ಅಂತರಾಷ್ಟ್ರೀಯ ಹಿಂದೂಸ್ತಾನಿ ಗಾಯಕ: ಪಂ.ಡಾ.ಮೃತ್ಯುಂಜಯ ಶೆಟ್ಟರ

ಹಿಂದೂಸ್ತಾನಿ ಸಂಗೀತಕ್ಕೆ ಕರ್ನಾಟಕದ ಕೊಡುಗೆ ಏನೆಂದು ಕೇಳಿದರೆ ಶಿವಶರಣರ ವಚನಗಳು ಎಂದು ಧಾರಾಳವಾಗಿ ಹೇಳಬಹುದು. ಸಂಗೀತ ಕಛೇರಿಗಳಲ್ಲಿ ವಚನಗಳು ಹಾಸುಹೊಕ್ಕಾಗಿ ಸೇರಿಕೊಂಡಿವೆ. ವಚನಗಳ ಹಾಡುಗಾರಿಕೆ ಎಂದಾಕ್ಷಣ ನಮಗೆ ನೆನಪಾಗುವುದು ಪಂ.ಮಲ್ಲಿಕಾರ್ಜುನ ಮನ್ಸೂರ್, ಪಂ.ಬಸವರಾಜ ರಾಜಗುರು. ಪಂ.ಪುಟ್ಟರಾಜು ಗವಾಯಿ, ಪಂ.ವೆಂಕಟೇಶ ಕುಮಾರ ಸೇರಿದಂತೆ ಹಿಂದೂಸ್ತಾನಿ ಸಂಗೀತ ಪರಂಪರೆಯ ಗಾಯಕರ ಪ್ರಸ್ತುತಿಗಳು. ಹಾಗೆಯೇ ವಿದ್ವತ್ಪೂರ್ಣ ಗಾಯನ ಪ್ರಸ್ತುತಪಡಿಸುವ ಸಂಗೀತ ಸಾಧಕ ಧಾರವಾಡದ ಡಾ.ಮೃತ್ಯುಂಜಯ ಶೆಟ್ಟರ ಅವರು ಶಿವಶರಣರ ವಚನಗಳ ಹಾಡುಗಾರಿಕೆಗೆ ಪ್ರಸಿದ್ಧರು.  

ಡಾ.ಮೃತ್ಯುಂಜಯ ಶೆಟ್ಟರ ಅವರು 1964ರ ಎಪ್ರಿಲ್ 21ರಂದು ಧಾರವಾಡದಲ್ಲಿ ಜನಿಸಿದರು. ಸುಸಂಸ್ಕೃತ ಮನೆತನದ ಗುರುಬಸಪ್ಪ ಹಾಗೂ ವಿಶಾಲಾಕ್ಷಿ ದಂಪತಿಗಳ ಮಗ ಮೃತ್ಯುಂಜಯ. ಕನ್ನಡದ ಕಣ್ಮಣಿ, ಸಂಶೋಧಕ, ಸಾಹಿತಿ, ಕೆ.ಎಲ್‌.ಇ ಸಂಸ್ಥಾಪಕರಲ್ಲೊಬ್ಬರಾದ ಪ್ರೊ.ಶಿ.ಶಿ.ಬಸವನಾಳ ಅವರ ಮೊಮ್ಮಗ ಎನ್ನುವುದು ವಿಶೇಷ. ಕಲಾರಾಧಕ ಮನೆತನ. ತಂದೆ-ತಾಯಿ ಸಂಗೀತ ಪ್ರೇಮಿಗಳು. ಪಂ.ಬಸವರಾಜ ಮನಸೂರರು ಬಸವನಾಳರ ಮನೆಗೆ ಆಗಾಗ್ಗೆ ಭೇಟಿ ನೀಡುತ್ತಿದ್ದರು. ಹೀಗಾಗಿ ಬಾಲಕ ಮೃತ್ಯುಂಜಯನ ಮೇಲೆ ಸಹಜವಾಗಿಯೇ ಸಂಗೀತದ ಗಾಢವಾದ ಪರಿಣಾಮ ಬೀರಿತು. ಅವರ ತಾಯಿ ವಿಶಾಲಾಕ್ಷಿಯವರು ಮೃತ್ಯುಂಜಯ ಚಿಕ್ಕವರಿದ್ದಾಗಲೇ ವಚನ, ಕಾವ್ಯ. ನಾಟಕ, ಕಾದಂಬರಿ ಮುಂತಾದ ಸಾಹಿತ್ಯದ ಮೇರು ಕೃತಿಗಳನ್ನು ನೀಡಿ ಅಧ್ಯಯನದಲ್ಲಿ ತೊಡಗಿಸಿದ್ದರು.  

