ಪತ್ರಕರ್ತರಿಗೆ ಸಾಮಾಜಿಕ ಜವಾಬ್ದಾರಿ ದೊಡ್ಡದು: ಬಸನಗೌಡ ಪಾಟೀಲ್ ಯತ್ನಾಳ್

ಪತ್ರಕರ್ತರಿಗೆ ಸಾಮಾಜಿಕ ಜವಾಬ್ದಾರಿ ದೊಡ್ಡದು: ಬಸನಗೌಡ ಪಾಟೀಲ್ ಯತ್ನಾಳ್ Journalists Bear a Great Social Responsibility: Basanagouda Patil Yatnal

ಲೋಕದರ್ಶನ ವರದಿ   

ಇಂಡಿ 19: ಪತ್ರಕರ್ತರಿಗೆ ಸಮಾಜದಲ್ಲಿ ಮಹತ್ವದ ಸ್ಥಾನವಿದ್ದು, ಅವರ ಹೊಣೆಗಾರಿಕೆಯೂ ದೊಡ್ಡದಿದೆ. ಪತ್ರಕರ್ತನ ಮುಖ್ಯ ಜವಾಬ್ದಾರಿಗಳು ಸಮಾಜಕ್ಕೆ ನಿಖರ, ಪಕ್ಷಪಾತವಿಲ್ಲದ ಮತ್ತು ಸತ್ಯವಾದ ಮಾಹಿತಿಯನ್ನು ಒದಗಿಸುವುದಾಗಿದೆ. ಅವರು ಯಾವುದೇ ಸುದ್ದಿಗಳನ್ನು ಪ್ರಕಟಿಸುವ ಮೊದಲು ಅವುಗಳ ನೈಜತೆಯನ್ನು ಪರೀಶೀಲನೆ ಮಾಡಿ ಸುದ್ದಿಗಳನ್ನು ಬರಿಯಬೇಕು ಎಂದು ನಗರ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸಲಹೆ ನೀಡಿದರು.  

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರು ಹಾಗೂ ವಿಜಯಪೂರ ಇವರ ಸಹಯೋಗದಲ್ಲಿ ನಗರದ ಕೆಂಗಲ್ ಹಣಮಂತರಾಯ ರಂಗಮಂದಿರ ಆವರಣದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾ ದಿನಾಚರಣೆ, ಸಾಧಕರಿಗೆ ವಾರ್ಷಿಕ ಪ್ರಶಸ್ತಿ ಪ್ರದಾನ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಸಸಿಗೆ ನೀರು ಉಣಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. 

ನಾಗಠಾಣ ಶಾಸಕ ವಿಠಲ್ ಕಟಕದೊಂಡ ಅವರು ಮಾತನಾಡಿ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವ ಮಾಧ್ಯಮಗಳು ಸಮಾಜದ ಸಮಸ್ಯೆಗಳು, ಜನರ ನೋವು-ನಲಿವು ಹಾಗೂ ಸಾರ್ವಜನಿಕ ಹಿತಾಸಕ್ತಿಯ ವಿಚಾರಗಳನ್ನು ನಿರಂತರವಾಗಿ ಬೆಳಕಿಗೆ ತರುವ ಜವಾಬ್ದಾರಿ ಹೊಂದಿವೆ. ಸತ್ಯವನ್ನು ಜನರ ಮುಂದಿಡುವುದು, ಪ್ರಶ್ನಿಸುವುದು ಹಾಗೂ ಜನರಲ್ಲಿ ಅರಿವು ಮೂಡಿಸುವುದು ಪತ್ರಕರ್ತರ ಪ್ರಮುಖ ಕರ್ತವ್ಯವಾಗಿದೆ ಎಂದು ಹೇಳಿದರು.  

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಿಜಯಪೂರ ಜಿಲ್ಲಾ ಅಧ್ಯಕ್ಷ ಅಶೋಕ ಯಡಹಳ್ಳಿ ಅವರು ಮಾತನಾಡಿ ಸಮಾಜದ ಕಣ್ಣು ಮತ್ತು ಕಿವಿಯಾಗಿರುವ ಪತ್ರಿಕೋದ್ಯಮವು ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿ ಮಹತ್ತರ ಪಾತ್ರವನ್ನು ನಿರ್ವಹಿಸುತ್ತಿದೆ. ಸತ್ಯ, ನಿಷ್ಪಕ್ಷಪಾತತೆ ಮತ್ತು ಜನಪರ ಮೌಲ್ಯಗಳನ್ನು ಎತ್ತಿಹಿಡಿಯುವ ಮೂಲಕ ಪತ್ರಕರ್ತರು ಸಮಾಜದ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿದ್ದಾರೆ ಎಂದರು. 

ವಿಜಯಪೂರ ಮಹಾನಗರ ಪಾಲಿಕೆಯ ಮೇಯರ್ ಸಂಗಣ್ಣ ಕರಡಿ, ಕರ್ನಾಟಕ ಕಾನಿಪ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ ಸಿ ಲೋಕೇಶ್, ಪುಂಡಲಿಕ, ಮಲ್ಲಿಕಾರ್ಜುನ ರೆಡ್ಡಿ, ಸಂಘದ ವಿಜಯಪೂರ ಜಿಲ್ಲಾ ಉಪಾಧ್ಯಕ್ಷ ಶಶಿಕಾಂತ ಮೆಡೆದಾರ, ಬಸವರಾಜ ಉಳ್ಳಾಗಡ್ಡಿ, ಗಂಗಾಧರ ಸಂಬಾನಿ ಸೇರಿದಂತೆ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.