ಆಹಾರ ಇಲಾಖೆಯ ಜಂಟಿ ನಿರ್ದೇಶಕರಿಂದ ಹುಬ್ಬಳ್ಳಿ ನಗರದ ವಿವಿಧ ಪೆಟ್ರೋಲ್ ಬಂಕ್‌ಗಳಿಗೆ ಭೇಟಿ, ಪರೀಶೀಲನೆ

ಆಹಾರ ಇಲಾಖೆಯ ಜಂಟಿ ನಿರ್ದೇಶಕರಿಂದ ಹುಬ್ಬಳ್ಳಿ ನಗರದ ವಿವಿಧ ಪೆಟ್ರೋಲ್ ಬಂಕ್‌ಗಳಿಗೆ ಭೇಟಿ, ಪರೀಶೀಲನೆ Joint Director of Food Department visits and inspects various petrol stations in Hubballi city

ಲೋಕದರ್ಶನ ವರದಿ 

ಹುಬ್ಬಳ್ಳಿ ಮಾ.26: ಜಿಲ್ಲೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಯಾವುದೇ ರೀತಿ ಕೊರತೆ ಇಲ್ಲ. ನಾಲ್ಕರಿಂದ ಐದು ದಿನಗಳವರೆಗೆ ಆಗುವಷ್ಟು ಸಂಗ್ರಹವಿದೆ. ನಗರ ಮತ್ತು ಗ್ರಾಮೀಣ ಸೇರಿದಂತೆ ಜಿಲ್ಲೆಯಾದ್ಯಂತ ಒಟ್ಟು 204 ಪೆಟ್ರೋಲ್ ಬಂಕ್‌ಗಳು ಕಾರ್ಯನಿರ್ವಹಿಸುತ್ತಿವೆ.  ಪ್ರಸ್ತುತ ಪ್ರತಿದಿನ 371 ಕೆಎಲ್ ಪೆಟ್ರೋಲ್ ಮತ್ತು 582 ಕೆಎಲ್ ಡಿಸೈಲ್ ವಿತರಿಸಲಾಗುತ್ತಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಜಂಟಿ ನಿರ್ದೇಶಕ ವಿನೋದಕುಮಾರ ಹೆಗ್ಗಳಗಿ ಅವರು ಹೇಳಿದರು.  

ಅವರು ಇಂದು (ಮಾ.26) ಹುಬ್ಬಳ್ಳಿ ನಗರದ ವಿವಿಧ ಪೆಟ್ರೋಲ್ ಬಂಕ್‌ಗಳಿಗೆ ಭೇಟಿ ನೀಡಿ, ಪರೀಶೀಲನೆಯ ನಂತರ, ಹುಬ್ಬಳ್ಳಿ ನ್ಯೂ ಕಾಟನ್ ಮಾರ್ಕೆಟ್‌ದ ಸಂಚಾರಿ ಪೊಲೀಸ್ ಠಾಣೆಯ ಹತ್ತಿರದಲ್ಲಿರುವ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್‌ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.  

ಪ್ರಸ್ತುತ ಜಿಲ್ಲೆಯಲ್ಲಿ ಪೆಟ್ರೋಲ್ 1,115 ಕೆಎಲ್ ಹಾಗೂ ಡಿಸೈಲ್ 1,735 ಕೆಎಲ್ ದಾಸ್ತಾನು (ಸ್ಟಾಕ್) ಲಭ್ಯವಿದೆ. ಇದೇ ವೇಳೆ ದಿನನಿತ್ಯದ ಮಾರಾಟದಲ್ಲಿ ಪೆಟ್ರೋಲ್ 371 ಕೆಎಲ್ ಹಾಗೂ ಡಿಸೈಲ್ 582 ಕೆಎಲ್‌ವರೆಗೆ ಮಾರಾಟವಾಗುತ್ತಿದೆ ಎಂದು ಹೇಳಿದರು.  

ಮಾರ್ಚ 23 ರ ಹಿಂದಿನ ದಿನಗಳಲ್ಲಿ ಪೆಟ್ರೋಲ್ ದಿನಕ್ಕೆ ಸುಮಾರು 267 ಕೆಎಲ್ ಹಾಗೂ ಡಿಸೈಲ್ 480 ಕೆಎಲ್ ಮಾರಾಟವಾಗುತ್ತಿತ್ತು. ಆದರೆ ಇತ್ತೀಚೆಗೆ ಮಾರಾಟದಲ್ಲಿ ಏರಿಕೆ ಕಂಡುಬಂದಿದ್ದು, ಜನರಲ್ಲಿ ಉಂಟಾದ ಆತಂಕ ಮತ್ತು ತಪ್ಪು ಮಾಹಿತಿಯ ಪರಿಣಾಮವಾಗಿ ಜನರು ಹೆಚ್ಚುವರಿಯಾಗಿ ಇಂಧನ ಖರೀದಿಸುತ್ತಿದ್ದಾರೆ ಎಂದು ಅವರು ಹೇಳಿದರು. 

