ರಾಷ್ಟ್ರಧ್ವಜದ ಗೌರವ ಕಾಪಾಡುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ

ರಾಷ್ಟ್ರಧ್ವಜದ ಗೌರವ ಕಾಪಾಡುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ It is the duty of every Indian to uphold the honor of the national flag

ಲೋಕದರ್ಶನ ವರದಿ

ಮಹಾಲಿಂಗಪುರ 13 : ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ರಾಷ್ಟ್ರಧ್ವಜದ ಘನತೆ ಹಾಗೂ ಗೌರವ ಕಾಪಾಡುವ ಕುರಿತು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಮಹಾಲಿಂಗಪುರ ನಗರದ ಎಲ್ಲ ಶಾಲಾ-ಕಾಲೇಜುಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.  ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಕಾಗದ ಹಾಗೂ ಪ್ಲಾಸ್ಟಿಕ್‌ನಿಂದ ತಯಾರಿಸಿದ ಸಣ್ಣ ರಾಷ್ಟ್ರಧ್ವಜಗಳನ್ನು ಬಳಸಿದ ಬಳಿಕ ರಸ್ತೆಗಳು, ಚರಂಡಿಗಳು ಹಾಗೂ ಕಸದ ರಾಶಿಗಳಲ್ಲಿ ಎಸೆಯುತ್ತಿರುವುದು ರಾಷ್ಟ್ರಧ್ವಜಕ್ಕೆ ಅಪಮಾನವಾಗುವಂತಾಗಿದೆ.

ಹೀಗಾಗಿ ಶಾಲಾ-ಕಾಲೇಜುಗಳಲ್ಲಿಯೇ ವಿದ್ಯಾರ್ಥಿಗಳಿಗೆ ರಾಷ್ಟ್ರಧ್ವಜದ ಮಹತ್ವ, ಅದರ ಗೌರವ ಹಾಗೂ ರಾಷ್ಟ್ರೀಯ ಚಿಹ್ನೆಗಳ ಕುರಿತು ಜಾಗೃತಿ ಮೂಡಿಸಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.  ಸಮಿತಿಯ ರಾಘು ಪವಾರ ಮಾತನಾಡಿ, “ರಾಷ್ಟ್ರಧ್ವಜ ಕೇವಲ ಒಂದು ಬಟ್ಟೆಯ ತುಂಡಲ್ಲ. ದೇಶಕ್ಕಾಗಿ ಹೋರಾಡಿದ ಅಸಂಖ್ಯಾತ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ ಮತ್ತು ದೇಶಭಕ್ತಿಯ ಪ್ರತೀಕವಾಗಿದೆ. ಧ್ವಜ ಹಾರಿಸುವುದಷ್ಟೇ ದೇಶಭಕ್ತಿ ಅಲ್ಲ; ಕಾರ್ಯಕ್ರಮ ಮುಗಿದ ನಂತರವೂ ಅದರ ಗೌರವ ಕಾಪಾಡುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ಪ್ಲಾಸ್ಟಿಕ್ ಹಾಗೂ ಕಾಗದದ ಧ್ವಜಗಳನ್ನು ಬಳಸಿ ಎಲ್ಲೆಂದರಲ್ಲಿ ಎಸೆಯುವ ಪದ್ಧತಿ ನಿಲ್ಲಬೇಕು” ಎಂದು ಹೇಳಿದರು. 

ಸುದೀಪ ಮೇಟಿ ಮಾತನಾಡಿ, “ವಿದ್ಯಾರ್ಥಿಗಳೇ ದೇಶದ ಭವಿಷ್ಯದ ಪ್ರಜೆಗಳು. ಅವರಿಗೆ ಬಾಲ್ಯದಿಂದಲೇ ರಾಷ್ಟ್ರಧ್ವಜ, ರಾಷ್ಟ್ರಗೀತೆ ಹಾಗೂ ರಾಷ್ಟ್ರೀಯ ಚಿಹ್ನೆಗಳ ಮಹತ್ವ ತಿಳಿಸಬೇಕು. ಸ್ವಾತಂತ್ರ್ಯೋತ್ಸವದ ನಂತರ ಧ್ವಜವನ್ನು ಗೌರವಯುತವಾಗಿ ಸಂರಕ್ಷಿಸುವ ಹಾಗೂ ವಿಲೇವಾರಿ ಮಾಡುವ ಬಗ್ಗೆ ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಮೂಡಿಸಬೇಕು” ಎಂದು ಹೇಳಿದರು.  ರಾಷ್ಟ್ರಧ್ವಜದ ಗೌರವಕ್ಕೆ ಧಕ್ಕೆ ಉಂಟಾಗದಂತೆ ಪ್ಲಾಸ್ಟಿಕ್ ಧ್ವಜಗಳ ಮಾರಾಟ ಮತ್ತು ಬಳಕೆಗೆ ಕಡಿವಾಣ ಹಾಕಬೇಕು. ಅಂಗಡಿಗಳಲ್ಲಿ ಇಂತಹ ಧ್ವಜಗಳ ಮಾರಾಟ ನಡೆಯದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.

ರಾಷ್ಟ್ರಧ್ವಜದ ಅವಮಾನ ತಡೆಗೆ ಅನ್ವಯಿಸುವ ರಾಷ್ಟ್ರೀಯ ಗೌರವ ಅವಮಾನ ತಡೆ ಕಾಯ್ದೆಹಿ1971 ಹಾಗೂ ಸಂಬಂಧಿಸಿದ ನಿಯಮಗಳ ಕುರಿತು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಅರಿವು ಮೂಡಿಸಬೇಕು ಎಂದು ಸಮಿತಿ ಆಗ್ರಹಿಸಿದೆ.  ‘ರಾಷ್ಟ್ರಧ್ವಜ ನಮ್ಮ ಹೆಮ್ಮೆ; ಅದರ ಗೌರವ ನಮ್ಮ ಹೊಣೆ’ ಎಂಬ ಸಂದೇಶವನ್ನು ಮನೆ-ಮನೆಗೂ, ಶಾಲೆ-ಕಾಲೇಜುಗಳಿಗೂ ತಲುಪಿಸುವ ಅಗತ್ಯವಿದೆ.

ಸ್ವಾತಂತ್ರ್ಯೋತ್ಸವದ ಸಂಭ್ರಮ ಮುಗಿದ ಬಳಿಕ ರಾಷ್ಟ್ರಧ್ವಜ ನೆಲದಲ್ಲಿ ಬಿದ್ದಿರುವ ದೃಶ್ಯ ಕಾಣದಂತೆ ಪ್ರತಿಯೊಬ್ಬರೂ ಜವಾಬ್ದಾರಿ ವಹಿಸಬೇಕು ಎಂದು ಮನವಿ ಮಾಡಲಾಗಿದೆ.  ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ  ಸಮಿತಿಯ ಮಹೇಶ ಜಿಡ್ಡಿಮನಿ, ವಿಜಯ ಸಬಕಾಳೆ, ಬಸವರಾಜ ಮುರಾರಿ, ರಾಘು ಕಪರಟ್ಟಿ, ಪ್ರವೀಣ್ ಕಂಬಾರ, ಮಹೇಶ ಗೌಡಪ್ಪಗೋಳ, ವಿಶಾಲ ಪತ್ತಾರ, ಚೆನ್ನು ಬರಮನ್ನವರ, ಕಿರಣ ಡಂಬಳ ಸೇರಿದಂತೆ ಇತರರು ಉಪಸ್ಥಿತರಿದ್ದರು.