ಜ್ಯೋತಿರಾವ್ ಪುಲೆ ದಲಿತರ, ಮಹಿಳೆಯರ ಶಿಕ್ಷಣಕ್ಕಾಗಿ ಹಾಗೂ ಶೋಷಣೆ ವಿರುದ್ದ ಹೋರಾಡಿದ್ದಾರೆ: ಕೆ ಈರಣ್ಣ

ಜ್ಯೋತಿರಾವ್ ಪುಲೆ ದಲಿತರ, ಮಹಿಳೆಯರ ಶಿಕ್ಷಣಕ್ಕಾಗಿ ಹಾಗೂ ಶೋಷಣೆ ವಿರುದ್ದ ಹೋರಾಡಿದ್ದಾರೆ: ಕೆ ಈರಣ್ಣ Jyotirao Pule fought for the education of Dalits, women and against exploitation: K Iranna

ಕಾರಟಗಿ 24 : ತಾಲ್ಲೂಕಿನ ಸಿದ್ದಾಪುರ ಪಿಯು ಕಾಲೇಜಿನಲ್ಲಿ ಎ.ಐ.ಡಿ.ಎಸ್‌.ಓ ವಿದ್ಯಾರ್ಥಿ ಸಂಘಟನೆಯ ನೇತೃತ್ವದಲ್ಲಿ ಮಹಾನ್ ಮಾನವತಾವಾದಿ ಜ್ಯೋತಿರಾವ್ ಪುಲೆ ಯವರ ಸ್ಮರಣ ದಿನದ ಹಿನ್ನಲೆಯಲ್ಲಿ ವಿಚಾರ ಸಂಕೀರ್ಣ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿತ್ತು.

