ಅಂಚೆ ಕಚೇರಿಯಲ್ಲಿ ಹೊಸ ತಂತ್ರಜ್ಞಾನ ಸಾಧನ ಅಳವಡಿಕೆ

ಅಂಚೆ ಕಚೇರಿಯಲ್ಲಿ ಹೊಸ ತಂತ್ರಜ್ಞಾನ ಸಾಧನ ಅಳವಡಿಕೆ  Installation of new technology equipment at the post office

ಮುದ್ದೇಬಿಹಾಳ 24: ಅಂಚೆ ಕಚೇರಿಗಳಲ್ಲಿ ನೂತನ ತಂತ್ರಜ್ಞಾನ ಎಪಿಟಿ 2.0 ಸಾಧನ ಅಳವಡಿಸಿರುವದರಿಂದ ನೌಕರರಿಗೆ ಮತ್ತು ಗ್ರಾಹಕರಿಗೆ ಸಾಕಷ್ಟು ಸಹಕಾರಿಯಾಗಲಿದೆ ಎಂದು ಅಂಚೆ ನೀರೀಕ್ಷಕಿ ಎಸ್‌.ಎಸ್‌.ಇಲಕಲ್ ಹೇಳಿದರು. 

ಪಟ್ಟಣದ ಅಂಚೆ ಕಚೇರಿಯಲ್ಲಿ ಹೊಸ ತಂತ್ರಜ್ಞಾನ ಸಾಧನ ಅಳವಡಿಕೆ ಹಿನ್ನೆಲೆ ಹಮ್ಮಿಕೊಳ್ಳಲಾಗಿದ್ದ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. 

ಈ ಮೊದಲು ಬಳಸುತ್ತಿದ್ದ ತಂತ್ರಜ್ಞಾನ ಸಾಧನಗಳು ಕಠಿಣವಾಗಿದ್ದವು. ನೌಕರರಿಗೆ ಮತ್ತು ಗ್ರಾಹಕರು ವಿನಾ ಕಾರಣ ವಿಳಂಬ ಅನುಭವಿಸುವಂತಾಗುತ್ತಿತ್ತು. ಹಾಗಾಗಿ ಭಾರತ ಸರ್ಕಾರ ಈ ಸಮಸ್ಯೆಯಿಂದ ಶಾಶ್ವತ ಮುಕ್ತಿ ಪಡೆಯುವ ಉದ್ದೇಶದಿಂದ ಸ್ವತಃ ಈ ಸಾಧನವನ್ನು ತಯಾರಿಸಿದೆ. ಸಧ್ಯ ಅಳವಡಿಸಲಾದ ಸಾಧನ ಸಾಕಷ್ಟು ಸರಳವಾಗಿದ್ದು ಎಲ್ಲರಿಗೂ ಅನುಕೂಲವಾಗಲಿದೆ. ಕಾರ್ಯಗಳೆಲ್ಲ ವೇಗವಾಗಿ ಸಾಗಲಿವೆ. ಈ ಸಾಧನವನ್ನು ಕರ್ನಾಟಕ ಮೈಸೂರಿನವರು ತಯಾರಿಸಿದ್ದು, ಸಧ್ಯ ಕರ್ನಾಟಕದೆಲ್ಲೆಡೆ ಅಳವಡಿಸಿ ಮುಂದಿನ ದಿನಗಳಲ್ಲಿ ದೇಶದಾದ್ಯಂತ ಅಳವಡಿಸಲಾಗುವದು ಎಂದರು. 

