ಮುಖ್ಯಮಂತ್ರಿಗಳ ಕಾರ್ಯಕ್ರಮ ವರದಿ ಬಹಿಷ್ಕರಿಸಿದ ಪತ್ರಕರ್ತರು: ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ

ಬೆಂಗಳೂರು, ಅ 13:    ವಿಧಾನಮಂಡಲ ಅಧಿವೇಶನದಿಂದ ಮಾಧ್ಯಮ ಪ್ರತಿನಿಧಿಗಳನ್ನು ಹೊರಗಿಟ್ಟ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಧೋರಣೆಯನ್ನು ವಿರೋಧಿಸಿ ಅವರ ಕಾರ್ಯಕ್ರಮವನ್ನು ಭಾನುವಾರ ಪತ್ರಕರ್ತರು ವರದಿ ಮಾಡದೇ ಬಹಿಷ್ಕರಿಸಿದರು. ಇಂದು ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಬಹಿಷ್ಕರಿಸಿ ವಿಧಾನಸೌಧದ ಮತ್ತು ವಿಕಾಸ ಸೌಧದ ನಡುವೆ ಇರುವ ಗಾಂಧಿ ಪ್ರತಿಮೆ ಬಳಿ ಪತ್ರಕರ್ತರು ಪ್ರತಿಭಟನೆ ನಡೆಸಿದರು. 

ಮಾಧ್ಯಮಗಳನ್ನು ಭಾನುವಾರ ಶಾಸಕರ ಭವನದಲ್ಲಿರುವ ವಾಲ್ಮೀಕಿ ಜಯಂತಿ  ಸರ್ಕಾರಿ ಕಾರ್ಯಕ್ರಮದ ವರದಿ ಮಾಡಲು ಪೊಲೀಸರು ವಿಧಾನಸೌಧದಲ್ಲಿ ಅಡ್ಡಿಪಡಿಸಿದರು. ಇದರಿಂದ ಸಿಟ್ಟಿಗೆದ್ದಿರುವ ಮಾಧ್ಯಮ ಪ್ರತಿನಿಧಿಗಳು ಪೊಲೀಸರ ದೌರ್ಜನ್ಯ ಹಾಗೂ ಮುಖ್ಯಮಂತ್ರಿಗಳ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು. 

ಮುಖ್ಯಮಂತ್ರಿಗಳ ಮಾಧ್ಯಮ ವಿಭಾಗದ ಮುಖ್ಯಸ್ಥರು ಬಂದು ಪತ್ರಕರ್ತರನ್ನು ಮನವೊಲಿಸುವ ಪ್ರಯತ್ನ ಮಾಡಿದರು. 

ಬಳಿಕ ವಿಧಾನಸೌಧ ಡಿಸಿಪಿ ಅಶೋಕ್, ಇನ್ನು ಮುಂದೆ ಈ ರೀತಿಯ ತೊಂದರೆ ಆಗದಂತೆ ಕ್ರಮ ಕೈಗೊಳ್ಳುತ್ತೇವೆ. ಗುರುತಿನ ಚೀಟಿ ತೋರಿಸಿ ಪತ್ರಕರ್ತರು ವಿಧಾನಸೌಧ ಒಳಗೆ ಬರಬಹುದು ಎಂದರು.  

ಪತ್ರಕರ್ತರ ಜೊತೆ ಅಸಭ್ಯ ವರ್ತನೆ ತೋರಿದ ಪೊಲೀಸ್ ಸಿಬ್ಬಂದಿಗೆ ನೋಟಿಸ್ ನೀಡುತ್ತೇವೆ. ಸಿಬ್ಬಂದಿ ಯಾವುದೇ ಅಸಡ್ಡೆ ತೋರಿದರೆ ನಮ್ಮ ಗಮನಕ್ಕೆ ತಂದಲ್ಲಿ ಕ್ರಮ ಕೈಗೊಳ್ಳುತ್ತೇವೆ. ಇನ್ನು ಮುಂದೆ ಯಾವುದೇ ತೊಂದರೆ ಆಗದಂತೆ  ನೋಡಿಕೊಳ್ಳುತ್ತೇವೆ ಎಂದು ಅವರುಗಳು ಭರವಸೆ ನೀಡಿದ ಮೇರೆಗೆ ಪ್ರತಿಭಟನೆ ಹಿಂಪಡೆಯಲಾಯಿತು.