ಮೃತ್ಯುಂಜಯರವರು ಧಾರವಾಡದ ಸಾರಸ್ವತಪುರದ ಮಾಡರ್ನ ಸ್ಕೂಲಿನಲ್ಲಿ ಪ್ರಾಥಮಿಕ, ಕೆ.ಇ ಬೋರ್ಡ್‌ನಲ್ಲಿ ಮಾಧ್ಯಮಿಕ ಶಿಕ್ಷಣವನ್ನು ಪಡೆದರು. ಕರ್ನಾಟಕ ಕಾಲೇಜಿನಿಂದ ಕಲಾ ವಿಭಾಗದಲ್ಲಿ ಪಿಯುಸಿ ಪೂರೈಸಿದ ನಂತರ ಬಿ.ಮ್ಯೂಸಿಕ್ ಅಧ್ಯಯನದಲ್ಲಿ ತೊಡಗಿದರು. 1985ರಲ್ಲಿ ಅವರು ಪ್ರಥಮ ರಾ​‍್ಯಂಕ್‌ದೊಂದಿಗೆ ಅಂಬಾಬಾಯಿ ಹಾನಗಲ್ ಸುವರ್ಣಪದಕವನ್ನು ಗಳಿಸಿದರು. ನಂತರ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಮ್ಯೂಸಿಕ್‌ನಲ್ಲಿ ಪ್ರಥಮ ರಾ​‍್ಯಂಕ್ ಜೊತೆಗೆ ಶಾಂತಾದೇವಿ ಮಾಳವಾಡರವರ ಚಿನ್ನದ ಪದಕ ಪಡೆದ ಮೃತ್ಯುಂಜಯರವರು ಸಂಗೀತದಲ್ಲಿ ಆಳವಾದ ವ್ಯಾಸಂಗ ಮಾಡಿ, ಡಾ.ಶಶಿಕಲಾ ಚವಡಿ ಅವರ ಮಾರ್ಗದರ್ಶನದಲ್ಲಿ ‘ಠುಮರಿ ಗಾಯನದ ಸೌಂದರ್ಯ ಸಮೀಕ್ಷೆ’ ಪ್ರೌಢ ಪ್ರಬಂಧವನ್ನು ಮಂಡಿಸಿ 2007ರಲ್ಲಿ ಡಾಕ್ಟರೇಟ್ ಪಡೆದರು. ಡಾ.ಮೃತ್ಯುಂಜಯ ಶೆಟ್ಟರ ಅವರು 1991ರಲ್ಲಿ ಗದುಗಿನ ಡಾ.ಪಂ.ಪುಟ್ಟರಾಜ ಗವಾಯಿಗಳು ಸ್ಥಾಪಿಸಿದ ಪಂಡಿತ ಪಂಚಾಕ್ಷರಿ ಗವಾಯಿಗಳ ಸಂಗೀತ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆಗೆ ಸೇರಿದರು. ಸದಾ ಅಧ್ಯಯನ ಶೀಲರಾದ ಅವರು ಹಲವಾರು ಭಾಷೆಗಳನ್ನು ಮಾತನಾಡುವುದರಲ್ಲಿ ನಿಸ್ಸೀಮರು. ಶುದ್ಧವಾದ ಭಾಷೆ ಹಾಗೂ ಸುಂದರ ಅಭಿವ್ಯಕ್ತಿ ಇರುವ ಡಾ.ಶೆಟ್ಟರ ಅವರು ವಿದ್ಯಾರ್ಥಿಗಳಿಗೆ ಪ್ರೀತಿಯ ಗುರುಗಳಾಗಿ, ಠುಮ್ರಿ ಪರಂಪರೆಯನ್ನು ಮುಂದುವರೆಸಿರುವರು. ಡಾ.ಮೃತ್ಯುಂಜಯರವವರು 2022ರಲ್ಲಿ ಪ್ರಾಂಶುಪಾಲರಾಗಿ ಪದೋನ್ನತಿ ಹೊಂದಿ ಅನುಪಮ ಸೇವೆ ಸಲ್ಲಿಸುತ್ತಿದ್ದು, 2024ರಲ್ಲಿ ನಿವೃತ್ತಿ ಹೊಂದಲಿದ್ದಾರೆ.  ಡಾ.ಮೃತ್ಯುಂಜಯ ಶೆಟ್ಟರ ಅವರು ಪತ್ನಿ ವಿಜಯಾ ಅವರೊಂದಿಗೆ ಧಾರವಾಡದ ವಿದ್ಯಾಗಿರಿಯ ಯಾಲಕ್ಕಿ ಶೆಟ್ಟರ ಕಾಲನಿಯ ಬಸವಶಾಂತ ನಗರದಲ್ಲಿ ನೆಲೆಸಿದ್ದಾರೆ. 

