ ಮಾಡಲಾಗುತ್ತಿದೆ. ಈ ಹಿಂದೆ ಸಿಎಂ ಸಿದ್ದರಾಮಯ್ಯ ಅವರು ಹೋರಾಟ ಸ್ಥಳಕ್ಕೆ ಭೇಟಿ ನೀಡಿ ಪರೀಶೀಲಿಸಿ ನ್ಯಾಯ ಒದಗಿಸಿಕೊಡುವ ಭರವಸೆ ನೀಡಿದ್ದರು.

ಮತ್ತು ಸಿಎಂ ಅವರನ್ನು ಭೇಟಿ ಮಾಡಿ, ಚರ್ಚಿಸಿ ಪರೀಶೀಲಿಸಿ ಸೂಕ್ತಕ್ರಮದ ಭರವಸೆ ನೀಡಿದ್ದರು. ಇಲ್ಲಿನ ನಿರಂತರ ಹೋರಾಟಕ್ಕೆ ಸ್ಥಳೀಯ ಜನಪ್ರತಿನಿಧಿಗಳು ಪಕ್ಷತೀತವಾಗಿ ಬೆಂಬಲ ನೀಡಿದ್ದಾರೆ. ಸರ್ಕಾರ ಗಂಭೀರವಾಗಿ ಕ್ರಮಕೈಗೊಳ್ಳುತ್ತಿಲ್ಲ. ಮೇ.16ರ ಶನಿವಾರದಂದು ರೈತರೆಲ್ಲರೂ ಜಮೀನು ಪ್ರವೇಶ ಮಾಡಲಿದ್ದೇವೆ. ಮತ್ತು ಹೋರಾಟ ತಡೆದರೆ, ಮೇ.25ರಂದು ರಸ್ತೆ ಚಳುವಳಿ, ಜೂ.1ಕ್ಕೆ 500 ಬೈಕ್ ರಾ​‍್ಯಲಿ ಮಾಡುತ್ತೇವೆ. ಜೂ.15ರೊಳಗೆ ಬಳ್ಳಾರಿ ಬಂದ್ ಮಾಡಿ, ಮತ್ತು ಅದೇ ದಿನದಂದು ರಾಜ್ಯ ಬಂದ್ ಮಾಡುವ ಸಾಧ್ಯತೆ ಇದೆ.

ರೈತರಿಗೆ ನ್ಯಾಯ ಸಿಗುವರೆಗೂ ಹೋರಾಟ ಮಾಡುತ್ತೇವೆ ಎಂದರು.ದಲಿತ ಮುಖಂಡ ಸಿ.ಆನಂದ ಡಾ ಬಿ.ಆರ್ ಅಂಬೇಡ್ಕರ್ ಅವರ ಕ್ರಾಂತಿ ಗೀತೆ ಹಾಡುವ ಮೂಲಕ ಹೋರಾಟಕ್ಕೆ ಸಾಥ್ ನೀಡಿದರು.ಈ ಸಂದರ್ಭದಲ್ಲಿ ಮುಖಂಡರಾದ ಜಂಗ್ಲಿ ಸಾಬ್, ಅಂಬರೇಶ, ಮಹಾಂತೇಶ, ಜೆ.ಎಸ್‌.ವೆಂಕಟರಮಣಬಾಬು, ಜಾಕೀರ್, ಪಂಪಾಪತಿ, ತಿಪ್ಪೇಸ್ವಾಮಿ, ಲೆನಿನ್, ಸಿದ್ದಪ್ಪ, ಸತ್ಯಬಾಬು ಸೇರಿದಂತೆ ರೈತರಿದ್ದರು.