25ರಂದು ಜಗದ್ಗುರು ರೇಣುಕಾಚಾರ್ಯರ ಜಯಂತಿ ಯುಗಮಾನೋತ್ಸವ

ಧಾರವಾಡ 22: ಮನುಕುಲದ ಬದುಕಿಗೆ ನೀತಿಯ ನೆಲೆಯಲ್ಲಿ ಶಾಂತಿಪೂರ್ಣ ಸೌಹಾರ್ದದ ಸಾತ್ವಿಕ ತತ್ವ-ಚಿಂತನೆಯ ಹದುಳ ಹಸಿರು ಜೀವನ ವಿಧಾನವನ್ನು ಬೋಧಿಸಿರುವ ವೀರಶೈವ ಧರ್ಮ ಸಂಸ್ಥಾಪಕ ಶ್ರೀಜಗದ್ಗುರು ರೇಣುಕಾಚಾರ್ಯರ ಜಯಂತಿ ಯುಗಮಾನೋತ್ಸವ  ಮಾ. 25ರಂದು ನಗರದಲ್ಲಿ ಜರುಗಲಿದೆ ಎಂದು ಜಗದ್ಗುರು ರೇಣುಕಾಚಾರ್ಯರ ಜಯಂತಿ ಯುಗಮಾನೋತ್ಸವ ಸಂಘಟನಾ ಸಮಿತಿ ಅಧ್ಯಕ್ಷ ಮಹಾಂತೇಶ ಬೇತೂರಮಠ ತಿಳಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಷ್ಟಾವರಣ, ಪಂಚಾಚಾರ ಮತ್ತು ಷಟ್‍ಸ್ಥಲಗಳ ನೆಲೆಯಲ್ಲಿ ಮಾನವನ ಬದುಕಿಗೆ ಆಧ್ಯಾತ್ಮದ ಅರಿವಿನ ಬೆಳಗನ್ನು ಮೂಡಿಸಿರುವ ಸಿದ್ಧಾಂತ ಶಿಖಾಮಣಿ ಧರ್ಮಗ್ರಂಥವನ್ನು ದಯಪಾಲಿಸಿ, ಆ ಮೂಲಕ ಉನ್ನತ ಜನಕಲ್ಯಾಣ ಮೌಲಿಕ ತತ್ವಗಳನ್ನು ಬೋಧನೆ ಮಾಡಿರುವ ಶ್ರೀಜಗದ್ಗುರು ರೇಣುಕಾಚಾರ್ಯರ ಜಯಂತಿ ಯುಗಮಾನೋತ್ಸವವನ್ನು ವಿಶಿಷ್ಟವಾಗಿ ಧಾರವಾಡ ನಗರದಲ್ಲಿ ಆಚರಿಸಲಾಗುತ್ತಿದೆ ಎಂದರು. 

ಭಾವಚಿತ್ರದ ಮೆರವಣಿಗೆ : ಮಾರ್ಚ-25 ರಂದು ಮುಂಜಾನೆ 8 ಗಂಟೆಗೆ ಧಾರವಾಡ ಹೊಸಯಲ್ಲಾಪೂರ ಶ್ರೀಮಳೆಮಲ್ಲೇಶ್ವರ ಸಂಸ್ಥಾನ ಹಿರೇಮಠದಿಂದ ಶ್ರೀಜಗದ್ಗುರು ರೇಣುಕಾಚಾರ್ಯರ ಭಾವಚಿತ್ರದ ಮೆರವಣಿಗೆಯು 108 ಕುಂಭಗಳು, ಆರತಿ ಹಾಗೂ ವಿವಿಧ ಜನಪದ ವಾದ್ಯ-ಮೇಳಗಳೊಂದಿಗೆ ಹೊರಡುವುದು. ಈ ಧರ್ಮಾಚಾರ್ಯರ ಉತ್ಸವವು ನಗರದ ಕಾಮನಕಟ್ಟಿ, ಪಂಚಕಚೇರಿ ಓಣಿ, ಗಾಂಧೀಚೌಕ, ಸುಭಾಸ ರಸ್ತೆ, ಬಸ್‍ಸ್ಟ್ಯಾಂಡ್ ಹಾಗೂ ಆಝಾದಪಾರ್ಕ ರಸ್ತೆಯ ಮೂಲಕ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಸಂಪನ್ನಗೊಳ್ಳಲಿದೆ ಎಂದು ಹೇಳಿದರು.

ಶ್ರೀಗಳ ಆಶೀರ್ವಚನ: ಮಾ. 25ರಂದು ಗುರುವಾರ ಅಪರಾಹ್ನ 12 ಗಂಟೆಗೆ ಕರ್ನಾಟಕ ವಿದ್ಯಾವರ್ಧಕ ಸಂಘದ ಡಾ. ಪಾಪು ಸಭಾಭವನದಲ್ಲಿ ಶ್ರೀಜಗದ್ಗುರು ರೇಣುಕಾಚಾರ್ಯರ ಜಯಂತಿ ಯುಗಮಾನೋತ್ಸವದ ವೇದಿಕೆ ಕಾರ್ಯಕ್ರಮ ಜರುಗುವುದು. 

ಸವದತ್ತಿ ಮೂಲಿಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಇನಾಂಹೊಂಗಲ-ಯಮಕನಮರಡಿ ವಿರಕ್ತಮಠದ ಶ್ರೀಸಿದ್ಧಲಿಂಗ ಸ್ವಾಮೀಜಿ, ಬ್ಯಾಹಟ್ಟಿ ಹಿರೇಮಠದ ಮರುಳಸಿದ್ಧ ಶಿವಾಚಾರ್ಯ ಸ್ವಾಮೀಜಿ, ಅಮ್ಮಿನಬಾವಿ ಪಂಚಗೃಹ ಹಿರೇಮಠದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಹುಬ್ಬಳ್ಳಿ ನವನಗರದ ಕಾಶಿಶಾಖಾಮಠದ ಶ್ರೀರಾಜಶೇಖರ ಶಿವಾಚಾರ್ಯ ಸ್ವಾಮೀಜಿ, ಹೊಸಯಲ್ಲಾಪೂರ ಮಳೆಮಲ್ಲೇಶ್ವರ ಸಂಸ್ಥಾನ ಹಿರೇಮಠದ ಶ್ರೀಗದಿಗಯ್ಯ ಸ್ವಾಮೀಜಿ ಸಮಾರಂಭದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡುವರು. 

ಸಮಾರಂಭದ ನಂತರ ಲಿಂಗಾಯತ್ ಟೌನ್‍ಹಾಲ್ ಆವರಣದಲ್ಲಿ ನಡೆಯುವ ದಾಸೋಹ ಸೇವೆಯಲ್ಲಿ ಮಹಾಪ್ರಸಾದ ವಿತರಣೆ ಜರುಗಲಿದೆ. ಮಂಜುನಾಥ ಹಿರೇಮಠ, ರಾಜೇಂದ್ರ ಹಿರೇಮಠ, ಸರೋಜಾ ಪಾಟೀಲ, ಈಶ್ವರ ಹಿರೇಮಠ, ಗುರುಸ್ವಾಮಿ ಹಿರೇಮಠ ಸುದ್ದಿಗೋಷ್ಠಿಯಲ್ಲಿ ಇದ್ದರು.