ವಿಚಾರ ಸಂಕೀರ್ಣದ ಮುಖ್ಯ ಭಾಷಣಕಾರರಾಗಿ ಎ.ಐ.ಡಿ.ಎಸ್‌. ಓ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಕೆ. ಈರಣ್ಣ ಮಾತನಾಡಿ ಜ್ಯೋತಿರಾವ್ ಪುಲೆ ಅವರು ದೇಶದಲ್ಲಿನ ಶೋಷಿತರಿಗೆ, ದಲಿತರಿಗೆ ಮತ್ತು ಮಹಿಳೆಯರ ಶಿಕ್ಷಣಕ್ಕಾಗಿ ಶತಮಾನಗಳ ಶೋಷಣೆ ವಿರುದ್ದ ಹೋರಾಡಿದ್ದಾರೆ. ಕೇವಲ ಶಿಕ್ಷಣದಿಂದ ಮಾತ್ರವೇ ಮನುಷ್ಯರು ವಿಮರ್ಶಾತ್ಮಕ ಧೋರಣೆ ಮತ್ತು ಆತ್ಮ ಸಮ್ಮಾನ ವನ್ನು ಹೊಂದಲು ಸಾಧ್ಯ ಎಂಬುದನ್ನು ಜ್ಯೋತಿ ಬಾ ಬಲವಾಗಿ ಪ್ರತಿಪಾದಿಸಿದರು. ಈ ಚಿಂತನೆಗಳೊಂದಿಗೆ ಅವರು ಮೊದಲು ಮಹಿಳೆಯರ ಶಿಕ್ಷಣಕ್ಕೆ ಒತ್ತು ನೀಡಿದರು. ಸ್ನೇಹಿತರ ಸಹಾಯದೊಂದಿಗೆ ಪುಣೆಯ ಬುಧವಾರ ಪೇಟೆಯಲ್ಲಿನ ಭೀಡೆ ಸದನದಲ್ಲಿ ಪುಲೆ ಅವರ ಕನಸಿನ ಮೊದಲ ಶಾಲೆ ಆರಂಭವಾಯಿತು. ಆದರೆ ಮಹಿಳೆಯರು ಮತ್ತು ದಲಿತರು ಶಿಕ್ಷಣ ಕಲಿಯುವುದನ್ನು ಸಹಿಸದ ಪಟ್ಟ ಭದ್ರ ಮತ್ತು ಪುರೋಹಿತಶಾಹಿಗಳು ಇದರ ವಿರುದ್ಧ ನಿಂತರು. ಎಲ್ಲಾ ಕಟ್ಟುಪಾಡುಗಳಿಗೆ ಕೊಡಲಿ ಪೆಟ್ಟುಕೊಟ್ಟು ಜ್ಯೋತಿಬಾ ಅವರು ಶಿಕ್ಷಣವನ್ನು ಮಹಿಳೆಗೆ ತಲುಪಿಸುವ ದಿಟ್ಟ ಹೆಜ್ಜೆ ಇಟ್ಟರು. ಸ್ವತಃ ತಮ್ಮ ಮಡದಿ ಸಾವಿತ್ರಿಬಾಯಿಗೆ ಶಿಕ್ಷಣ ಹಾಗೂ ತರಬೇತಿಯನ್ನು ಒದಗಿಸಿ ತಮ್ಮ ಶಾಲೆಯಲ್ಲಿ ಶಿಕ್ಷಕಿಯನ್ನಾಗಿಸಿದರು. ಮೇಲ್ಜಾತಿಯವರ ಬೆದರಿಕೆ ಅವಮಾನ ಬೈಗುಳ ಎಲ್ಲವನ್ನು ತಮ್ಮ ಮಹಾನ್ ಧ್ಯೇಯಕ್ಕಾಗಿ ಸಹಿಸಿಕೊಂಡರು. ತಮ್ಮ ಜೀವನದ ಸಂಕಷ್ಟವನ್ನು ಲೆಕ್ಕಿಸದೆ ಸ್ನೇಹಿತರೊಡಗೂಡಿ 25ಕ್ಕೂ ಹೆಚ್ಚು ಶಾಲೆಗಳನ್ನ ತೆರೆಯುತ್ತಾರೆ. ಜಾತಿ ವ್ಯವಸ್ಥೆಯನ್ನು ಅಂತ್ಯಗೊಳಿಸಿ ಬ್ರಾಹ್ಮಣರ ಶೋಷಣೆಯಿಂದ ದಲಿತರನ್ನು ಬಿಡುಗಡೆಗೊಳಿಸುವ ಉದ್ದೇಶದಿಂದ ಜ್ಯೋತಿರಾವ್ ಪುಲೆ ಸ್ಥಾಪಿಸಿದ ಸತ್ಯಶೋಧಕ ಸಮಾಜವು ಶಿಕ್ಷಣದ ಪ್ರಚಾರಕ್ಕೆ ವಿಶೇಷ ಮಹತ್ವ ನೀಡಿತು. ಶಿಕ್ಷಣವು ಸಾರ್ವತ್ರಿಕವಾಗಿರಬೇಕು ಮತ್ತು ಎಷ್ಟೇ ಸಂಖ್ಯೆ ಇದ್ದರೂ ಅದೆಲ್ಲರನ್ನು ತಲುಪುವಂತೆ ಇರಬೇಕು ಎಂದು ಬಲವಾಗಿ ಪ್ರತಿಪಾದಿಸಿದ ಮಹಾತ್ಮ ಜ್ಯೋತಿಬಾಪುಲೆ ಅವರು ಇಲ್ಲಿನ ಬಡವರಿಂದ ಸುಂಕ ವಸೂಲಿ ಮಾಡುತ್ತಿದ್ದ ಪರಕೀಯ ಬ್ರಿಟಿಷ್ ಸರ್ಕಾರವು ಶಿಕ್ಷಣಕ್ಕೆ ಒತ್ತು ನೀಡುವಂತೆ ಧ್ವನಿ ಎತ್ತಿದರು. ಅಂದು ಅವರು ಬಡ ಮಕ್ಕಳಿಗಾಗಿ, ಹೆಣ್ಣು ಮಕ್ಕಳಿಗಾಗಿ ಮತ್ತು ಶೋಷಿತರಿಗಾಗಿ ನೂರಾರು ಶಾಲೆಗಳನ್ನು ತೆರೆದಿದ್ದಾರೆ. ಆದರೆ ಇಂದು ನಮ್ಮನಾಳುವ ಸರ್ಕಾರಗಳು ಸರ್ಕಾರಿ ಶಾಲೆಗಳನ್ನು ಮುಚ್ಚುವ ಹೊಸ ನೀತಿಗಳನ್ನು ತರುತ್ತಿರುವುದು ವಿಪರ್ಯಾಸವಾಗಿದೆ. ಕೆಪಿಎಸ್ಸಿ ಮ್ಯಾಗ್ನೆಟ್ ಶಾಲೆಯ ಹೆಸರಿನಲ್ಲಿ 40,000 ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳು ವೀಲೀನವ ನೆಪದಲ್ಲಿ ಮುಚ್ಚುವ ಹೊಸ ನೀತಿಯನ್ನು ತರುತ್ತಿವೆ. ಎಲ್ಲಾ ವಿದ್ಯಾರ್ಥಿಗಳು ಜ್ಯೋತಿರಾವ್ ಪುಲಿ ಅವರ ಆದರ್ಶವನ್ನು ಮೈಗೂಡಿಸಿಕೊಂಡು ಸರ್ಕಾರಿ ಶಾಲೆಗಳನ್ನು ಉಳಿಸಲು ಮುಂದಾಗಬೇಕೆಂದು ಕರೆ ನೀಡಿದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಕೊಂಡು ಕಾಲೇಜಿನ ಪ್ರಾಂಶುಪಾಲರಾದ ವಾಮದೇವ್ ಮೂರ್ತಿ ಅವರು ಮಾತನಾಡಿದರು. ಎ.ಐ.ಡಿ.ಎಸ್‌. ಓ ಜಿಲ್ಲಾ ಸಂಚಾಲಕರಾದ ಗಂಗರಾಜ ಅಳ್ಳಳ್ಳಿ ಪ್ರಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ವಿವಿಧ ವಿಭಾಗದ ಉಪನ್ಯಾಸಕರು ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿಗಳು ವಿಚಾರ ಸಂಕೀರ್ಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು..