ಜೆಎಸ್‌ಎಸ್ ಶ್ರೀಮಂಜುನಾಥೇಶ್ವರ ಸೆಂಟ್ರಲ್ ಸ್ಕೂಲ್ ವಿದ್ಯಾರ್ಥಿಗಳ ಗಮನಾರ್ಹ ಸಾಧನೆ

ಜೆಎಸ್‌ಎಸ್ ಶ್ರೀಮಂಜುನಾಥೇಶ್ವರ ಸೆಂಟ್ರಲ್ ಸ್ಕೂಲ್ ವಿದ್ಯಾರ್ಥಿಗಳ ಗಮನಾರ್ಹ ಸಾಧನೆ JSS Srimanmanjunatheshwar Central School Students Excel in Various Fields

ಧಾರವಾಡ, ಆ. 18: ಜೆಎಸ್‌ಎಸ್ ಶ್ರೀಮಂಜುನಾಥೇಶ್ವರ ಸೆಂಟ್ರಲ್ ಸ್ಕೂಲ್, ವಿದ್ಯಾಗಿರಿ, ಧಾರವಾಡದ ವಿದ್ಯಾರ್ಥಿಗಳು ಕ್ರೀಡೆ, ಕಲೆ ಹಾಗೂ ತಂತ್ರಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿ ಶಾಲೆಗೆ ಕೀರ್ತಿ ತಂದಿದ್ದಾರೆ.

ಶಾಲೆಯ ವಿದ್ಯಾರ್ಥಿ ಕು. ಓಂ ಜಂತ್ಲಿ ಅವರು ಮಿಕ್ಸಡ್ ಮಾರ್ಷಲ್ ಆರ್ಟ್ಸ್ ಇಂಡಿಯಾ ವತಿಯಿಂದ ನೀಡಲಾಗುವ ‘ಬೆಸ್ಟ್ ಅಥ್ಲೀಟ್’ ಪ್ರಮಾಣಪತ್ರಕ್ಕೆ ಭಾಜನರಾಗಿದ್ದಾರೆ. ಕು. ಸಾಂಘವಿ ಭಜಂತ್ರಿ ಅವರು ಕೇಂದ್ರ ಸರ್ಕಾರದ ‘ನಶಾ ಮುಕ್ತ ಯುವಾ – ವಿಕಸಿತ ಭಾರತಕ್ಕಾಗಿ’ ಅಭಿಯಾನದಡಿ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ತಂತ್ರಜ್ಞಾನ ಕ್ಷೇತ್ರದಲ್ಲಿ ಕು. ಚಿನ್ಮಯ ಮಲ್ಲನಗೌಡರ ಅವರು ನಾಸಾ ಆಯೋಜಿಸಿದ್ದ ‘ನಾಸಾ ವೈಪರ್ ಹ್ಯಾಕ್‌ಥಾನ್–2026’ರಲ್ಲಿ ಪ್ರಥಮ ಬಹುಮಾನ ಗಳಿಸುವ ಮೂಲಕ ಗಮನ ಸೆಳೆದಿದ್ದು, 314 ಅಮೆರಿಕನ್ ಡಾಲರ್ ನಗದು ಬಹುಮಾನ ಪಡೆದಿದ್ದಾರೆ.

ಹಾಸನದ ಮಿಲೆನಿಯಂ ವರ್ಲ್ಡ್ ಸ್ಕೂಲ್ ಆಯೋಜಿಸಿದ್ದ ರಾಜ್ಯಮಟ್ಟದ ‘ನಾನ್ ಮೆಡಲಿಸ್ಟ್ ಸ್ವಿಮ್ಮಿಂಗ್ ಮೀಟ್–2026’ರಲ್ಲಿ ಕು. ಅಶ್ವಿನ್ ಕಣವಿ ಅವರು ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಇದಲ್ಲದೆ, ಕೇಂದ್ರ ಸರ್ಕಾರದ ‘ನಶಾ ಮುಕ್ತ ಯುವಾ – ವಿಕಸಿತ ಭಾರತಕ್ಕಾಗಿ’ ಅಭಿಯಾನದಡಿ ನಡೆದ ನೃತ್ಯ ಸ್ಪರ್ಧೆಯಲ್ಲಿಯೂ ಶಾಲೆಯ ವಿದ್ಯಾರ್ಥಿಗಳು ಪ್ರಥಮ ಬಹುಮಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಸಾಧನೆಗೈದ ಎಲ್ಲ ವಿದ್ಯಾರ್ಥಿಗಳನ್ನು ಜೆಎಸ್‌ಎಸ್‌ನ ಕಾರ್ಯದರ್ಶಿಗಳಾದ ಡಾ. ಅಜಿತ ಪ್ರಸಾದ, ಶ್ರೀ ಮಹಾವೀರ ಉಪಾಧ್ಯೆ, ಪ್ರಾಚಾರ್ಯರಾದ ಶ್ರೀಮತಿ ರಜನಿ ಪಾಟೀಲ್ ಹಾಗೂ ಶಿಕ್ಷಕ ವೃಂದದವರು ಹೃತ್ಪೂರ್ವಕವಾಗಿ ಅಭಿನಂದಿಸಿ, ಮುಂದಿನ ಸಾಧನೆಗಳಿಗೆ ಶುಭ ಹಾರೈಸಿದ್ದಾರೆ.