ಪ್ರತಿಭಾವಂತ ವಿದ್ಯಾರ್ಥಿಗಳು ಮಾತ್ರ ತೇರ್ಗಡೆ ಹೊಂದುತ್ತಾರೆಂಬುದು ತಪ್ಪು ಕಲ್ಪನೆ

ಪ್ರತಿಭಾವಂತ ವಿದ್ಯಾರ್ಥಿಗಳು ಮಾತ್ರ ತೇರ್ಗಡೆ ಹೊಂದುತ್ತಾರೆಂಬುದು ತಪ್ಪು ಕಲ್ಪನೆ It is a misconception that only talented students pass.

ಲೋಕದರ್ಶನ ವರದಿ  

   ಹಾರೂಗೇರಿ  28: ನಿಜವಾದ ಸಾಧಕರು ಗುಡಿಸಲಲ್ಲೇ ಹುಟ್ಟಿ ಬೆಳೆಯುತ್ತಾರೆ. ಅರಮನೆಗಳಲ್ಲಲ್ಲ. ಯುಪಿಎಸ್ಸಿಗಳಂತ ಪರೀಕ್ಷೆಗಳನ್ನು ಪ್ರತಿಭಾವಂತ ವಿದ್ಯಾರ್ಥಿಗಳು ಮಾತ್ರ ತೇರ್ಗಡೆ ಹೊಂದುತ್ತಾರೆಂಬುದು ತಪ್ಪು ಕಲ್ಪನೆ. ಒಬ್ಬ ಸಾಮಾನ್ಯ ವಿದ್ಯಾರ್ಥಿಯೂ ನಿರಂತರ ಕಠಿಣ ಪರಿಶ್ರಮ ಮತ್ತು ಸತತ ಅಭ್ಯಾಸಿಗಳಾದರೆ ಪಾಸು ಮಾಡಲು ಸಾಧ್ಯವಿದೆ ಎಂದು ಯುಪಿಎಸ್ಸಿ ಸಾಧಕ ಕಿರಣ ಕಮತೆ ಹೇಳಿದರು. 

  ಪಟ್ಟಣದ ಶ್ರೀ ವೃಷಭೇಂದ್ರ ಶಿಕ್ಷಣ ಸಂಸ್ಥೆಯ ಬಿ.ಆರ್‌.ದರೂರ ಪ್ರಥಮ ದರ್ಜೆ ಕಾಲೇಜಿನ ಐಕ್ಯುಎಸಿ ಸಂಯೋಜಿತ ಯುಪಿಎಸ್ಸಿ 2025ರ ಭಾರತೀಯ ನಾಗರಿಕ ಸೇವೆ ಪರೀಕ್ಷೆಯಲ್ಲಿ ರಾಷ್ಟ್ರಕ್ಕೆ 53ನೇ ಮತ್ತು ಕರ್ನಾಟಕಕ್ಕೆ ಪ್ರಥಮ ರಾ​‍್ಯಂಕ್ ಪಡೆದ ಕಿರಣ ಕಮತೆ ಅವರೊಂದಿಗೆ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

   ಸಿವಿಲ್ ಇಂಜೀನೀಯರ್ ಪದವಿ ಪಡೆದ ಮೇಲೆ ಯುಪಿಎಸ್ಸಿಯಲ್ಲಿ ಸತತ ಐದು ಬಾರಿ ಸೋಲುಗಳನ್ನೇ ಎದುರಿಸಬೇಕಾಯಿತು. ಆ ಸೋಲುಗಳನ್ನು ಲೆಕ್ಕಿಸದೇ ಸಾಧಿಸುತ್ತೇನೆಂಬ ಛಲದಿಂದ ಗುರಿಯತ್ತ ಸಾಗಿದಾಗ ಮಾತ್ರ ಸಾಧನೆಯ ಶಿಖರ ಏರಲು ಸಾಧ್ಯವಿದೆ. ಹಾಗಾಗಿ ವಿದ್ಯಾರ್ಥಿಗಳು ಸಮಯದ ಸದ್ಭಳಕೆ ಮಾಡಿಕೊಳ್ಳುವುದು ತುಂಬ ಮುಖ್ಯವೆಂದು ಕಿರಣ ಕಮತೆ ಹೇಳಿದರು. 

   ಹಿರಿಯ ಸಾಹಿತಿ ಡಾ.ವಿ.ಎಸ್‌.ಮಾಳಿ ಅಧ್ಯಕ್ಷೀಯ ಪರ ನುಡಿಗಳನ್ನಾಡುತ್ತ ಸಾಧನೆಯ ದಾರಿ ಹೂವಿನಷ್ಟು ಮೃದುವಾದುದಲ್ಲ. ದಾರಿಯುದ್ದಕ್ಕೂ ಕಲ್ಲು ಮುಳ್ಳುಗಳೇ ಹೆಚ್ಚು, ಆ ಕಲ್ಲು ಮುಳ್ಳುಗಳು ವಿದ್ಯಾರ್ಥಿಗಳಿಗೆ ಯಶಸ್ಸಿನ ಮೆಟ್ಟಿಲುಗಳಾಗಬೇಕೆ ಹೊರತು ನಿರುತ್ಸಾಹಿಗಳಾಗಬಾರದು. ಮತ್ತೆ ಮತ್ತೆ ಪ್ರಯತ್ನಿಸಿ ಸಾಧಿಸುವ ಛಲಗಾರರಾಗಬೇಕೆಂದು ಹೇಳಿದರು. 

   ಅತಿಥಿಗಳಾಗಿ ಆಗಮಿಸಿದ್ದ ನಿಡಸೋಸಿಯ ಅಭಿಯಾತ್ರಿಕ ಕಾಲೇಜಿನ ಪ್ರಾಚಾರ್ಯ ಡಾ.ಸಣ್ಣಪ್ಪ ಕಮತೆ ಮಾತನಾಡಿ ವಿದ್ಯಾರ್ಥಿಗಳು ಸಾಧನೆ ಮಾಡಲು ಒಳ್ಳೆಯ ಪರಿಸರ ಸೃಷ್ಠಿಸುವುದು ಪೋಷಕರ ಕರ್ತವ್ಯವಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿ ಸಣ್ಣ ಗುರಿಗಳ ಬದಲಾಗಿ ದೊಡ್ಡ ಗುರಿಗಳನ್ನು ಇಟ್ಟುಕೊಳ್ಳಬೇಕೆಂದು ಹೇಳಿದರು. ಈವೇಳೆ ಯುಪಿಎಸ್ಸಿ ಸಾಧಕ ಕಿರಣ ಕಮತೆ ಅವರನ್ನು ಸಂಸ್ಥೆ ವತಿಯಿಂದ ಅಧ್ಯಕ್ಷ ಗೀರೀಶ ದರೂರ ಸತ್ಕರಿಸಿ, ಗೌರವಿಸಿದರು. ಯುಪಿಎಸ್ಸಿ ಸಾಧಕ ಕಿರಣ ಕಮತೆ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಗುರಿ ಸಾಧನೆಯ ಮಾರ್ಗ ಮತ್ತು ಸಿದ್ಧತೆಗಳ ಕುರಿತು ವಿವರಿಸಿದರು. 

  ಸಲಹಾ ಸಮತಿ ಸದಸ್ಯ ಆರ್‌.ಎಸ್‌.ಯಲಶೆಟ್ಟಿ, ಮುಖ್ಯೋಪಾಧ್ಯಾಯ ಆರ್‌.ಎ.ಭಾವಿ, ಪ್ರಾಚಾರ್ಯ ಶಿವಕುಮಾರ ಅಣ್ಣಿಗೇರಿ, ಪ್ರಾಚಾರ್ಯ ಶರಥ್, ಅಭಿಷೇಕ ದರೂರ ಹಾಗೂ ಮಹಾವಿದ್ಯಾಲಯದ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರಾಚಾರ್ಯ ಡಾ.ವಿನೋದ ಕಾಂಬಳೆ ಸ್ವಾಗತಿಸಿದರು. ಪ್ರೊ.ತ್ರೀಶಲಾ ಮಂಗಾಜೆ ನಿರೂಪಿಸಿದರು. ಡಾ.ರಮೇಶ ಕಮತಗಿ ವಂದಿಸಿದರು.