೪ರಂದು ಅಂತಾರಾಜ್ಯ ಭಜನ್ ಸಮ್ರಾಟ ಸ್ಪರ್ಧೆ

೪ರಂದು ಅಂತಾರಾಜ್ಯ ಭಜನ್ ಸಮ್ರಾಟ ಸ್ಪರ್ಧೆ Inter-state 'Bhajan Samrat' competition on the 4th

ಹತ್ತರಗಿ ೨೭: ಗ್ರಾಮದ ಹರಿಕಾಕಾ ಗೋಸಾವಿ ಭಾಗವತ ಮಠದಲ್ಲಿ ಗೋಕುಳ ಅಷ್ಟಮಿ ನಿಮಿತ್ತ ಸೆ.೪ರಂದು ಬೆಳಗ್ಗೆ ೧೧ ಗಂಟೆಗೆ ಅಂತಾರಾಜ್ಯ ಭಜನ್ ಸಮ್ರಾಟ ಸ್ಪರ್ಧೆ ಆಯೋಜಿಸಲಾಗಿದೆ. ಈ ಅಂತಾ.ರಾಜ್ಯ ಭವ್ಯ ಸಂಗೀತ ಭಜನಾ ಸ್ಪರ್ಧೆಯಲ್ಲಿ ಭಜನಾ ಮಂಡಳಿ ತಂಡಗಳು ಭಾಗವಹಿಸಬೇಕು ಎಂದು ಪೀಠಾಧೀಶ ಡಾ. ಆನಂದ ಗೋಸಾವಿ ಮಹಾರಾಜ್ ಹೇಳಿದರು.

ಶ್ರೀಕೃಷ್ಣ ಜಯಂತಿ ಉತ್ಸವ ನಿಮಿತ್ತ ಸೆ.೪ರಂದು ರಾತ್ರಿ ೧೦ ಗಂಟೆಗೆ ಸೌ. ಸ್ವರದಾ ಪಟವರ್ಧನ್ ಹರಿದಾಸ್ (ಸಾಂಗ್ಲಿ) ಅವರಿಂದ ಶ್ರೀಕೃಷ್ಣ ಜನ್ಮೋತ್ಸವ ಹಾಗೂ ನಾರದೀಯ ಕೀರ್ತನೆ ನಡೆಯಲಿದೆ. ಸೆ.೫ರಂದು ಪಾರಣೆ, ಪ್ರವಚನ ಹಾಗೂ ಭಜನೆಗಳೊಂದಿಗೆ ಸಂಜೆ ೬ಗಂಟೆಗೆ ಪ್ರಸಿದ್ಧ ಗಾಯಕಿ ಮಂಜುಷಾ ಕುಲಕರ್ಣಿ ಪಾಟೀಲ್ ಅವರ ಭಕ್ತಿ ಸಂಗೀತ ಗಾಯನ ಸೇವೆ ಸೇರಿದಂತೆ ವಿವಿಧ ಸಂಗೀತ ಕರ‍್ಯಕ್ರಮಗಳನ್ನು ಆಯೋಜಿಸಲಾಗಿದೆ. ಮಾಣ್ (ತಾಲೂಕು ಶಾಹುವಾಡಿ)ದಿಂದ ಆನಂದ ಪಾದಯಾತ್ರೆ ದಿಂಡಿ ಹತ್ತರಗಿ ಆಗಮಿಸಲಿದೆ ಎಂದರು.

ಸೆ. ೬ ರಂದು ಮಧ್ಯಾಹ್ನ ವಿವಿಧ ಆಧ್ಯಾತ್ಮಿಕ ಕರ‍್ಯಕ್ರಮಗಳು, ಗೋಪಾಳಕಲಾ ಹಾಗೂ ಮಹಾಪ್ರಸಾದ ವಿತರಣೆ ನಡೆಯಲಿದೆ. ಹತ್ತರಗಿಯ ಪುರಾತನ ಶ್ರೀ ಹರಿಕಾಕಾ ಗೋಸಾವಿ ಭಾಗವತ ಮಠದಲ್ಲಿ ಸೆ.೪,೫,೬ ರಂದು ಗೋಕುಳ ಅಷ್ಟಮಿ ಉತ್ಸವದ ನಿಮಿತ್ತ ವಿವಿಧ ಕರ‍್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಕ್ಕೆ ರೂ. ೨೧ ಸಾವಿರ ನಗದು ಬಹುಮಾನ ಹಾಗೂ ಸ್ಮರಣಿಕೆಯಿದೆ. ದ್ವಿತೀಯ ಸ್ಥಾನಕ್ಕೆ ರೂ. ೧೫ ಸಾವಿರ, ತೃತೀಯ ಸ್ಥಾನಕ್ಕೆ ರೂ. ೧೦ ಸಾವಿರ ಬಹುಮಾನವಿದೆ.