ತೀವ್ರಗೊಂಡ ಸರ್ವರ್ ಸಮಸ್ಯೆ: ಅನ್ನಭಾಗ್ಯ ರೇಷನ್‌ಗಾಗಿ ಬಡವರ ಪರದಾಟ

ತೀವ್ರಗೊಂಡ ಸರ್ವರ್ ಸಮಸ್ಯೆ: ಅನ್ನಭಾಗ್ಯ ರೇಷನ್‌ಗಾಗಿ ಬಡವರ ಪರದಾಟ  Intensified server problem: Poor people struggle for Annabhagya ration

ಸವದತ್ತಿ 27: ನಗರದ ರಾಮಾಪೂರಸೈಟ್ ಹಾಗೂ ಸುತ್ತಮುತ್ತಲಿನ ಅನ್ನಭಾಗ್ಯ ಯೋಜನೆಯ ನ್ಯಾಯಬೆಲೆ ಅಂಗಡಿಗಳಲ್ಲಿ ಕಳೆದ ಕೆಲವು ದಿನಗಳಿಂದ ಸರ್ವರ್ ಸಮಸ್ಯೆ ತೀವ್ರವಾಗಿದ್ದು, ಬಡ ಜನರು ರೇಷನ್ ಪಡೆಯಲು ತಾಸುಗಟ್ಟಲೆ ಸಾಲಿನಲ್ಲಿ ನಿಂತು ಪರದಾಡುವಂತಾಗಿದೆ. 

ದಿನಗೂಲಿ ನೌಕರರು, ಮಹಿಳೆಯರು ಹಾಗೂ ವೃದ್ಧರು ತಮ್ಮ ದಿನನಿತ್ಯದ ಕೆಲಸ-ಕಾರ್ಯಗಳನ್ನು ಬದಿಗೊತ್ತಿ ಬೆಳಗ್ಗೆಯಿಂದಲೇ ರೇಷನ್ ಪಡೆಯಲು ಅಂಗಡಿಯ ಮುಂದೆ ಬಂದು ನಿಲ್ಲುತ್ತಿದ್ದಾರೆ. ಆದರೆ, ಎಲ್ಲೆಡೆ ಸರ್ವರ್ ಇಲ್ಲ, ಲಿಂಕ್ ಸಿಗುತ್ತಿಲ್ಲ ಎಂಬ ಉತ್ತರ ಅಧಿಕಾರಿಗಳ ವಲಯದಿಂದ ಕೇಳಿಬರುತ್ತಿದೆ. ಇತ್ತ ನ್ಯಾಯಬೆಲೆ ಅಂಗಡಿಯ ಮಾಲೀಕರು ಕೂಡ, ಸರ್ವರ್ ಸಿಗದೆ ನಮಗೂ ಬೇಜಾರಾಗಿದೆ, ನಮ್ಮ ಹಂತದಲ್ಲಿ ಏನೂ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.ನಾವು ದಿನದ ದುಡಿಮೆ ಬಿಟ್ಟು ರೇಷನ್ ತರಲು ಬಂದರೆ ಇಲ್ಲಿ ದಿನವೀಡೀ ಕಾಯಬೇಕಾಗಿದೆ. ಸರ್ವರ್ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸದೆ ನಮಗೆ ಅನಗತ್ಯವಾಗಿ ತೊಂದರೆ ಕೊಡಲಾಗುತ್ತಿದೆ. ತಾಸುಗಟ್ಟಲೆ ಸುಡುವ ಬಿಸಿಲಿನಲ್ಲಿ ನಿಂತು, ಕೊನೆಗೆ ರೇಷನ್ ಸಿಗದೆ ಖಾಲಿ ಕೈಯಲ್ಲಿ ಮನೆಗೆ ವಾಪಸ್ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಎಂದು ಸ್ಥಳೀಯ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.ಅನ್ನಭಾಗ್ಯ ಯೋಜನೆಯಡಿ ಬಡವರಿಗೆ ಸಕಾಲಕ್ಕೆ ಆಹಾರ ಧಾನ್ಯ ತಲುಪಿಸಬೇಕಾದ ರೇಷನ್ ಅಂಗಡಿಗಳು ತಾಂತ್ರಿಕ ದೋಷದಿಂದಾಗಿ ಜನರಿಗೆ ತೊಂದರೆ ನೀಡುತ್ತಿವೆ. ಸಂಬಂಧಪಟ್ಟ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ತಕ್ಷಣವೇ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು. 

ಅಧಿಕಾರಿಗಳು ತಕ್ಷಣವೇ ಎಚ್ಚೆತ್ತುಕೊಂಡು ಪರ್ಯಾಯ ವ್ಯವಸ್ಥೆ ಮಾಡಬೇಕು ಹಾಗೂ ರಾಮಾಪೂರಸೈಟ್ ಮತ್ತು ಸವದತ್ತಿ ರೇಷನ್ ಅಂಗಡಿಯಲ್ಲಿನ ಸರ್ವರ್ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸಿ, ಸಾರ್ವಜನಿಕರಿಗೆ ಸುಲಭವಾಗಿ ಮತ್ತು ಸಕಾಲಕ್ಕೆ ರೇಷನ್ ಸಿಗುವಂತೆ ಮಾಡಬೇಕೆಂದು ಸಾರ್ವಜನಿಕರು ತೀವ್ರವಾಗಿ ಆಗ್ರಹಿಸಿದರು.