ಮಾಸ್ಕೋ, ಆ 10 ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನ ವಿಧಿ 370 ರದ್ದು ಸಂವಿಧಾನ ಚೌಕಟ್ಟಿನಲ್ಲಿದೆ ಎಂದು ರಷ್ಯಾ ಶನಿವಾರ ಭಾರತ ಸರ್ಕಾರದ ನಿರ್ಧಾರಕ್ಕೆ ಬೆಂಬಲ ನೀಡಿದೆ.
ಭಾರತ - ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಬಾಂಧವ್ಯ ಸಹಜವಾಗಿರಬೇಕಿದೆ; ಉಭಯ ದೇಶಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ರಾಜಕೀಯ ಮತ್ತು ರಾಜತಾಂತ್ರಿಕ ಮಾರ್ಗದಲ್ಲಿ 1972 ರ ಶಿಮ್ಲಾ ಒಪ್ಪಂದ ಮತ್ತು 1999 ರ ಲಾಹೋರ್ ಘೋಷಣೆಯಡಿ ಪರಿಹರಿಸಿಕೊಳ್ಳಬೇಕಿದೆ ಎಂದು ರಷ್ಯಾ ವಿದೇಶಾಂಗ ಸಚಿವಾಲಯದ ಹೇಳಿಕೆ ತಿಳಿಸಿದೆ. ಜಮ್ಮು ಕಾಶ್ಮೀರದ ಸ್ಥಾನಮಾನ ಬದಲಾವಣೆಯಿಂದಾಗಿ ಅಲ್ಲಿ ಅಹಿತರಕರ ಪರಿಸ್ಥಿತಿ ಉಲ್ಬಣವಾಗಲು ಭಾರತ ಮತ್ತು ಪಾಕಿಸ್ತಾನ ಅವಕಾಶ ನೀಡುವುದಿಲ್ಲ ಎಂದು ರಷ್ಯಾ ಬಯಸಿದೆ. ಜಮ್ಮು ಕಾಶ್ಮೀರ ರಾಜ್ಯವನ್ನು ಜಮ್ಮು ಕಾಶ್ಮೀರ ಮತ್ತು ಲಡಾಖ್ ಎಂದು ಎರಡು ಕೇಂದ್ರಾಡಳಿತ ಪ್ರದೇಶವಾಗಿ ವಿಭಜಿಸಿರುವುದು ಭಾರತದ ಸಂವಿಧಾನದ ಚೌಕಟ್ಟಿನಲ್ಲಿದೆ ಎಂದು ರಷ್ಯಾ ಅಭಿಪ್ರಾಯಪಟ್ಟಿದೆ.
ಜಮ್ಮು ಕಾಶ್ಮೀರ ವಿಶೇಷ ಸ್ಥಾನಮಾನ ರದ್ದತಿ ನಿರ್ಧಾರ ಮತ್ತು ಕ್ರಮಗಳ ಕುರಿತು ವಿವಿಧ ದೇಶಗಳಿಗೆ ವಿವರಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಶುಕ್ರವಾರ ಹೇಳಿದ್ದಾರೆ.
ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಬಾಂಧವ್ಯದಲ್ಲಿ ಬಿರುಕಿದೆ ಮತ್ತು ಪರಿಸ್ಥಿತಿ ಅಹಿತಕರವಾಗಿದೆ ಎಂಬ ಪಾಕಿಸ್ತಾನದ ವಾದವನ್ನು ಭಾರತ ಒಪ್ಪುವುದಿಲ್ಲ ಎಂದು ಅವರು ಹೇಳಿದ್ದಾರೆ. ಪಾಕಿಸ್ತಾನ ಆತಂಕದ ವಾತಾವರಣ ಬಿಂಬಿಸುವಂತೆ ಮಾಡಿದೆ ಎಂದು ಅವರು ಆರೋಪಿಸಿರುವ ಅವರು, ಭಾರತವಾಗಲೀ, ಅಂತಾರಾಷ್ಟ್ರೀಯ ಸಮುದಾಯವಾಗಲೀ ಯುದ್ಧದ ವಾತಾವರಣದ ಅನಿಸಿಕೆ ವ್ಯಕ್ತಪಡಿಸಿಲ್ಲ ಎಂದು ಅವರು ಹೇಳಿದ್ದಾರೆ.