ರಾಯಬಾಗ 06: ವಿದ್ಯಾರ್ಥಿಗಳಲ್ಲಿರುವ ವೈಜ್ಞಾನಿಕ ಮನೋಭಾವವನ್ನು ಹೊರಹಾಕಲು ಒಂದು ಒಳ್ಳೆಯ ವೇದಿಕೆಯನ್ನು ಕೆ.ಎಲ್.ಇ. ಸಂಸ್ಥೆಯ ಮಲಗೌಡ ಪಾಟೀಲ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜು ಕಲ್ಪಿಸಿರುವುದು ಅತ್ಯಂತ ಶ್ಲಾಘನೀಯವಾಗಿದೆ ಎಂದು ಚಿಕ್ಕೋಡಿ ಡಿಡಿಪಿಐ ಕಚೇರಿಯ ವಿಷಯ ಪರೀವೀಕ್ಷಕರಾದ ಮಮತಾ ಅವರು ಹೇಳಿದರು.
ಶುಕ್ರವಾರ ಸ್ಥಳೀಯ ಕೆ.ಎಲ್.ಇ. ಸಂಸ್ಥೆಯ ಮಲಗೌಡ ಪಾಟೀಲ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಅಂತರ ಶಾಲಾಮಟ್ಟದ ವಿಜ್ಞಾನ, ವಾಣಿಜ್ಯ ಸ್ಪರ್ಧೆ ಹಾಗೂ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇಂತಹ ವೇದಿಕೆಯಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿ, ತಮ್ಮ ಬದುಕನ್ನು ಉಜ್ವಲಗೊಳಿಸಕೊಳ್ಳಬೇಕು ಹಾಗೂ ವಿದ್ಯಾರ್ಥಿಗಳು ಸತತ ಪ್ರಯತ್ನ ಪರಿಶ್ರಮದಿಂದ ಮಾತ್ರ ತಮ್ಮ ಗುರಿಯನ್ನು ಮುಟ್ಟಲು ಸಾಧ್ಯ ಎಂದು ತಿಳಿಸಿದರು.
ಅಂತರ ಶಾಲಾಮಟ್ಟದ ಸ್ಪರ್ಧೆಯಲ್ಲಿ 250 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸ್ಥಾನಿಕ ಆಡಳಿತ ಮಂಡಳಿಯ ಅಧ್ಯಕ್ಷ ಅಪ್ಪಾಸಾಹೇಬ ಕುಲಗುಡೆ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು. ಪ್ರಾಚಾರ್ಯ ಆರ್.ಕೆ.ಪಾಟೀಲ, ಸದಸ್ಯರಾದ ಎಮ್.ಎಮ್.ನಿಶಾಂದಾರ, ವಿ.ಪಿ.ಪಾಟೀಲ ಹಾಗೂ ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ ಮತ್ತು ವಿವಿಧ ಪ್ರೌಢ ಶಾಲೆಗಳ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.