ಇರಾಕ್: ಸರ್ಕಾರಿ ವಿರೋಧಿ ಪ್ರತಿಭಟನೆಗೆ ಬಲಿಯಾದವರ ಸಂಖ್ಯೆ 93ಕ್ಕೇರಿಕೆ, 4000 ಜನರಿಗೆ ಗಾಯ

ಬಾಗ್ದಾದ್, ಅ. 5:   ತೈಲ ಸಮೃದ್ಧ ದೇಶ ಇರಾಕ್ನಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದ ಪರಿಣಾಮ  ಕಳೆದ ನಾಲ್ಕು ದಿನಗಳಲ್ಲಿ ಸಾವನ್ನಪ್ಪಿದವರ ಸಂಖ್ಯೆ 93ಕ್ಕೇರಿದೆ. ಸುಮಾರು 4,000 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

ಬಾಗ್ದಾದ್ ಮತ್ತು ಕೆಲವು ಪ್ರಾಂತ್ಯಗಳಲ್ಲಿ ನಾಲ್ಕು ದಿನಗಳ ಕಾಲ ನಡೆದ ಪ್ರತಿಭಟನೆಯ ವೇಳೆ ಸಾವನ್ನಪ್ಪಿದವರ ಸಂಖ್ಯೆ ಭದ್ರತಾ ಸದಸ್ಯರು ಸೇರಿದಂತೆ 93ಕ್ಕೆರಿದೆ ಎಂದು ಇರಾಕಿನ ಸ್ವತಂತ್ರ ಮಾನವ ಹಕ್ಕುಗಳ ಆಯೋಗದ (ಐಎಚ್ಸಿಎಚ್ಆರ್) ಸದಸ್ಯ ಅಲಿ ಅಲ್-ಬಯತಿ ಹೇಳಿದ್ದಾರೆ.  

ಹಿಂಸಾತ್ಮಕ ಪ್ರತಿಭಟನೆಯಲ್ಲಿ ಇದುವರೆಗೆ 3,978 ಮಂದಿ ಗಾಯಗೊಂಡಿದ್ದು, ರಾಜಧಾನಿ ಮತ್ತು ಇತರ ನಗರದಲ್ಲಿ ಪರಿಸ್ಥಿತಿ ಇನ್ನೂ ತಹಬದಿಗೆ ಬಂದಿಲ್ಲ ಎಂದು ಅವರು ತಿಳಿಸಿದ್ದಾರೆ. 

ಐಎಚ್ಸಿಎಚ್ಆರ್ ಸ್ವತಂತ್ರ ಆಯೋಗವಾಗಿದ್ದು, ಇರಾಕಿ ಸಂಸತ್ತಿನೊಂದಿಗೆ ಸಂಪರ್ಕ ಹೊಂದಿದೆ. 

ನೂರಾರು ಇರಾಕಿ ಪ್ರಜೆಗಳು ಬಾಗ್ದಾದ್ ಮತ್ತು ಇತರ ಇರಾಕಿ ಪ್ರಾಂತ್ಯಗಳಲ್ಲಿ ಬೀದಿಗಿಳಿದು ಉತ್ತಮ ಜೀವನ, ಉದ್ಯೋಗಾವಕಾಶಗಳು ಮತ್ತು ಸರ್ಕಾರದಿಂದ ಮೂಲಭೂತ ಸೇವೆಗಳನ್ನು ಕೋರಿದ್ದಾರೆ. 

ದೇಶದಲ್ಲಿ ಭಷ್ಟ್ರಾಚಾರ, ನಿರುದ್ಯೋಗ ಸಮಸ್ಯೆ ನಿವಾರಿಸಬೇಕು, ಯುವಕರಿಗೆ ಉದ್ಯೋಗ ನೀಡಬೇಕು, ಸಾರ್ವಜನಿಕರಿಗೆ ಸಾರ್ವಜನಿಕ ಸೇವೆಯನ್ನು ಒದಗಿಸಿಕೊಡಬೇಕು ಎಂದು ಒತ್ತಾಯಿಸಿ ದೇಶದ ಮೂಲೆ ಮೂಲೆಗಳಲ್ಲಿ ಮಂಗಳವಾರದಿಂದ ಜನರು ಬೀದಿಗಿಳಿದು ಪ್ರತಿಭಟನೆ ಆರಂಭಿಸಿದ್ದಾರೆ. 

ಪ್ರತಿಭಟನಕಾರರು ಮತ್ತು ಭದ್ರತಾ ಸಿಬ್ಬಂದಿ ನಡುವೆ ಘರ್ಷಣೆ ಸಂಭವಿಸಿದ್ದು, ಭದ್ರತಾ ಪಡೆ ಅಶ್ರುವಾಯು, ಜಲಫಿರಂಗಿ ಬಳಸಿ ಪ್ರತಿಭಟನಕಾರರನ್ನು ಚದುರಿಸಲು ಪ್ರಯತ್ನಿಸುತ್ತಿದೆ.