ಬಾಗಲಕೋಟೆ25: ವಿದ್ಯಾಗಿರಿಯ ಬಸವೇಶ್ವರ ಇಂಜಿನೀಯರಿಂಗ್ ಕಾಲೇಜ ಆವರಣದಲ್ಲಿರುವ ಗೌರಿ ಶಂಕರ ಕಲ್ಯಾಣ ಮಂಟಪದಲ್ಲಿ ಫೆಬ್ರವರಿ 27 ಮತ್ತು 28 ರಂದು ಎರಡು ದಿನಗಳ ಕಾಲ ಜರುಗಲಿರುವ ಉದ್ಯೋಗ ಮೇಳಕ್ಕೆ ಇಲ್ಲಿವರೆಗೆ ಒಟ್ಟು 4835 ಉದ್ಯೋಗಿಗಳು ನೊಂದಾಯಿಸಿದ್ದಾರೆಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಮಂಗಳವಾರ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಉದ್ಯೋಗ ಮೇಳದಲ್ಲಿ ಅಂದಾಜು 5 ಸಾವಿರ ಉದ್ಯೋಗಾಕಾಂಕ್ಷಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ಇಲ್ಲಿವರೆಗೆ ಒಟ್ಟು 4835 ಉದ್ಯೋಗಾಕಾಂಕ್ಷಿಗಳು ಉದ್ಯೋಗಕ್ಕಾಗಿ ನೊಂದಾಯಿಸಿಕೊಂಡಿದ್ದಾರೆ. 45 ಹೆಚ್ಚು ಕಂಪನಿಗಳು ಈಗಾಗಲೇ ನೊಂದಾವಣಿ ಮಾಡಿಕೊಂಡಿವೆ. ಇನ್ನು ಹೆಚ್ಚಿಗೆ ಬರುವ ನೀರಿಕ್ಷೆ ಇರುವುದಾಗಿ ತಿಳಿಸಿದರು.
ವಿವಿಧ ಕಂಪನಿಗಳಿಂದ ಪಡೆದ ಮಾಹಿತಿಗಳ ಪ್ರಕಾರ ಅಂದಾಜು 2800 ಕ್ಕೂ ಅಧಿಕ ವಿವಿಧ ಹುದ್ದೆಗಳಿಗೆ ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳುವವರಿದ್ದಾರೆ. 7ನೇ ತರಗತಿ, ಎಸ್.ಎಸ್.ಎಲ್.ಸಿ, ವಿವಿಧ ಪದವಿ ಹಾಗೂ ಡಿಪ್ಲೋಮಾ ಸೇರಿದಂತೆ ವೃತ್ತಿಪರ ಕೋರ್ಸಗಳನ್ನು ಪೂರೈಸಿರುವ ಅಭ್ಯಥರ್ಿಗಳಿಗೂ ಉದ್ಯೋಗಾವಕಾಶಗಳು ಲಭ್ಯವಾಗುವಂತೆ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯ ಎಲ್ಲ ಕೌಶಲ್ಯ ಕೇಂದ್ರಗಳಲ್ಲಿ ತರಬೇತಿ ಪಡೆದ ಅಭ್ಯಥರ್ಿಗಳನ್ನು ಆಹ್ವಾನಿಸಲಾಗಿದೆ ಎಂದರು.
ಹೆಸರು ನೋಂದಣಿಗೆ ಫೆಬ್ರವರಿ 25 ಕೊನೆಯ ದಿನವಾಗಿತ್ತು. ಅನಿವಾರ್ಯ ಕಾರಣಗಳಿಂದ ಆನ್ಲೈನ್ನಲ್ಲಿ ನೋಂದಣಿಯಾಗದೇ ಇರುವ ಅಭ್ಯಥರ್ಿಗಳು ಉದ್ಯೋಗ ಮೇಳ ನಡೆಯುವ ಸ್ಥಳದಲ್ಲೇ ಸ್ಥಾಪಿಸಲಾಗುವ ಕೌಂಟರ್ಗಳಲ್ಲಿ ತಮ್ಮ ಹೆಸರುಗಳ್ನು ನೋಂದಾಯಿಸಿಕೊಳ್ಳಬಹುದಾಗಿದೆ. ಭಾಗವಹಿಸುವ ಅಭ್ಯಥರ್ಿಗಳು ವಿದ್ಯಾರ್ಹತೆಯ ನಕಲು ದಾಖಲಾತಿಗಳು, ಅನುಭವ ಪ್ರಮಾಣ ಪತ್ರ ಹಾಗೂ ಸ್ವ-ವಿವರಗಳ ಪ್ರತಿಗಳೊಂದಿಗೆ ಉದ್ಯೋಗ ಮೇಳದಲ್ಲಿ ಹಾಜರಾಗಬಹುದಾಗಿದೆ ಎಂದರು.
ಉದ್ಯೋಗ ಮೇಳಕ್ಕೆ ಆಗಮಿಸುವ ಉದ್ಯೋಗಾಕಾಂಕ್ಷಿಗಳಿಗೆ ಅಲ್ಪೋಪಹಾರದ ವ್ಯವಸ್ಥೆ ಮಾಡಲಾಗಿದೆ. ಮಹಿಳೆಯರಿಗೆ ಮತ್ತು ವಿಶೇಷ ಚೇತನರಿಗೆ ಪ್ರತ್ಯೇಕ ನೊಂದಣಿ ಕೌಂಟರ್ ತೆರೆಯಲಾಗಿದೆ. ಉದ್ಯೋಗ ಮೇಳ ಆವರಣದಲ್ಲಿ ಪ್ರಥಮ ಚಿಕಿತ್ಸೆ ಮತ್ತು ಅಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಉದ್ಯೋಗದಾತರಿಗೆ ಮತ್ತು ಉದ್ಯೋಗಾಕಾಂಕ್ಷಿಗಳ ವಾಹನ ನಿಲುಗಡೆಗೆ ಕಾಳಿದಾಸ ಶಿಕ್ಷಣ ಸಂಸ್ಥೆಯ ಆವರಣ ಮತ್ತು ಕಲ್ಯಾಣ ಮಂಟಪದ ಆವರಣದಲ್ಲಿ ವ್ಯವಸ್ಥೆ ಮಾಡಿರುವುದಾಗಿ ತಿಳಿಸಿದರು.
ಜಿಲ್ಲೆಯ ಬೇರೆ ಬೇರೆ ಊರಿನಿಂದ ಬರುವ ಉದ್ಯೋಗಾಕಾಂಕ್ಷಿಗಳ ಅನುಕೂಲಕ್ಕಾಗಿ ಎಲ್ಲ ಬಸ್ಸುಗಳನ್ನು ವಿದ್ಯಾಗಿರಿಯ ಇಂಜಿನೀಯರಿಂಗ್ ಕಾಲೇಜು ಸರ್ಕಲ್ಗೆ ನಿಲುಗಡೆ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸುವದಲ್ಲದೇ ಅವರು ಕೆಲಸ ಮಾಡುತ್ತಿರುವ ಬಗ್ಗೆ ಜಾಬ್ ಟ್ರ್ಯಾಕಿಂಗ್ ಕೂಡಾ ಮಾಡಲಾಗುತ್ತಿದೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಪ್ರೊಬೇಷನರಿ ಐ.ಎ.ಎಸ್ ಅಧಿಕಾರಿ ಗಿರಮಾ ಪನ್ವಾರ, ಎನ್.ಐ.ಸಿ ಅಧಿಕಾರಿ ಗಿರಿಯಾಚಾರ, ಜಿಲ್ಲಾ ಕೌಶಲ್ಯ ತರಬೇತಿ ಕೇಂದ್ರದ ಪ್ರಾಂಶುಪಾಲ ಹಿರೇಮಠ ಉಪಸ್ಥಿತರಿದ್ದರು.
ಉದ್ಯೋಗ ಮೇಳಕ್ಕೆ ಡಿಸಿಎಂ ಚಾಲನೆ
ಫೆಬ್ರವರಿ 27 ಮತ್ತು 28 ರಂದು ಎರಡು ದಿನಗಳ ಕಾಲ ಜರಗುವ ಜಿಲ್ಲಾ ಮಟ್ಟದ ಉದ್ಯೋಗ ಮೇಳಕ್ಕೆ 27 ರಂದು ಬೆ.10 ಗಂಟೆಗೆ ವಿದ್ಯಾಗಿರಿಯ ಬಸವೇಶ್ವರ ಇಂಜಿನೀಯರಿಂಗ್ ಕಾಲೇಜ ಆವರಣದಲ್ಲಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಚಾಲನೆ ನೀಡಲಿದ್ದಾರೆ. ಉಪ ಮುಖ್ಯಮಂತ್ರಿಗಳು, ಉನ್ನತ ಶಿಕ್ಷಣ, ಮಾಹಿತಿ ತಂತ್ರಜ್ಞಾನ ಮತ್ತು ಕೌಶಲ್ಯಾಭಿವೃದ್ದಿ ಸಚಿವರಾದ ಡಾ.ಅಶ್ವತ್ ನಾರಾಯಣ ಉಪಸ್ಥಿತರಿರುವರು. ಅಧ್ಯಕ್ಷತೆಯನ್ನು ಶಾಸಕ ವೀರಣ್ಣ ಚರಂತಿಮಠ, ಮುಖ್ಯ ಅತಿಥಿಗಳಾಗಿ ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಗೌರವಾನ್ವಿತ ಅತಿಥಿಗಳಾಗಿ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ, ಜಿ.ಪಂ ಅದ್ಯಕ್ಷೆ ಬಾಯಕ್ಕ ಮೇಟಿ, ಸಂಸದ ಪಿ.ಸಿ.ಗದ್ದಿಗೌಡರ ಸೇರಿದಂತೆ ಜಿಲ್ಲೆಯ ಎಲ್ಲ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಇತರ ಗಣ್ಯಮಾನ್ಯರು ಆಗಮಿಸುವರು.