ನಾಳೆಯಿಂದ ಕಲಬುರಗಿಯಲ್ಲಿ ಜಲಜಾಕ್ಷಿ ಪಿ. ಕುಲಕರ್ಣಿ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ

ನಾಳೆಯಿಂದ ಕಲಬುರಗಿಯಲ್ಲಿ ಜಲಜಾಕ್ಷಿ ಪಿ. ಕುಲಕರ್ಣಿ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ  Jalajakshi P. Kulkarni's solo art exhibition in Kalaburagi starts tomorrow

ಲೋಕದರ್ಶನ ವರದಿ 

ಕಲಬುರಗಿ, ಜು. 30: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಯುವ ಚಿತ್ರಕಲಾವಿದೆ ಜಲಜಾಕ್ಷಿ ಪಿ. ಕುಲಕರ್ಣಿ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವು ಆಗಸ್ಟ್‌ 1ರಿಂದ 3ರವರೆಗೆ ನಗರದ ದಿ ಆರ್ಟ್‌ ಇಂಟಿಗ್ರೇಷನ್ ಚಿತ್ರಕಲಾ ಮಹಾವಿದ್ಯಾಲಯದ ಅಂಕುರ್ ಕಲಾ ಗ್ಯಾಲರಿಯಲ್ಲಿ ನಡೆಯಲಿದೆ.  

ಪ್ರದರ್ಶನವನ್ನು ಆಗಸ್ಟ್‌ 1ರಂದು ಬೆಳಿಗ್ಗೆ 11 ಗಂಟೆಗೆ ಅಪರ ಆಯುಕ್ತರ ಕಚೇರಿಯ ನಿವೃತ್ತ ಚಿತ್ರಕಲಾ ವಿಷಯ ಪರೀವೀಕ್ಷಕ ಶಿವಾನಂದ ಕೊಪ್ಪದ ಉದ್ಘಾಟಿಸಲಿದ್ದಾರೆ. ಹಿರಿಯ ಚಿತ್ರಕಲಾವಿದರಾದ ಬಾಬುರಾವ್ ಹೆಚ್‌. ಹಾಗೂ ವೀರೇಂದ್ರ ಶಾ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ದಿ ಆರ್ಟ್‌ ಇಂಟಿಗ್ರೇಷನ್ ಚಿತ್ರಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಎಂ.ಎಚ್‌. ಬೆಳಮಗಿ ಅಧ್ಯಕ್ಷತೆ ವಹಿಸಲಿದ್ದಾರೆ.  

ಜಲಜಾಕ್ಷಿ ಪಿ. ಕುಲಕರ್ಣಿ ಅವರು ಚಿತ್ರಕಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕರ್ನಾಟಕ ಲಲಿತಕಲಾ ಅಕಾಡೆಮಿಯ 53ನೇ ವಾರ್ಷಿಕ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದುವರೆಗೆ 15ಕ್ಕೂ ಹೆಚ್ಚು ಏಕವ್ಯಕ್ತಿ ಹಾಗೂ ಸಮೂಹ ಚಿತ್ರಕಲಾ ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ.  

ಈ ಪ್ರದರ್ಶನದಲ್ಲಿ ವಿವಿಧ ಮಾಧ್ಯಮಗಳಲ್ಲಿ ರಚಿಸಿರುವ 15ಕ್ಕೂ ಹೆಚ್ಚು ಕಲಾಕೃತಿಗಳನ್ನು ಪ್ರದರ್ಶಿಸಲಾಗುತ್ತಿದೆ. ಅವರ ಚಿತ್ರಗಳಲ್ಲಿ ಪರಿಸರ ಸಂರಕ್ಷಣೆ ಹಾಗೂ ಸ್ತ್ರೀ ಸಂವೇದನೆಗೆ ಸಂಬಂಧಿಸಿದ ವಿವಿಧ ವಿಷಯಗಳು ಪ್ರಮುಖವಾಗಿ ಮೂಡಿಬಂದಿವೆ.