ವಾಷಿಂಗ್ಟನ್, ಅ 4: ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್ ಅಮೆರಿಕಾದ ನೂತನ ರಾಷ್ಟ್ರೀಯ ಭದ್ರತಾ ಸಲಹೆಗಾರ ರಾಬರ್ಟ್ ಒಬಿರನ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಗುರುವಾರ ಟ್ರಂಪ್ ಆಡಳಿತ ಉನ್ನತ ನೀತಿ ನಿರೂಪಕರ ಮುಖಾಮುಖಿ ಭಾಗವಾಗಿ ಸಚಿವ ಜೈಶಂಕರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಒಬಿರನ್ ಅವರನ್ನು ಭೇಟಿ ಮಾಡಿದರು.
ರಾಬರ್ಟ್ ಒಬಿರನ್ ಅವರನ್ನು ಭೇಟಿ ಮಾಡಿರುವುದು ಅತ್ಯಂತ ಸಂತಸದ ಮೂಡಿಸಿದ್ದು, ಪ್ರಮುಖ ವಿಷಯಗಳನ್ನು ಚರ್ಚೆ ನಡೆಸಿದ್ದಾಗಿ, ಅವರೊಂದಿಗೆ ಕಾರ್ಯನಿರ್ವಹಿಸಲು ಕಾತುರದಿಂದ ಎದುರು ನೋಡುತ್ತಿರುವುದಾಗಿ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ರಾಬರ್ಟ್ ಓಬಿರನ್ ಡೊನಾಲ್ಡ್ ಟ್ರಂಪ್ ಆಡಳಿತದ 4ನೇ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿದ್ದು, ಈ ಹಿಂದಿನ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬೋಲ್ಟನ್ ಅವರ ಸ್ಥಾನದಲ್ಲಿ ನೇಮಿಸಲಾಗಿದೆ. ಬೋಲ್ಟನ್ ವಿರುದ್ದ ಅಧ್ಯಕ್ಷ ಟ್ರಂಪ್ ಕಳೆದ ತಿಂಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ತಮ್ಮ ಅಮೆರಿಕಾ ವಾಸ್ತವ್ಯದ ವೇಳೆ ಸಚಿವ ಜೈಶಂಕರ್, ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೋ ಸೇರಿದಂತೆ ಹಲವು ಉನ್ನತ ಮಟ್ಟದ ಅಧಿಕಾರಿಗಳನ್ನು ಭೇಟಿ ಮಾತುಕತೆ ನಡೆಸಿದರು.
ಭಾರತ ವಿದೇಶಾಂಗ ಸಚಿವ ಜೈಶಂಕರ್ ಅವರೊಂದಿಗೆ ಕಾರ್ಯತಂತ್ರ ಸಹಭಾಗಿತ್ವ, ಕಾಶ್ಮೀರ ಬೆಳವಣಿಗೆ ಹಾಗೂ ಜಾಗತಿಕ ಬೆಳವಣಿಗಳ ಕುರಿತು ಮಾತುಕತೆ ನಡೆಸಿದ್ದಾಗಿ ಅಮರಿಕಾ ವಿದೇಶಾಂಗ ಇಲಾಖೆ ನಂತರ ಬಿಡುಗಡೆಮಾಡಿರುವ ಹೇಳಿಕೆಯಲ್ಲಿ ತಿಳಿಸಿದೆ.
ಸಚಿವ ಜೈಶಂಕರ್ ಅವರು ರಕ್ಷಣಾ ಸಚಿವ ಡಾ. ಮಾರ್ಕ್ ಟಿ ಎಸ್ಪರ್ ಅವರೊಂದಿಗೂ ಮಾತುಕತೆ ನಡೆಸಿದ್ದರು. ಇಂಡೋ- ಯುಎಸ್ ಸಹಕಾರ ಕುರಿತು ಫಲಪ್ರದ ಮಾತುಕತೆ ನಡೆಸಿದ್ದಾಗಿ ಟ್ವೀಟ್ ಮಾಡಿದ್ದಾರೆ.