ಗಾನಯೋಗಿ ಪಂ.ಪುಟ್ಟರಾಜ ಗವಾಯಿಗಳಿಂದ ಅನುಗ್ರಹಿತರಾದ ಮೃತ್ಯುಂಜಯರವರು ವಿದ್ವಾನ್ ಎನ್‌.ಎಸ್‌.ಕುಲಕರ್ಣಿ, ಪಂಡಿತ ಹೂಗಾರ ಅವರಲ್ಲಿ ಸಂಗೀತದ ಪ್ರಾಥಮಿಕ ಶಿಕ್ಷಣ ಪಡೆದರು. ನಂತರದ ದಿನಗಳಲ್ಲಿ ಪಂ.ಮಲ್ಲಿಕಾರ್ಜುನ ಮನಸೂರ, ಪಂ.ಬಸವರಾಜ ರಾಜಗುರು, ಪಂ.ಸಂಗಮೇಶ್ವರ ಗುರವ, ಪಂ.ಪ್ರಭುದೇವ ಸರದಾರ, ಪಂ.ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ, ಪಂ.ನಾರಾಯಣರಾವ ಮುಜಮದಾರ, ಡಾ.ಎ.ಆರ್‌.ಅಠವಲೆ, ಡಾ.ಬಿ.ಡಿ. ಪಾಠಕ ಸೇರಿದಂತೆ ಹಲವು ಪ್ರಖ್ಯಾತರ ಮಾರ್ಗದರ್ಶನ ಪಡೆದುಕೊಂಡು ತಮ್ಮದೇ ಗಾಯನ ಶೈಲಿ ರೂಪಿಸಿಕೊಂಡರು. ಮೃತ್ಯುಂಜಯರವರು ಇನ್ನೂ 6ನೇ ವಯಸ್ಸಿನಲ್ಲಿದ್ದಾಗಲೇ ಮಾಡರ್ನ್‌ ಶಾಲೆಯ ವಾರ್ಷಿಕೋತ್ಸವದಲ್ಲಿ “ಉಳ್ಳವರು ಶಿವಾಲಯ ಮಾಡುವರಯ್ಯ” ಎಂಬ ಬಸವಣ್ಣನವರ ವಚನವನ್ನು ಹಾಡಿ ಸಭಿಕರ ಮನಸೂರೆಗೊಂಡಿದ್ದರು. ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಖಯಾಲ, ಧ್ರುಪದ, ಠುಮ್ರಿ, ಟಪ್ಪಾ, ಹೋರಿ ದಾದ್ರಾ, ಚೈತಿ, ಹೋರಿಧಮಾರ, ಚತುರಂಗ, ಸಾದ್ರಾ, ಭಜನೆ, ಝಾಲಾ, ನಾಟ್ಯ ಸಂಗೀತ, ರಂಗಗೀತೆ, ಭಕ್ತಿ ಸಂಗೀತ ಭಾವಗೀತೆ, ಶರಣರ ವಚನಗಳು, ದಾಸರ ಪದಗಳು, ತತ್ವಪದಗಳು, ಲೋಕಗೀತ ಮುಂತಾದವುಗಳನ್ನು ಹಾಡುವುದರಲ್ಲೂ ಸಿದ್ಧಹಸ್ತರು. ಅಲ್ಲದೇ ಶಾಸ್ತ್ರೀಯ ಸಂಗೀತದಲ್ಲಿ ಶೈಕ್ಷಣಿಕ-ಪ್ರಾಯೋಗಿಕ ರಂಗಗಳಲ್ಲಿನ ಸಾಧನೆ ಗಮನಾರ್ಹವಾದುದು. ಅವರು ಗಾಯನದೊಂದಿಗೆ ಲೇಖನ, ಅಭಿನಯ, ಚಿತ್ರಕಲೆಗಳಲ್ಲೂ ಸಿದ್ಧಹಸ್ತರು.  

