‘ಇಷ್ಟಲಿಂಗಾರ್ಚನೆ ಕೇಂದ್ರಿತ ವೀರಶೈವವು ವಿಶ್ವಧರ್ಮ’

‘ಇಷ್ಟಲಿಂಗಾರ್ಚನೆ ಕೇಂದ್ರಿತ ವೀರಶೈವವು ವಿಶ್ವಧರ್ಮ’  Ishtalingarchana is prominent in all the doctrinal propositions of Veerashaiva-Lingayat

ಕಾಶಿ ಪೀಠದಲ್ಲಿ ರಶಿಯಾ ಭಕ್ತರಿಗೆ ಇಷ್ಟಲಿಂಗ ದೀಕ್ಷೆ ನೀಡಿದ ಶ್ರೀಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು.  

ಧಾರವಾಡ  25: ತಜ್ಞರ ನಿರ್ಧಾರದಂತೆ ಸುಮಾರು ಕ್ರಿಸ್ತಪೂರ್ವ 3 ಸಾವಿರ ವರ್ಷಗಳ ಹಿಂದಿನ ಕಾಲ ಘಟ್ಟದ್ದೆಂದು ಹೇಳಲಾದ ಹರ​‍್ಪ-ಮೊಹೆಂಜೋದಾರೋ ಸಂಸ್ಕೃತಿಯಿಂದ ಮೊದಲ್ಗೊಂಡು ಈ ತನಕ ನಡೆದ ವೀರಶೈವ-ಲಿಂಗಾಯತದ ಎಲ್ಲಾ ಸಿದ್ಧಾಂತ ಪ್ರತಿಪಾದನೆಯಲ್ಲಿ ಇಷ್ಟಲಿಂಗಾರ್ಚನೆ ಎದ್ದುಕಾಣುತ್ತದೆ. ಅತ್ಯಂತ ಸನಾತನವಾದ ಇಷ್ಟಲಿಂಗಾರ್ಚನೆ ಕೇಂದ್ರೀತ ವೀರಶೈವವು ವಿಶ್ವಧರ್ಮವಾಗಿ ಪ್ರಸ್ತುತ ಗಮನಸೆಳೆದಿದೆ ಎಂದು ಕಾಶಿ ಜ್ಞಾನ ಪೀಠದ ಹಿರಿಯ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹೇಳಿದರು.  

ಅವರು ಶರನ್ನವರಾತ್ರಿಯ ಪರ್ವಕಾಲದಲ್ಲಿ ಗುರುವಾರ ಕಾಶಿ ಜ್ಞಾನ ಪೀಠಕ್ಕೆ ಆಗಮಿಸಿದ್ದ ರಷ್ಯಾದ ರಾಜಧಾನಿ ಮಾಸ್ಕೋ ನಗರದಿಂದ 1200 ಕಿ.ಮೀ. ದೂರದಲ್ಲಿರುವ ಸಮರಾ ಗ್ರಾಮ ನಿವಾಸಿಯಾದ ರಾಸಾಯನಿಕ ಇಂಜಿನಿಯರ್ ಪಾವೆಲ್ ಅವರಿಗೆ ಇಷ್ಟಲಿಂಗ ದೀಕ್ಷೆ ನೀಡಿ ‘ವಿಶ್ವೇಶ್ವರ’ ನಾಮಕರಣದೊಂದಿಗೆ ಶಿವಯೋಗ ಸಾಧನೆಯ ಪರಿಣಾಮಗಳ ಕುರಿತು ಆಶೀರ್ವಚನ ನೀಡಿದರು.  

ಶಿವಾಗಮಗಳು, ಶ್ರೀಸಿದ್ಧಾಂತ ಶಿಖಾಮಣಿ ಹಾಗೂ ವಚನವಾಙ್ಮಯದಲ್ಲಿ ಇಷ್ಟಲಿಂಗಾರ್ಚನೆಯ ಪ್ರತಿಪಾದನೆ ದಟ್ಟವಾಗಿದ್ದು, ವ್ಯಾಸ ಮಹರ್ಷಿಗಳು ಸ್ಕಂದಪುರಾಣದ ‘ಶಂಕರಸಂಹಿತೆ’ಯಲ್ಲಿಯೂ ಇಷ್ಟಲಿಂಗ ಕುರಿತು ಪ್ರತಿಪಾದಿಸಿದ್ದಾರೆ. ಬಸವಪೂರ್ವದಲ್ಲಿದ್ದ ದೇವರದಾಸಿಮಾರ್ಯರು ಮತ್ತು ಕೊಂಡುಗುಳಿ ಕೇಶಿರಾಜರು ಇಷ್ಟಲಿಂಗ ದಾರಿಗಳಾಗಿದ್ದರು. ಅನುಭವ ಮಂಟಪಕ್ಕೆ ಬರುವ ಮೊದಲೇ ಅಕ್ಕಮಹಾದೇವಿಗೆ ಇಷ್ಟಲಿಂಗ ಧಾರಣೆಯಾಗಿತ್ತು. ಅಂಗದ ಮೇಲೆ ಇಷ್ಟಲಿಂಗ ಧರಿಸಿ ನಿತ್ಯವೂ ಇಷ್ಟಲಿಂಗಾರ್ಚನೆಯ ಅನುಸಂಧಾನದಲ್ಲಿ ಬಯಲ ಬೆಳಗನ್ನು ಕಾಣುವುದೇ ವೀರಶೈವ-ಲಿಂಗಾಯತರೆಲ್ಲರ ಗುರಿಯಾಗಬೇಕು ಎಂದರು.  

ರಶಿಯಾದಲ್ಲಿ ಶಿವಯೋಗ : ಕಳೆದ 23 ವರ್ಷಗಳಿಂದ ಸಾವಿರಾರು ರಶಿಯಾ ದೇಶವಾಸಿಗಳು ತಮ್ಮಿಂದ ಇಷ್ಟಲಿಂಗ ದೀಕ್ಷೆ ಪಡೆದಿದ್ದು, ನಿತ್ಯವೂ ವಿಧಿವತ್ತಾಗಿ ಇಷ್ಟಲಿಂಗಾರ್ಚನೆಯ ಜೊತೆಗೆ ಶಿವಯೋಗ ಸಾಧನೆಯ ಧ್ಯಾನತನ್ಮಯತೆಯನ್ನು ಸಾಧಿಸಿದ್ದಾರೆ. ಈ ನಿಟ್ಟಿನಲ್ಲಿ ವೀರಶೈವ ಧರ್ಮವನ್ನು ಒಂದು ಪ್ರಾಂತ-ಪ್ರದೇಶ, ರಾಜ್ಯ-ರಾಷ್ಟ್ರಕ್ಕೆ ಸೀಮಿತಗೊಳಿಸಬಾರದು. ಪ್ರಸ್ತುತ ವೀರಶೈವವು ವಿಶ್ವಧರ್ಮವಾಗಿದೆ ಎಂದೂ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಪ್ರತಿಪಾದಿಸಿದರು.  

ಉತ್ತರ​‍್ರದೇಶದ ಮಾಜಿ ಸಚಿವ ನೀಲಕಂಠ ತಿವಾರಿ, ಸಂಸ್ಕೃತ ವಿದ್ವಾಂಸರುಗಳಾದ ಕಮಲೇಶ್ ಝಾ, ವಿನೋದರಾವ್ ಪಾಠಕ್, ಡಾ. ಸಿದ್ಧಿಧಾತ್ರಿ ಭಾರದ್ವಾಜ್ ಸೇರಿದಂತೆ ಹಲವು ಗಣ್ಯರು ಇದ್ದರು. ಎಂದಿನಂತೆ ಕಾಶಿ ಪೀಠದಲ್ಲಿಯ ಶ್ರೀಚಕ್ರಸಹಿತ ಆದಿಶಕ್ತಿ ಮಾತೆಗೆ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು.