ಹೊಸಪೇಟೆಯಲ್ಲಿ ವಿದ್ಯುತ್‌ತಂತಿಗಳಿಗೆ ಅಡ್ಡವಾಗಿ ಬೆಳೆದ ರಸ್ತೆ ಬದಿಯ ಮರಗಳನ್ನು ಕಡಿಯುವ ಬದಲು ವಿದ್ಯುತ್ ತಂತಿಗಳ ರಕ್ಷಣೆಗೆ ಪರ್ಯಾಯ ವ್ಯವಸ್ಥೆ ಮಾಡಿ

 ಹೊಸಪೇಟೆಯಲ್ಲಿ ವಿದ್ಯುತ್‌ತಂತಿಗಳಿಗೆ ಅಡ್ಡವಾಗಿ ಬೆಳೆದ ರಸ್ತೆ ಬದಿಯ ಮರಗಳನ್ನು ಕಡಿಯುವ ಬದಲು ವಿದ್ಯುತ್ ತಂತಿಗಳ ರಕ್ಷಣೆಗೆ ಪರ್ಯಾಯ ವ್ಯವಸ್ಥೆ ಮಾಡಿ Instead of cutting down roadside trees that have grown across power lines in Hospet, make alternativ

ವಿಜಯನಗರ  ಹೊಸಪೇಟೆ 22: ಇಂದು ವಿಜಯನಗರ ಜಿಲ್ಲೆಯ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಶ್ರೀ ಸಸ್ಯ ಶ್ಯಾಮಲಾ ಸಂರಕ್ಷಣಾ ಸೇವಾ ಟ್ರಸ್ಟ್‌ ವತಿಯಿಂದ ಹೊಸಪೇಟೆಯಲ್ಲಿ ವಿದ್ಯುತ್ ತಂತುಗಳಿಗೆ ಅಡ್ಡವಾಗಿ ಬೆಳೆದ ರಸ್ತೆ ಬದಿಯ ಮರಗಳನ್ನು ಕಡಿಯುವ ಬದಲು ವಿದ್ಯುತ್ ತಂತಿಗಳ ರಕ್ಷಣೆಗೆ ಪರ್ಯಾಯ ವ್ಯವಸ್ಥೆ ಮಾಡಿ ಕಂಡುಕೊಳ್ಳಲು ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ನೀಡಲಾಯಿತು.  ಈ ಸಂದರ್ಭದಲ್ಲಿ ಶ್ರೀ ಸಸ್ಯ ಶ್ಯಾಮಲಾ ಸಂರಕ್ಷಣಾ ಸೇವಾ ಟ್ರಸ್ಟ್‌ ನ ಅಧ್ಯಕ್ಷರಾದ ವಿ. ನಾಗರಾಜ್ ರವರು ಮಾತನಾಡಿ ವಿಜಯನಗರ ಕ್ಷೇತ್ರ ಹೊಸಪೇಟೆಯಲ್ಲಿ ರಸ್ತೆಯ ಪಕ್ಕದಲ್ಲಿ ಬೆಳೆದಿರುವ ಮರಗಳು ವಿದ್ಯುತ್ ವೈರ್‌ಗಳಿಗೆ ಅಡ್ಡಲಾಗಿ ಬೆಳೆಯುತ್ತವೆ ಎಂದು ಪದೇಪದೇ ಮರಗಳನ್ನು ಕಡೆದು ಹಾಕುವುದರಿಂದ ಶುಭ್ರವಾದ ಗಾಳಿಯ ಕೊರತೆ ಕಂಡುಬರುತ್ತದೆ ಹಾಗೂ ಒಂದು ಸಸಿ ಮರವಾಗಿ ಬೆಳೆಯಲು ವರ್ಷಗಳ ಕಾಲ ಸಮಯ ತೆಗೆದುಕೊಳ್ಳುತ್ತದೆ.

ಅದರಲ್ಲೂ ಉತ್ತರ ಕರ್ನಾಟಕದ ರಣ ಬಿಸಿಲಿಗೆ ಹೈರಾಣಾಗಿ ಹೋಗುತ್ತಿರುವುದನ್ನು ನಾವಿಂದು ನೋಡುತ್ತಿದ್ದೇವೆ. ಹಾಗೂ ಹೊಸಪೇಟೆಯಲ್ಲಿ ಜನಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು ಸಂಚಾರಕ್ಕಾಗಿ ಎಲ್ಲರೂ ದ್ವಿಚಕ್ರ ವಾಹನ, ತ್ರಿಚಕ್ರ ವಾಹನ, ಹಾಗೂ ನಾಲ್ಕು ಚಕ್ರವಾಹಗಳನ್ನು ಖರೀದಿಸುತ್ತಲೇ ಬಂದಿರುತ್ತಾರೆ. ಇದರಿಂದ ವಾಹನಗಳ ದಟ್ಟಣೆ ಹಾಗೂ ವಾಹನಗಳಿಂದ ಆಗುವ ವಾಯುಮಾಲಿನ್ಯ ಹಾಗೂ ರಸ್ತೆ ಅಪಘಾತಗಳು ಸಹ ಜಾಸ್ತಿಯಾಗುತಲೇ ಇವೆ. ಹೊಸಪೇಟೆಯಲ್ಲಿ ಸಸಿಗಳನ್ನು ನೆಟ್ಟು ಸಾಕಿ ಸಲಹುವವರಿಗಿಂತ ಹಲವಾರು ಕಾರಣಗಳನ್ನು ನೀಡಿ ಮರಗಳನ್ನು ಕಡಿಯುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತದೆ. ಅದರಲ್ಲೂ ಹೊಸಪೇಟೆಯಲ್ಲಿ ದಿನೇ ದಿನೇ ಬಿಸಿಲಿನ ಜಳ ಹೆಚ್ಚಾಗುತ್ತಿದ್ದು ಮಧ್ಯಾಹ್ನ 12 ರಿಂದ ಸಂಜೆ  4 ಗಂಟೆಯವರೆಗೆ ಬಿಸಿಲಿನ ತಾಪ ಹೆಚ್ಚಾಗುತ್ತಲೇ ಇದೆ.

ಅದರಲ್ಲೂ ವಿಶೇಷವಾಗಿ ರಸ್ತೆ ಬದಿಯ ಮರಗಳು ಕನಿಷ್ಠ ನೆರಳನ್ನು ಸಹ ನೀಡದಂತಹ ಅನಾವಶ್ಯಕ ಮರಗಳೇ ಹೆಚ್ಚಾಗಿವೆ. ಮರಗಳು ಪ್ರಕೃತಿಯ ಅತ್ಯಮೂಲ್ಯ ಸಂಪತ್ತು. ಇವು ನಮಗೆ ಉಸಿರಾಡಲು ಶುದ್ಧ ಆಮ್ಲಜನಕವನ್ನು ನೀಡುವುದರ ಜೊತೆಗೆ, ಹಣ್ಣು, ಹೂವು, ನೆರಳು, ಮತ್ತು ಓಷಧಿಗಳನ್ನು ಒದಗಿಸುತ್ತವೆ. ಪರಿಸರದ ತಾಪಮಾನವನ್ನು ನಿಯಂತ್ರಿಸಿ, ಮಣ್ಣಿನ ಸವೆತವನ್ನು ತಡೆದು, ಮಳೆಯನ್ನು ತರುವಲ್ಲಿ ಮರಗಳ ಪಾತ್ರ ಪ್ರಮುಖವಾಗಿದೆ. ಇಂಗಾಲದ ಡೈಆಕ್ಸೈಡ್ ಹೀರಿಕೊಂಡು ಭೂಮಿಯನ್ನು ತಂಪಾಗಿರಿಸುವ ಇವು, ಪ್ರಾಣಿ-ಪಕ್ಷಿಗಳಿಗೆ ಆಶ್ರಯತಾಣವಾಗಿವೆ . ಭೂಮಿಯ ಮೇಲೆ ಪ್ರತಿಯೊಬ್ಬನೂ ನಾನು ನನ್ನದು ಎಂಬ ಅಹಂಕಾರದಿಂದ ಪರಿಸರ ಮಾಲಿನ್ಯ, ಜಲ ಮಾಲಿನ್ಯ ವಾಯು ಮಾಲಿನ್ಯ, ಮಾಡುತ್ತಾ  ಅತಿಯಾದ ಪ್ಲಾಸ್ಟಿಕ್ ಬಳಕೆ, ಇನ್ನು ಹಲವಾರು ರೀತಿಯಲ್ಲಿ ಪರಿಸರದ ಮೇಲೆ ದೌರ್ಜನ್ಯ ಮಾಡುತ್ತಲೇ ಬಂದಿರುತ್ತಾನೆ.  

ಆದರೆ ಪರಿಸರವು ಯಾವುದೇ ಜಾತಿ, ಜನಾಂಗ, ಧರ್ಮ, ಬಡವ, ಶ್ರೀಮಂತ, ಪುರುಷ, ಮಹಿಳೆ, ಸರಕಾರಿ ಅಧಿಕಾರಿ, ಖಾಸಗಿ ಅಧಿಕಾರಿ, ಬಾಲಕರು, ವಯಸ್ಸಾದವರು ಎಂಬ ಭೇದಭಾವವಿಲ್ಲದೆ ಜಿಲ್ಲೆ, ರಾಜ್ಯ, ರಾಷ್ಟ್ರ ಎಂಬ ಭೇದಭಾವ ಮಾಡದೆ ಪ್ರತಿಯೊಬ್ಬರ ಪ್ರಾಣವನ್ನು ಉಳಿಸಲು ಪ್ರಾಣ ವಾಯುವನ್ನು ನೀಡಿ  ಎಲ್ಲರನ್ನೂ ಸಮಾನವಾಗಿ ಕಂಡು ಕಾಪಾಡುತ್ತಲೇ ಬಂದಿರುತ್ತದೆ.  ಆದರೆ ಮನುಷ್ಯನು ನಗರೀಕರಣ, ಕೈಗಾರೀಕೀಕರಣ, ರಸ್ತೆ ಅಗಲೀಕರಣ ಇನ್ನೂ ಹಲವಾರು ಕಾರಣಗಳನ್ನು ನೀಡಿ ಮರಗಳನ್ನು ಕಡಿಯುತ್ತಲೇ ಬಂದಿರುತ್ತಾನೆ. ಈ ನಿಟ್ಟಿನಲ್ಲಿ ವಿದ್ಯುತ್ ಇಲಾಖೆಯವರು ಸಹ ಮರಗಳನ್ನು ಕಡಿಯುತ್ತಲೇ ಬಂದಿರುತ್ತಾರೆ. ವಿದ್ಯುತ್ ಇಲಾಖೆಯ ನೌಕರರು ಮರಗಳನ್ನು ಕಡಿಯುವಾಗ ಹಲವಾರು ಬಾರಿ ಅನಾಹುತ ಸಂಭವಿಸುವ ಅವಕಾಶವಿರುತ್ತದೆ.

ಹಾಗೂ ಸಾಕಷ್ಟು ನೌಕರರು ಇಲಾಖೆಯ ಎಲ್ಲಾ ಕೆಲಸಗಳನ್ನು ಬಿಟ್ಟು ಮರ ಕಡಿಯುವುದರ ಹಿಂದೆ  ಬಿದ್ದಿದ್ದಾರೆ. ಆದುದರಿಂದ ತಾವುಗಳು ದಯಮಾಡಿ ವಿದ್ಯುತ್ ತಂತಿಗಳಿಗೆ ಅಡ್ಡಲಾಗಿ ಬೆಳೆದ ರಸ್ತೆ ಬದಿಯ ಮರಗಳನ್ನು ಕಡಿಯುವ ಬದಲು ವಿದ್ಯುತ್ ತಂತಿಗಳ ರಕ್ಷಣೆಗೆ ಪರ್ಯಾಯ ಮಾರ್ಗವಾದ ಕೇಬಲ್ ಗಳನ್ನು ಅಳವಡಿಸುವುದಾಗಲಿ ಅಥವಾ ವಿದ್ಯುತ್ ತಂತಿಗಳಿಗೆ ಪೈಪ್‌ಗಳನ್ನು ಅಳವಡಿಸುವುದಾಗಲಿ ಅಥವಾ ಇನ್ಯಾವುದೇ ಇತರೆ ಮಾರ್ಗವನ್ನು ಕಂಡುಕೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಆದೇಶ ನೀಡಿಸಿ ಸೂಕ್ತ ಕ್ರಮ ಜರುಗಿಸಬೇಕೆಂದು ತಮ್ಮಲ್ಲಿ ಕಳಕಳಿಂದ ಮನವಿ ಮಾಡಿಕೊಳ್ಳುತ್ತೇವೆ ಎಂದರು .  ಈ ಸಂದರ್ಭದಲ್ಲಿ ವಾಹಿನಿ ಡೆವಲಪ್ಮೆಂಟ್ ಸೊಸೈಟಿಯ  ಅಧ್ಯಕ್ಷರಾದ ಶಿವಕುಮಾರ್ ಹಾಗೂ  ಶ್ರೀ ಸಸ್ಯ ಶ್ಯಾಮಲಾ ಸಂರಕ್ಷಣಾ ಸೇವಾ ಟ್ರಸ್ಟ್‌ ನ ಉಪಾಧ್ಯಕ್ಷರಾದ ಎ ಗೋವಿಂದ ಹಾಗೂ ಸದಸ್ಯರಾದ ಶಶಿಕುಮಾರ್‌. ರಮೇಶ್‌. ಹಾಗೂ ಸುಮಲತಾ. ಇನ್ನು ಮುಂತಾದವರು ಉಪಸ್ಥಿತರಿದ್ದರು