ಕೇಂದ್ರ ಸಂಗೀತ ನಾಟಕ ಅಕಾಡೆಮಿಯಿಂದ ಪುಟ್ಟರಾಜ ಗವಾಯಿಗಳು, ಸಂಗಮೇಶ್ವರ ಗುರವ, ಸೋಮನಾಥ ಮರಡೂರ, ರವಿ ಕೂಡ್ಲಗಿ ಮುಂತಾದವರ ಬಗ್ಗೆಯೂ ಸಾಕ್ಷ ಚಿತ್ರಗಳನ್ನು ಮಾಡಿದ ಕೀರ್ತಿ ಡಾ.ಮೃತ್ಯುಂಜಯ ಶೆಟ್ಟರವರದು. ಅವರು ಸಮಾಜ ಸೇವೆಗಾಗಿ ಸ್ವರ ಸಂಚಾರಿ, ವಚನ ವಿಹಾರಿ, ದಾಸದಾರಿ ಎಂಬ ವಿನೂತನ ಕಾರ್ಯಕ್ರಮಗಳನ್ನು ನಿರೂಪಿಸಿ, ನಡೆಸಿಕೊಂಡು ಬಂದಿರುವರು. ಅವರ ವರ್ಲ್ಡ್‌ ಇಂಟರ್‌ನೆಟ್ ಹಾಗೂ ಅನೇಕ ಸಿ.ಡಿ ಕ್ಯಾಸೆಟ್‌ಗಳು ಅತ್ಯಂತ ಜನಪ್ರಿಯವಾಗಿವೆ. ತಮ್ಮ ಸುಮಧುರ ಕಂಠಸಿರಿಯಿಂದ ಸುವಿಖ್ಯಾರತಾದ ಅವರು ಭಾರತ ಮತ್ತು ವಿದೇಶಗಳಲ್ಲೂ ಅಸಂಖ್ಯಾತ ಯಶಸ್ವಿ ಕಾರ್ಯಕ್ರಮಗಳನ್ನು ನೀಡುತ್ತಾ ವಿದ್ವಾಂಸರ, ಸಂಗೀತ ರಸಿಕರ, ಸಂಗೀತಾಭಿಮಾನಿಗಳ ಮನ ಮೆಚ್ಚಿಸಿ ರಂಜಿಸಿದ್ದಾರೆ. ಡಾ.ಮೃತ್ಯುಂಜಯ ಶೆಟ್ಟರ ಅವರು ಪ್ಯಾಸಾಡೋನಾ ವಾಶಿಂಗ್‌ಟನ್ ಡಿಸಿ, ಮೇರಿ ಲ್ಯಾಂಡ್, ಸ್ಯಾನ್ ಫ್ರಾನ್ಸ್‌ಸ್‌ಕೋ, ಲಾಸ್‌ಎಂಜಿಲಿಸ್, ನ್ಯೂಯಾರ್ಕ್‌, ನ್ಯೂ ಜರ್ಸಿ, ಬೋಸ್ಟೆನ್, ಬಾಲ್ಟಿಮೋರ್, ವರ್ಜಿನೀಯಾ, ಫಿಟ್ಸ್‌ಬರ್ಗ ಮುಂತಾದವಿದೇಶಗಳಲ್ಲಿ ಹಿಂದೂಸ್ತಾನಿ ಗಾಯನದ ಯಶಸ್ವಿ ಕಾರ್ಯಕ್ರಮಗಳನ್ನು ನೀಡಿ ಅಂತರಾಷ್ಟ್ರೀಯ ಪ್ರಸಿದ್ಧಿ ಪಡೆದಿದ್ದಾರೆ. ಅವರು ಕಳೆದ ನಾಲ್ಕು ದಶಕಗಳಿಂದಲೂ ಹಿಂದೂಸ್ತಾನಿ ಸಂಗೀತ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.  

ಪುಣೆ, ಮುಂಬೈ, ಕೋಲ್ಕತ್ತಾ, ಗೋವಾ, ಕೊಲ್ಹಾಪುರ, ದೆಹಲಿ, ಚೆನ್ನೈ, ಕಾಶ್ಮೀರ, ಆಗ್ರಾ ಬರೋಡಾ, ವಾರಣಾಸಿ, ಹೈದ್ರಾಬಾದ್, ಅಲಹಾಬಾದ್, ಜೋಧಪುರ, ಚಿದಂಬರಂ, ಬಿಕಾನೇರ್, ಉದಯಪುರ, ಅರುಣಾಶಚಲ ಪ್ರದೇಶ, ಬೆಂಗಳೂರ, ಮೈಸೂರ, ಬೀದರ, ಹಂಪಿ, ಹೊನ್ನಾವರ, ಕುಂದಗೋಳ, ಗದಗ, ಹುಬ್ಬಳ್ಳಿ, ಧಾರವಾಡ ಹೀಗೆ ದೇಶದ ವಿವಿಧ ಸಂಗೀತೋತ್ಸವಗಳಲ್ಲಿ ಡಾ. ಮೃತ್ಯುಂಜಯರವರು ತಮ್ಮ ಗಾನಲಹರಿ ಪ್ರಸ್ತುತಪಡಿಸಿದ್ದಾರೆ. ಅವರು ಕಳೆದ ನಾಲ್ಕು ದಶಕಗಳಿಂದಲೂ ಪ್ರತಿ ಶಿವರಾತ್ರಿಯಂದು ಅಥಣಿ ಶಿವಯೋಗಿಗಳ ಮಠದಲ್ಲಿ ಸಂಗೀತ ಸೇವೆಯನ್ನು ನೀಡುತ್ತ ಮುನ್ನಡೆದಿರುವದು ಶ್ಲಾಘನೀಯವಾದುದು. ಹಾಗೆಯೇ ತಾನಸೇನ ನಾಟಕದಲ್ಲಿ ತಾನಸೇನ ಪಾತ್ರ ಮತ್ತು ಅಂಜಿ ನಾಟಕಕ್ಕೆ ಸಂಗೀತ ನಿರ್ದೇಶಕರಾಗಿಯೂ ತಮ್ಮ ಅನುಪಮ ಪ್ರತಿಭೆಯನ್ನು ಮೆರೆದಿದ್ದಾರೆ. ಅವರು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಕೋಲ್ಕತ್ತಾದ ಇಂಡಿಯನ್ ಮ್ಯೂಸಿಕ್ ಕಾಂಗ್ರೇಸ್, ಡಾ.ಗಂಗೂಬಾಯಿ ಹಾನಗಲ್ ಅಂತರಾಷ್ಟ್ರೀಯ ಗುರುಕುಲ, ಅಭಿನವ ಭಾರತಿ, ನಿನಾದ, ಸ್ವರಭಾರತಿ, ಸ್ವರ ಸುಗಂಧ, ರಾಗ ರಂಗಗಳ ಸದಸ್ಯರಾಗಿ, ಭಾರತೀಯ ಸಂಗೀತ ಸೇವಾಟ್ರಸ್ಟ್‌ ಹಾಗೂ ಕಲಾವಿಹಾರಿ ಸಂಸ್ಥೆಗಳ ನಿರ್ದೇಶಕರಾಗಿ ಸೇವೆಯನ್ನು ಸಲ್ಲಿಸಿರುವರು.  

ಶರಣ ವಿಜಯ ರಾಷ್ಟ್ರೀಯ ಪುರಸ್ಕಾರ, ಸಂಗೀತ ಸಾಧಕ ಪ್ರಶಶ್ತಿ, ಶ್ರೀ ಪಂಚಾಕ್ಷರಿ ಕೃಪಾಭೂಷಣ ಪ್ರಶಸ್ತಿ, ವರ್ಷದ ಶ್ರೇಷ್ಠ ವ್ಯಕ್ತಿ ಪ್ರಶಸ್ತಿ, ವಚನ ಸಂಕ್ರಾಂತಿ ಪ್ರಶಸ್ತಿ, ರಮಣಶ್ರೀ ಪ್ರಶಸ್ತಿ, ಬಸವರಾಜ ಮನಸೂರ ರಾಷ್ಟ್ರೀಯ ಪ್ರಶಸ್ತಿ, ಅ.ನ.ಕೃ.ರಾಜ್ಯ ಪ್ರಶಸ್ತಿ, ತರಳಬಾಳು ಶ್ರೀಗಳ ಪ್ರಶಸ್ತಿ, ಬೋಸ್ಟನ್ ಪ್ರಶಸ್ತಿ, ಮೇರಿಲ್ಯಾಂಡ ಪ್ರಶಸ್ತಿ, ಸ್ವರಶ್ರೀ ಪ್ರಶಸ್ತಿ, ಸಂಗೀತ ರತ್ನಾಕರ ಪ್ರಶಸ್ತಿ, ಅಭಿನವ ಮಲ್ಲಿಕಾರ್ಜುನ ಮನಸೂರ ಪ್ರಶಸ್ತಿ, ಗಾನಗಂಧರ್ವ ಪ್ರಶಸ್ತಿ, ಸ್ವರ ತರಂಗ ಪ್ರಶಸ್ತಿ, ಗಾನಕೋಗಿಲೆ ಹೀಗೆ ಅನೇಕ ಪ್ರಶಸ್ತಿ-ಪುರಸ್ಕಾರಗಳು ಅವರನ್ನರಸಿಕೊಂಡು ಬಂದಿವೆ.  

ಡಾ.ಮೃತ್ಯುಂಜಯ ಶೆಟ್ಟರ ಅವರು ಒಬ್ಬ ಉತ್ತಮ ವಾಗ್ಮಿಗಳು, ಉದಾತ್ತ ಚಿಂತಕರು. ಸರಳತೆ, ಸಹಜತೆ, ಸಜ್ಜನಿಕೆ, ಸಾತ್ವಿಕತೆ, ಅನುಭಾವಿಕತೆ ಅವರ ವ್ಯಕ್ತಿತ್ವದ ಬಹುಮುಖ್ಯ ಲಕ್ಷಣಗಳು. ಒಂದು ಮಾತಿನಲ್ಲಿ ಹೇಳುವುದಾದರೆ-ಅವರ ಬದುಕು ಮಾನವೀಯ ಮೌಲ್ಯಗಳಿಗೆ ಬರೆದ ಒಂದು ವ್ಯಾಖ್ಯಾನ. ಏಕೆಂದರೆ ಶೆಟ್ಟರವರ ಮೃದುಸ್ವಭಾವ ಸುತ್ತಲಿನ ಪರಿಸರಕ್ಕೆಲ್ಲ ಅಚ್ಚುಮೆಚ್ಚು. ಅವರು ಯಾರ ಬಗೆಗೂ ತಿರಸ್ಕಾರ ಭಾವ ತಾಳುವುದಿಲ್ಲ. “ಕೆಡೆ ನಡೆಯದೆ, ಕೆಡೆ ನುಡಿಯದೆ, ಅನ್ಯರ ಪ್ರತಿಪಾದಿಸದಿದ್ದಡೆ ಏನ ಮಾಡನಯ್ಯಾ ಲಿಂಗವು ಕೂಡಲಸಂಗಮದೇವ” ಎಂಬಂತೆ ಜೀವನದಲ್ಲಿ ಅಳವಡಿಸಿಕೊಂಡಿರುವ ಸಾಧಕ ಜೀವಿಯಾಗಿದ್ದಾರೆ. ಶೆಟ್ಟರವರ ವಿದ್ವತ್ತು ಗಳಿಸಿದ ಜ್ಞಾನಸಂಪತ್ತು ದೊಡ್ಡದು. ಅವರ ಸಂಗೀತ ದಾಹವು ವಿಸ್ತಾರವಾದುದು. ಡಾ.ಮೃತ್ಯುಂಜಯ ಮೃದು ಸ್ವಭಾವದ ಗಂಭೀರ ವ್ಯಕ್ತಿತ್ವ ಹೊಂದಿದ ಸಜ್ಜನ ಮೂರ್ತಿಗಳು. ಸದಾ ಸ್ನೇಹ, ಸಾಹಿತ್ಯ, ಸಂಗೀತ, ಪ್ರೀತಿ, ಸಾತ್ವಿಕ ಮನೋಧರ್ಮದ ಅಪರೂಪದ ಗಾಯಕ ಡಾ.ಮೃತ್ಯುಂಜಯ ಶೆಟ್ಟರವರು.  

ಸುರೇಶ ಗುದಗನವರ

ಧಾರವಾಡ 

- * * * -