ಪತ್ರಕರ್ತರು ವಸ್ತುನಿಷ್ಠ ವರದಿಗೆ ಆದ್ಯತೆ ನೀಡಬೇಕು: ಕುಲಪತಿ ಪ್ರೊ. ಬಾಬಣ್ಣ

ಪತ್ರಕರ್ತರು ವಸ್ತುನಿಷ್ಠ ವರದಿಗೆ ಆದ್ಯತೆ ನೀಡಬೇಕು: ಕುಲಪತಿ ಪ್ರೊ. ಬಾಬಣ್ಣ Journalists should prioritize objective reporting: Chancellor Prof. Babana

ಕಲಬುರಗಿ 09: ಪತ್ರಿಕೋದ್ಯಮ ಕ್ಷೇತ್ರದಲ್ಲಿ ನಿರತರಾದ ಪತ್ರಕರ್ತರು ಮೇಲೆ ಹೆಚ್ಚು ಜವಾಬಾದಾರಿಯಿದೆ. ಸಮಾಜದ ಸಮಸ್ಯೆಗಳನ್ನು ಪ್ರತಿಬಿಂಬಿಸುವ ಸಂದರ್ಭದಲ್ಲಿ ವಸ್ತುನಿಷ್ಠ ವರದಿಗೆ ಆದ್ಯತೆ ನೀಡಬೇಕು. ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಮಹತ್ವದ ಕೆಲಸವನ್ನು ಪತ್ರಿಕಾರಂಗ ನಿರ್ವಹಿಸುತ್ತಿರುವ ಕಾರಣದಿಂದ ಪ್ರಜಾಪ್ರಭುತ್ವದ ನಾಲ್ಕನೇ ಅಂಗವೆಂದು ಕರೆಯಲಾಗಿದೆ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಾಬಣ್ಣ ಹೂವಿನಬಾವಿ ಅಭಿಪ್ರಾಯಪಟ್ಟರು.  

ಗುಲಬರ್ಗಾ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಹಾಗೂ ಸಂಶೋಧನಾ ವಿಭಾಗದಲ್ಲಿ ಆಯೋಜಿಸಿದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿ ಸಂವಹನ ಮೂಲಾಂಶಗಳು ಮತ್ತು ಸುದ್ದಿಶೈಲಿಯ ಸೂತ್ರದನ್ವಯ ಮಾಧ್ಯಮಗಳು ಕಾರ್ಯನಿರ್ವಹಿಸುತ್ತಿವೆ. ಸಮಾಜದ ಸಮಸ್ಯೆಗಳನ್ನು ಗುರುತಿಸಿ ನಿವಾರಿಸುವ ದೂರದೃಷ್ಟಿ ಚಿಂತನೆ ಮತ್ತು ಘಟನೆಯ ಸತ್ಯಾಸತ್ಯೆಯ ಮೇಲೆ ಬೆಳಕು ಚೆಲ್ಲಬೇಕು ಎಂದ ಅವರು ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುವ ವೃತ್ತಿನಿರತ ಪತ್ರಕರ್ತರಿಗೆ ಶುಭಾಶಯಗಳನ್ನು ತಿಳಿಸಿದರು.  

ಪ್ರಭಾರ ಕುಲಸಚಿವ ಪ್ರೊ. ಚಂದ್ರಕಾಂತ ಎಂ ಯಾತನೂರ್ ಅತಿಥಿಯಾಗಿ ಮಾತನಾಡಿ ಪ್ರಸ್ತುತ ಸಾಂಸ್ಥಿಕ ಸ್ವರೂಪ ಪಡೆದಿರುವ ಪತ್ರಿಕಾ ಸಂಸ್ಥೆಗಳು ಮತ್ತು ಪತ್ರಕರ್ತರ ಸತ್ಯಕ್ಕೆ ಹತ್ತಿರವಾದ ಸುದ್ದಿಗಳನ್ನು ಸಮಾಜಕ್ಕೆ ನೀಡಬೇಕು. ಸತ್ಯನಿಷ್ಠೆ ಮತ್ತು ಪತ್ರಿಕಾ ಧರ್ಮ ಪಾಲನೆಯಿಂದ ಪತ್ರಿಕೋದ್ಯಮ ಜನರ ನಂಬಿಕೆ ಮತ್ತು ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳಬೇಕಿದೆ. ಪತ್ರಿಕಾಧರ್ಮ ಮತ್ತು  ನೀತಿಗೆ ಪೂರಕವಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ಪತ್ರಿಕೋದ್ಯಮದ ಮೌಲ್ಯ ಉಳಿಯುತ್ತದೆ ಎಂದರು.  

ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಹಾಗೂ ಎಸ್‌.ಎಸ್‌. ಡಿಜಿಟಲ್ ಕೇಬಲ್ ಟಿವಿ ಮುಖ್ಯಸ್ಥ ಭವಾನಿಸಿಂಗ್ ಮುಖ್ಯ ಅತಿಥಿಯಾಗಿ ಮಾತನಾಡಿ ಮಂಗಳೂರಿನಿಂದ ಬಂದ ಕ್ರಿಶ್ರಚಿಯನ್ ಪಾದ್ರಿ ಮೋಗ್ಲಿಂಗ್ ಕನ್ನಡ ಭಾಷೆ ಕಲಿತು ಪತ್ರಿಕೆ ಆರಂಭಿಸಿ ಕನ್ನಡ ಪತ್ರಿಕೋದ್ಯಮ ಬೆಳೆಯಲು ಮೂಲ ಕಾರಣಕರ್ತ. ಪತ್ರಿಕಾ ರಂಗ ಸುಳ್ಳು ಸುದ್ದಿ ಬಿತ್ತರ ಮಾಡದೆ ಖಚಿತ ಮತ್ತು ನಿಖರವಾದ ಸಂಗತಿಗಳನ್ನು ಪ್ರಕಟಿಸಬೇಕು. ಸಮಾಜ ಮತ್ತು ಸರ್ಕಾರದ ಸೇತುವೆಯಾಗಿರುವ ಪತ್ರಕರ್ತರು ಸುದ್ದಿಯ ಖಚಿತತೆ, ವಾಸ್ತವತೆ ಮತ್ತು ವಿಶ್ವಾಸಗಳಿಗೆ ಬದ್ದರಾಗಿ ಕೆಲಸ ಮಾಡಿದರೆ ಪತ್ರಿಕೋದ್ಯಮ ವೃತ್ತಿಯಲ್ಲಿ ಸಾರ್ಥಕತೆ ಭಾವ ಮೂಡುತ್ತದೆ ಎಂದರು. ಪತ್ರಕರ್ತರಾಗ ಬಯಸುವವರಿಗೆ ಹೆಚ್ಚು ಅವಕಾಶಗಳಿವೆ. ಇಂದಿನ ಡಿಜಿಟಲ್ ಮಾಧ್ಯಮ ಕ್ಷೇತ್ರಕ್ಕೆ ಬರುವ ವಿದ್ಯಾರ್ಥಿಗಳಿಗೆ ತಂತ್ರಜ್ಞಾನ ಕೌಶಲ್ಯ ಅವಶ್ಯಕತೆಯಿದೆ. ಸೃಜನಶೀಲತೆ ಮೈಗೂಡಿಸಿಕೊಂಡರೆ ಮೊಬೈಲ್ ಮೂಲಕ ಮಾಧ್ಯಮ ವೃತ್ತಿ ಆರಂಭಿಸಬಹುದು ಎಂದರು.   

ಮೌಲ್ಯಮಾಪನ ಕುಲಸಚಿವ ಡಾ. ಎನ್‌. ಜಿ. ಕಣ್ಣೂರು ಹಾಗೂ ವಿತ್ತಾಧಿಕಾರಿ ಶ್ರೀಮತಿ ಜಯಾಂಬಿಕ ಮಾತನಾಡಿ ಪತ್ರಕರ್ತರ ಸೇವೆಯನ್ನು ಸ್ಮರಿಸಿ ಶುಭಕೋರಿದರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಂಯೋಜನಾಧಿಕಾರಿ ಡಾ. ಸುರೇಶ್ ಜಂಗೆ ಅಧ್ಯಕ್ಷತೆ ವಹಿಸಿ ಮಾತನಾಡಿ ವಿಭಾಗದ ವಿದ್ಯಾರ್ಥಿಗಳು ರಾಜ್ಯ ಮಟ್ಟದ ವಿವಿಧ ಮಾಧ್ಯಮಗಳಿಲ್ಲಿ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ಸಂಗತಿ. ಪತ್ರಿಕೋದ್ಯಮ ಕಲಿಯುತ್ತಿರುವ ವಿದ್ಯಾರ್ಥಿಗಳು ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಡಾ. ಅಶೋಕ ಶರಣಪ್ಪ ಪ್ರಾಸ್ತ್ತಾವಿಕವಾಗಿ ಮಾತನಾಡಿದರು.  

ಕಾರ್ಯಕ್ರಮದಲ್ಲಿ ವಿಭಾಗದ ಅತಿಥಿ ಉಪನ್ಯಾಸಕರಾದ ಡಾ. ಕೆ. ಎಂ. ಕುಮಾರಸ್ವಾಮಿ, ಡಾ. ರಾಜಕುಮಾರ ದಣ್ಣೂರು, ಡಾ. ವೆಂಕಟೇಶ್ ನರಸಪ್ಪ, ಡಾ. ತೀರ್ಥಕುಮಾರ ಡಾ. ಸಾಯಿಬಣ್ಣಾ ಗುಡುಬಾ, ಡಾ. ಸರದಾರ ರಾಯಪ್ಪ, ಬಹುಮಾಧ್ಯಮ ಕೇಂದ್ರದ ಸಿಬ್ಬಂದಿ ಶರಣು ನಾವಿ, ಸಿದ್ದಾರ್ಥ ದೊಡ್ಡಮನಿ, ಶಿಕ್ಷಕೇತರ ಸಿಬ್ಬಂದಿ ಅಯ್ಯಣ್ಣ ಬಡಿಗೇರ್ ಸೇರಿದಂತೆ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ರಾಮಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.    

ಪತ್ರಿಕೋದ್ಯಮ ವೃತ್ತಿ ಪ್ರವೇಶಿಸಿದ ಆರಂಭ ಕಾಲದಲ್ಲಿ ಯಾವುದೇ ತಂತ್ರಜ್ಞಾನವಿರಲಿಲ್ಲ. ಸೌಕರ‌್ಯಗಳು ಕೂಡ ಅಷ್ಟಾಗಿರಲಿಲ್ಲ. ಅಚ್ಚು ಮೊಳೆ ಜೋಡಿಸಿ ಪತ್ರಿಕೆ ಕೆಲಸ ಮಾಡಲಾಗುತ್ತಿತ್ತು. ಇಂದು ಮಾಧ್ಯಮ ಕ್ಷೇತ್ರ ಮತ್ತು ವೃತ್ತಿ ನಾವೀನ್ಯತೆಯ ಕ್ಷೇತ್ರವಾಗಿದೆ. ಮಾಧ್ಯಮ ಕ್ಷೇತ್ರದಲ್ಲಿ ಆಗಿರುವ ಬಸದಲಾವಣೆಯಿಂದ ಯುವಕರಿಗೆ ಅವಕಾಶಗಳಿವೆ. ಸೂಕ್ತ ಸಿದ್ದತೆಯೊಂದಿಗೆ ಕಲಿತು ಸಮಾಜ ಸೇವೆಗೆ ಯುವ ಪತ್ರಕರ್ತರು ತೊಡಗಿಸಿಕೊಳ್ಳಬೇಕು. ಕ್ಯಾಮೆರಾ ಕೌಶಲ್ಯ, ವರದಿ ಬರವಣೆಗೆ, ವಿಡಿಯೋ ಚಿತ್ರೀಕರಣ ಕಲಿತರೆ ಕೇವಲ ಮೊಬೈಲ್ ಸಾಧನ ಬಳಸಿಕೊಂಡು ಪತ್ರಕರ್ತರಾಗಿ ಬೆಳೆಯಬಹುದು.