ಮೊದಗಾ ದೇವಸ್ಥಾನದ 93 ಎಕರೆ ಭೂಮಿ ಸ್ವಾಧೀನ ಪ್ರಕ್ರಿಯೆ ಕೈಬಿಡಲು ಕೆಎಚ್‌ಬಿ ಒಪ್ಪಿಗೆ: ಲಕ್ಷ್ಮೀ ಹೆಬ್ಬಾಳಕರ್ ನೇತೃತ್ವದ ನಿಯೋಗದ ಮನವಿಗೆ ಸ್ಪಂದನೆ

ಮೊದಗಾ ದೇವಸ್ಥಾನದ 93 ಎಕರೆ ಭೂಮಿ ಸ್ವಾಧೀನ ಪ್ರಕ್ರಿಯೆ ಕೈಬಿಡಲು ಕೆಎಚ್‌ಬಿ ಒಪ್ಪಿಗೆ: ಲಕ್ಷ್ಮೀ ಹೆಬ್ಬಾಳಕರ್ ನೇತೃತ್ವದ ನಿಯೋಗದ ಮನವಿಗೆ ಸ್ಪಂದನೆ KHB Agrees to Drop Acquisition of 93 Acres of Modaga Temple Land Following Representation by Lakshmi

ಬೆಂಗಳೂರು/ಬೆಳಗಾವಿ, ಜುಲೈ 18: ಬೆಳಗಾವಿ ಗ್ರಾಮೀಣ ಕ್ಷೇತ್ರದ ಮೊದಗಾ ಗ್ರಾಮದ ಶ್ರೀ ಮಾರುತಿ ದೇವಸ್ಥಾನಕ್ಕೆ ಸೇರಿದ ಸುಮಾರು 92 ಎಕರೆ 39 ಗುಂಟೆ ಭೂಮಿಯನ್ನು ಕರ್ನಾಟಕ ಹೌಸಿಂಗ್ ಬೋರ್ಡ್ (ಕೆಎಚ್‌ಬಿ) ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಗೆ ಮುಂದಾಗಿದ್ದ ಹಿನ್ನೆಲೆಯಲ್ಲಿ, ಮಾಜಿ ಸಚಿವೆ ಹಾಗೂ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ನೇತೃತ್ವದ ನಿಯೋಗ ಶನಿವಾರ ಬೆಂಗಳೂರಿನ ಕೆಎಚ್‌ಬಿ ಪ್ರಧಾನ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿತು.

ನಿಯೋಗದಲ್ಲಿ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳಕರ್, ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು, ಗ್ರಾಮದ ಪಂಚ ಕಮಿಟಿ ಮುಖಂಡರು ಹಾಗೂ ಹಿರಿಯರು ಉಪಸ್ಥಿತರಿದ್ದರು.

ಸಭೆಯಲ್ಲಿ ಲಕ್ಷ್ಮೀ ಹೆಬ್ಬಾಳಕರ್ ಅವರು ಶ್ರೀ ಮಾರುತಿ ದೇವಸ್ಥಾನದ ಧಾರ್ಮಿಕ, ಐತಿಹಾಸಿಕ ಹಾಗೂ ಸಾಂಸ್ಕೃತಿಕ ಮಹತ್ವವನ್ನು ಕೆಎಚ್‌ಬಿ ಅಧಿಕಾರಿಗಳ ಗಮನಕ್ಕೆ ತಂದರು. ದೇವಸ್ಥಾನದ ಭೂಮಿಗೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಿ, ಜನರ ಧಾರ್ಮಿಕ ಭಾವನೆಗಳನ್ನು ಪರಿಗಣಿಸಿ ಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡುವಂತೆ ಮನವಿ ಮಾಡಿದರು.

ಮನವಿಗೆ ಸ್ಪಂದಿಸಿದ ಕೆಎಚ್‌ಬಿ ಅಧಿಕಾರಿಗಳು, ದೇವಸ್ಥಾನದ ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಭೂ ಸ್ವಾಧೀನ ಪ್ರಕ್ರಿಯೆಯನ್ನು ಮುಂದುವರಿಸದೇ ಕೈಬಿಡುವುದಾಗಿ ಭರವಸೆ ನೀಡಿದರು.

ಈ ಕುರಿತು ಪ್ರತಿಕ್ರಿಯಿಸಿದ ಲಕ್ಷ್ಮೀ ಹೆಬ್ಬಾಳಕರ್, “ಕ್ಷೇತ್ರದ ಜನರ ಹಿತಾಸಕ್ತಿ ಕಾಪಾಡುವುದು ನನ್ನ ಮೊದಲ ಆದ್ಯತೆ. ದೇವರ ಆಸ್ತಿಯನ್ನು ಸಂರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಕ್ಷೇತ್ರದ ಶಾಸಕಿಯಾಗಿ ಮಾತ್ರವಲ್ಲದೆ, ಈ ನೆಲದ ಮಗಳಾಗಿ ಜನರ ಧಾರ್ಮಿಕ ನಂಬಿಕೆ ಮತ್ತು ಹಕ್ಕುಗಳ ರಕ್ಷಣೆಗೆ ಸದಾ ಬದ್ಧಳಾಗಿದ್ದೇನೆ,” ಎಂದು ಹೇಳಿದರು.

ದೇವಸ್ಥಾನದ ಭೂಮಿ ಸ್ವಾಧೀನ ಪ್ರಕ್ರಿಯೆ ಕೈಬಿಡುವ ಭರವಸೆ ದೊರೆತ ಹಿನ್ನೆಲೆಯಲ್ಲಿ ಮೊದಗಾ ಗ್ರಾಮದ ಗ್ರಾಮಸ್ಥರು, ದೇವಸ್ಥಾನದ ಆಡಳಿತ ಮಂಡಳಿ, ಪಂಚ ಕಮಿಟಿ ಸದಸ್ಯರು ಹಾಗೂ ಹಿರಿಯರು ಲಕ್ಷ್ಮೀ ಹೆಬ್ಬಾಳಕರ್ ಅವರ ಪ್ರಯತ್ನಕ್ಕೆ ಕೃತಜ್ಞತೆ ಸಲ್ಲಿಸಿದರು.