ಅಂತಾರಾಷ್ಟ್ರೀಯ ಯೋಗ ದಿನಾಚರಣೆ

ಅಂತಾರಾಷ್ಟ್ರೀಯ ಯೋಗ ದಿನಾಚರಣೆ International Yoga Day

ವಿಜಯಪುರ  27: ಮಾನವನ ಸರ್ವತೋಮುಖ ಅಭಿವೃದ್ಧಿಯನ್ನು ಮುಖ್ಯ ಗುರಿ ಹೊಂದಿರುವ ಯೋಗ ವಿಶ್ವಾದ್ಯಂತ ಹೆಚ್ಚು ಮನ್ನಣೆ ಪಡೆದಿದೆ ಎಂದು ಬಿ.ಎಲ್‌.ಡಿ.ಇ ಡೀಮ್ಡ್‌ ವಿಶ್ವವಿದ್ಯಾಲಯ ಸಂಶೋಧನ ಕೇಂದ್ರದ ಸಂಯೋಜಕಿ ಡಾ. ನಿರ್ಮಲಾ ಕೆ. ಜಿ ಹೇಳಿದ್ದಾರೆ.ಇಂದು ಸೋಮವಾರ ನಗರದ ಬಿ.ಎಲ್‌.ಡಿ.ಇ ಸಂಸ್ಥೆಯ ಎ.ವಿ.ಎಸ್ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ವೈದ್ಯಕೀಯ ಕೇಂದ್ರದಲ್ಲಿ ಕೇಂದ್ರ ಸರಕಾರದ ಆಯುಷ್ ಸಚಿವಾಲಯದ ಅಡಿಯಲ್ಲಿ ಕಾರ್ಯ ನಿರ್ವಹಿಸುವ ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆಯ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ- 2026ರ ಅಂಗವಾಗಿ ಯೋಗ ಮಹೋತ್ಸವ--2026, 55 ದಿನಗಳ ಕೌಂಟ್‌ಡೌನ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಇಂದು ನಮಗೆ ಸಾಕಷ್ಟು ವೈದ್ಯಕೀಯ ಚಿಕಿತ್ಸಾ ಸೌಲಭ್ಯಗಳಿದ್ದರೂ ಯೋಗವು ನಾನಾ ರೋಗಗಳನ್ನು ತಡೆಗಟ್ಟುವಲ್ಲಿ ಮಹತ್ತರ ಪಾತ್ರ ವಹಿಸುತ್ತಿದೆ. 

ಈ ಕಾರ್ಯಕ್ರಮ ಕೇವಲ ಒಂದು ದಿನಕ್ಕೆ ಸೀಮಿತವಾಗಬಾದು.  ಪ್ರತಿಯೋಬ್ಬರೂ ಪ್ರತಿದಿನ ಯೋಗ ಮಾಡುವ ಮೂಲಕ ಆರೋಗ್ಯ ವೃದ್ಧಿಸಿಕೊಂಡು ನಿರೋಗಿಯಾಗಿ ಸ್ವಸ್ಥ ಸಮಾಜ  ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಅವರು ಹೇಳಿದರು.ಈ ಸಂದರ್ಭದಲ್ಲಿ ಜ್ಞಾನಯೋಗಾಶ್ರಮದ ಶ್ರೀ ಬಸವರಾಜೀಯ ಮಹಾಸ್ವಾಮಿಗಳು, ಕಾಲೇಜಿನ ಪ್ರಾಚಾರ್ಯ ಡಾ. ಅಶೋಕ ಪಾಟೀಲ, ಆಸ್ಪತ್ರೆಯ  ಆಡಳಿತಾಧಿಕಾರಿ ಡಾ. ಸಂಜಯ ಕಡ್ಲಿಮಟ್ಟಿ,  ನ್ಯಾಯವಾದಿ ಡಾ. ರಂಜಿತಾ ಕೆ. ಆರ್‌. ಡೀಮ್ಡ್‌ ವಿವಿಯ ಫಿಜಿಯಾಲಜಿ ವಿಭಾಗದ ಡಾ. ಜ್ಯೋತಿ ಖೋದ್ನಾಪುರ, ಕಾರ್ಯಕ್ರಮದ ನೋಡಲ್ ಅಧಿಕಾರಿ ಡಾ. ಸತೀಶ ಎಸ್‌. ಪಾಟೀಲ, ಪ್ರಾಧ್ಯಾಪಕರಾದ ಡಾ. ಡಿ. ಎನ್‌. ಧರಿ, ಸಹ ಪ್ರಾಧ್ಯಾಪಕಿ ಡಾ.ಭುವನೇಶ್ವರಿ ಪಾಟೀಲ, ಯೋಗ ತರಬೇತುದಾರ ಚೇತನ ವಿಶ್ವಕಮ್ಮಾರ ಮುಂತಾದವರು ಉಪಸ್ಥಿತರಿದ್ದರು.

ಬೆಳಗಾವಿಯ ಯೋಗ ತರಬೇತುದಾರ ಅಮೋಲ ಜೈನ್ ಅವರುಅಗ್ನಿಹೋತ್ರ ಹೋಮದೊಂದಿಗೆ ಯೋಗ ಪ್ರಾರಂಭವಾಯಿತು.  ಕಾರ್ಯಕ್ರಮದ ಅಂಗವಾಗಿ ಯೋಗ ಕೇಂದ್ರದ ಸದಸ್ಯರು ಹಾಗೂ ಬಿ.ಎಲ್‌.ಡಿ.ಇ ಎ.ವಿ.ಎಸ್ ಆಯುರ್ವೇದ ಮಹಾವಿದ್ಯಾಲಯದ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಂದ ಎರಡು ನೃತ್ಯ ಯೋಗ ಪ್ರದರ್ಶನಗಳು ನಡೆದವು.ಕಾಮನ್ ಯೋಗ ಪ್ರೋಟೋಕಾಲ್ ಅಧಿವೇಶನವನ್ನು ಪತಂಜಲಿ ಯೋಗ ಸಮಿತಿಯ ಯೋಗ ಶಿಕ್ಷಕಿ ಸುನಿತಾ ಬಿರಾದಾರ ಹಾಗೂ ಬಿ.ಎಲ್‌.ಡಿ.ಇ ಎ.ವಿ.ಎಸ್ ಆಯುರ್ವೇದ ಮಹಾವಿದ್ಯಾಲಯದ ಸ್ವಸ್ಥವೃತ್ತ ಮತ್ತು ಯೋಗ ವಿಭಾಗದ ಯೋಗ ತರಬೇತುದಾರ ಚೇತನ ವಿಶ್ವಕಮ್ಮಾರ ಅವರು ನಡೆಸಿಕೊಟ್ಟರು.ಈ ಕಾರ್ಯಕ್ರಮದಲ್ಲಿ ವಿವಿಧ ಯೋಗ ಕೇಂದ್ರಗಳ ಸಂಚಾಲಕರು ಹಾಗೂ ಸದಸ್ಯರು, ವಿಜಯಪುರ ಸೈಕ್ಲಿಂಗ್ ತಂಡ, ವೃಕ್ಷೋತ್ತ್ಥಾನ ಹೆರಿಟೇಜ್ ತಂಡ, ಆಶಾ ಕಾರ್ಯಕರ್ತೆಯರು, ಆಯುಷ್ ಸಿಬ್ಬಂದಿ, ಎಎಫ್‌ಐ ಸದಸ್ಯರು,  ವಿಜಯಪುರ ನಗರದ ಸುತ್ತಮುತ್ತಲಿನ ಸಾರ್ವಜನಿಕರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಸೇರಿದಂತೆ 800 ಕ್ಕೂ ಹೆಚ್ಚು ಯೋಗಾಸಕ್ತರು ಉತ್ಸಾಹದಿಂದ ಭಾಗವಹಿಸಿದರು.