ಟೋಕಿಯೊ, ಫೆ 10 : ಯೊಕೊಹಾಮಾ ಸಮೀಪ ಸಮುದ್ರದಲ್ಲೇ ಪ್ರತ್ಯೇಕವಾಗಿ ನಿಲ್ಲಿಸಲಾಗಿರುವ ಪ್ರವಾಸಿ ಹಡಗಿನಲ್ಲಿ (ಕ್ರೂಸ್) ಹೆಚ್ಚುವರಿ 60ಕ್ಕೂ ಹೊಸ ಕೊರೋನವೈರಸ್ ಸೋಂಕು ಪ್ರಕರಣಗಳು ದೃಢಪಟ್ಟಿವೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.
ಇದರೊಂದಿಗೆ ಜಪಾನ್‌ನಲ್ಲಿ ಸದ್ಯ, ಡೈಮಂಡ್ ಪ್ರಿನ್ಸೆಸ್ ಕ್ರೂಸ್ ಹಡಗಿನಲ್ಲಿನ 130 ಪ್ರಕರಣಗಳು ಸೇರಿದಂತೆ 150 ಕ್ಕೂ ಹೆಚ್ಚು ಕೊರೋನವೈರಸ್ ನ ಪ್ರಕರಣಗಳು ದೃಢಪಟ್ಟಿವೆ. ಹಾಂಕಾಂಗ್‌ನಲ್ಲಿ ಹಡಗಿನಿಂದ ಇಳಿದ ಪ್ರಯಾಣಿಕರೊಬ್ಬರಿಗೆ ನ್ಯುಮೋನಿಯಾ ಉಂಟುಮಾಡುವ ವೈರಸ್ ತಗುಲಿರುವುದು ಪತ್ತೆಯಾದ ನಂತರ ಹಡಗನ್ನು ಸಮುದ್ರದಲ್ಲೇ ನಿಲ್ಲಿಸಲಾಗಿದೆ ಎಂದು ಜಪಾನ್ ಟುಡೆ ವರದಿ ಮಾಡಿದೆ.
ಹಡಗಿನಲ್ಲಿ ನೈರ್ಮಲ್ಯ ನಿಯಂತ್ರಣದಲ್ಲಿ ಏನಾದರೂ ನೂನ್ಯತೆಗಳಿವೆಯೇ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಹಡಗಿನಲ್ಲಿರುವ ವೃದ್ಧರನ್ನು ಪರೀಕ್ಷಿಸಲು ಸರ್ಕಾರ ಉದ್ದೇಶಿಸಿದೆ.
‘ಸಾಧ್ಯವಾದರೆ, ಅನಾರೋಗ್ಯದಿಂದ ಬಳಲುತ್ತಿರುವ 80 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರನ್ನೂ ಪರೀಕ್ಷೆಗೊಳಪಡಿಸಲು ಆಲೋಚಿಸುತ್ತಿದ್ದೇವೆ.’ ಎಂದು ಮುಖ್ಯ ಸಂಪುಟ ಕಾರ್ಯದರ್ಶಿ ಯೋಶಿಹಿದೆ ಸುಗಾ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಯಾವುದೇ ಸಂಪರ್ಕವಿಲ್ಲದೆ ಪ್ರತ್ಯೇಕವಾಗಿ ಇಡುವ ಎರಡು ವಾರಗಳ ಅವಧಿ ಕೊನೆಗೊಂಡ ನಂತರ ಹಡಗಿನಲ್ಲಿರುವ ಸುಮಾರು 3,600 ಜನರನ್ನು ಪರೀಕ್ಷಿಸಲು ಯೋಚಿಸಲಾಗುತ್ತಿದೆ ಎಂದು ಆರೋಗ್ಯ, ಕಾರ್ಮಿಕ ಮತ್ತು ಕಲ್ಯಾಣ ಸಚಿವಾಲಯ ಸೋಮವಾರ ಹೇಳಿದೆ.
ಪರೀಕ್ಷೆ ನಂತರ, ವೈರಸ್ ಸೋಂಕು ದೃಢಪಡದ ಪ್ರಯಾಣಿಕರು ಹಡಗಿನಿಂದ ಹೊರಬಹರಬಹುದು ಎಂದು ಎಂದು ಸಚಿವಾಲಯ ಹೇಳಿದೆ.
ಹಡಗಿನಲ್ಲಿರುವ ಜನರು ಫೆ 19 ರಿಂದ ನಿರ್ಗಮಿಸಲು ಅವಕಾಶವಿದೆ ಎಂದು ಸಚಿವಾಲಯ ಈ ಹಿಂದೆ ತಿಳಿಸಿತ್ತು. ಆದರೆ ಪ್ರಯಾಣಿಕರು ಪರೀಕ್ಷಾ ವರದಿಗಳಿಗೆ ಕಾಯಬೇಕಾಗುತ್ತದೆ.
‘ದೇಶದ ನಾಗರಿಕರ ಸಮಸ್ಯೆ ಮತ್ತು ಕಳವಳಗಳನ್ನು ನಾವು ಸರಿಯಾಗಿ ಬಗೆರಿಸಬೇಕಾಗಿದೆ.’ ಎಂದು ಆರೋಗ್ಯ ಸಚಿವ ಕಟ್ಸುನೊಬು ಕ್ಯಾಟೊ ಹೇಳಿದರು.