ತಪ್ಪು ಮಾಹಿತಿಯ ಸುಳ್ಳು ಸುದ್ದಿಗಳ ಪರಿಣಾಮವಾಗಿ ಜನರು ಸಾಮಾನ್ಯವಾಗಿ ಹಾಕಿಸಿಕೊಳ್ಳುವ ನಾಲ್ಕು ಲೀಟರ್ ಬದಲು ಈಗ 10 ಲೀಟರ್‌ವರೆಗೆ ಇಂಧನ ತುಂಬಿಸಿಕೊಳ್ಳುತ್ತಿದ್ದಾರೆ. ಇದರಿಂದ ಕೆಲವು ಬಂಕ್‌ಗಳಲ್ಲಿ ತಾತ್ಕಾಲಿಕವಾಗಿ ಸ್ಟಾಕ್ ಖಾಲಿಯಾಗುತ್ತಿರುವುದಾದರೂ, ತಕ್ಷಣವೇ ಸರಬರಾಜು ಮಾಡಿಕೊಂಡು ಪುನರಾರಂಭವಾಗುತ್ತಿದೆ. ಪೆಟ್ರೋಲ್ ಮತ್ತು ಡಿಸೈಲ್ ತುಂಬಿಸುವುದಕ್ಕೆ ಯಾವುದೇ ಮಿತಿ ವಿಧಿಸಲಾಗಿಲ್ಲ. ಜಿಲ್ಲೆಯಲ್ಲಿ ಪೆಟ್ರೋಲ್ ಮತ್ತು ಡಿಸೈಲ್ ಸಮರ​‍್ಕ ಪ್ರಮಾಣದಲ್ಲಿ ಲಭ್ಯವಿದ್ದು, ಜನರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಅವರು ತಿಳಿಸಿದರು. 

ಅನಧಿಕೃತವಾಗಿ ಗ್ಯಾಸ್ ಸಿಲಿಂಡರ್‌ಗಳನ್ನು ಸಂಗ್ರಹಿಸಿಕೊಂಡು ಇಟ್ಟವರ ವಿರುದ್ಧ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಈಗಾಗಲೇ ಮೂರು ಪ್ರಕರಣಗಳನ್ನು ದಾಖಲಿಸಲಾಗಿದ್ದು, ಒಟ್ಟು 75 ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು. 

 ಗ್ಯಾಸ್ ಸಿಲಿಂಡರ್‌ಗಳನ್ನು ಅನಧಿಕೃತವಾಗಿ ಸಂಗ್ರಹಿಸಿ, ಮಾರಾಟ ಮಾಡುವವರ ಮೇಲೆ ನಿರಂತರ ನಿಗಾವಹಿಸಲಾಗುತ್ತಿದೆ. ಈ ರೀತಿಯ ಅಕ್ರಮ ಚಟುವಟಿಕೆಗಳಿಗೆ ತಡೆಯೊಡ್ಡಲು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ತಂಡಗಳು ಪರೀಶೀಲನೆ ನಡೆಸುತ್ತಿವೆ ಎಂದು ಅವರು ತಿಳಿಸಿದರು.  

ಸರ್ಕಾರದ ಮಾರ್ಗಸೂಚಿಗಳಂತೆ, ಗ್ಯಾಸ್ ಸಿಲಿಂಡರ್ ಸರಬರಾಜಿನಲ್ಲಿ ಮೊದಲ ಆದ್ಯತೆಯನ್ನು ಶಿಕ್ಷಣ ಸಂಸ್ಥೆಗಳು ಹಾಗೂ ಆಸ್ಪತ್ರೆಗಳಿಗೆ ನೀಡಲಾಗುತ್ತಿದ್ದು, ನಂತರ ಹೋಟೆಲ್‌ಗಳಿಗೆ ವಿತರಣೆ ಮಾಡಲಾಗುತ್ತಿದೆ. ಸಾರ್ವಜನಿಕರು ಯಾವುದೇ ಅನಧಿಕೃತ ಸಂಗ್ರಹಣೆ ಅಥವಾ ಮಾರಾಟ ಕಂಡುಬಂದರೆ ತಕ್ಷಣವೇ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು. 

ಈ ಸಂದರ್ಭದಲ್ಲಿ ಹುಬ್ಬಳ್ಳಿ ಶಹರ ತಹಶೀಲ್ದಾರ ಮಹೇಶ ಗಸ್ತೆ, ಉಪನಗರ ಪೊಲೀಸ್ ಠಾಣೆಯ ಇನ್ಸೆ-್ಪಕ್ಟರ್ ಪ್ರಭು ಗಂಗೇನಹಳ್ಳಿ, ಕಂದಾಯ ನೀರೀಕ್ಷಕ ರವಿ ಬೆನ್ನೂರ ಸೇರಿದಂತೆ ಇತರರು ಇದ್ದರು.