ತಂತ್ರಜ್ಞ ಮಂಜುನಾಥ ಗೊಂಡಕರ ಮಾತನಾಡಿ, ಈವರೆಗೆ ಅಂಚೆ ಕಚೇರಿಗಳಲ್ಲಿ ಈವರೆಗ ಬಳಸಲಾದ ತಂತ್ರಜ್ಞಾನ ಸಾಧನಗಳು ಎರವಲು ಪಡೆಯಲಾಗಿದ್ದವುಗಳಾಗಿದ್ದವು. ಬಳಕೆಯಲ್ಲಿ ನೆಟ್‌ವರ್ಕ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದೆವು. ಇದರಿಂದ ಗ್ರಾಹಕರಿಗೂ ಸರಿಯಾದ ಸೇವೆ ನೀಡಲು ವಿನಾ ವಿಳಂಬವಾಗುತ್ತಿತ್ತು. ಹಾಗಾಗಿ ಎಪಿಟಿ 2.0 ಸಾಧನ ಅಳವಡಿಸಿದ್ದು, ಇದರ ಮುಖ್ಯ ಉದ್ದೇಶ ಗ್ರಾಕರಿಗೆ ತಲುಪಬೇಕಾದ ಸೇವೆ ಸರಳಗೊಳಿಸುವದಾಗಿದೆ. ಮತ್ತು ಇದರ ಬಳಕೆ ಕೂಡ ಸಾಕಷ್ಟು ಸರಳವಾಗಿದೆ. ಇನ್ನು ಅಂಚೆ ನೌಕರರ ಮತ್ತು ಗ್ರಾಹಕರ ಪರದಾಟ ತಪ್ಪಿದಂತಾಗಿದೆ ಎಂದರು. 

ಪೋಸ್ಟ್‌ ಮಾಸ್ಟರ್ ಎಸ್‌.ಡಿ.ಆದಾಪೂರ ಅಧ್ಯಕ್ಷತೆ ವಹಿಸಿದ್ದರು. ನ್ಯಾಯವಾದಿ ಚೇತನ ಶಿವಶಿಂಪಿ ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದರು. ಕಚೇರಿಯ ಆವರಣದಲ್ಲಿ ಕಚೇರಿಯ ಮಹಿಳಾ ಸಿಬ್ಬಂದಿಗಳು ಸುಂದರವಾದ ರಂಗೋಲಿ ಬಿಡಿಸಿದ್ದರು. ಬಲೂನ್, ಹೂಗಳಿಂದ ಕಚೇರಿಯನ್ನು ಅಲಂಕೃತಗೊಳಿಸಲಾಗಿತ್ತು. ಕಚೇರಿಯ ಸಿಬ್ಬಂದಿಗಳೆಲ್ಲ ತಮ್ಮ ಮನೆಗಳಲ್ಲಿ ಜರುಗುವ ಸಮಾರಂಭಗಳಂತೆ ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕೇಕ್ ಕತ್ತರಿಸಿ ಒಬ್ಬರಿಗೊಬ್ಬರು ತಿನ್ನಿಸುವ ಮೂಲಕ ಸಂಭ್ರಮಿಸಿದರು. ಎಸ್‌.ವಾಯ್‌.ಬೈಲಗೊಂಡ, ಎಸ್‌.ಆಯ್‌.ಪಾಟೀಲ, ಸಿ.ಪಿ.ಜಾಧವ, ಸಂಜೀವ ಬ್ಯಾಲಾಳ, ಆಯ್‌.ಬಿ.ರೇವಡಿಹಾಳ, ಸಂಗಮೇಶ ಮಡಿವಾಳರ, ಎಸ್‌.ಕೆ.ಅಂಬಿಗೇರ, ಉದಯ ಡೋಂಬರ, ರೇಖಾ ಈಳಗೇರ, ಮಂಜುಳಾ ಜಾವೂರ, ವಿಜಯಲಕ್ಷ್ಮೀ ಮುರಾಳ ಸೇರಿದಂತೆ ಕಚೇರಿಯ ಎಲ್ಲ ಸಿಬ್ಬಂದಿ ಭಾಗಿಯಾಗಿದ್ದರು. ಡಿ.ಎಸ್‌.ಮೇಲಿನಕೇರಿ ಪ್ರಾರ್ಥಿಸಿದರು. ಲಾವಪ್ಪ ಗುರಿಕಾರ ನಿರೂಪಿಸಿದರು. ಲಕ್ಷ್ಮಣ ಠಾಣಾಗುಂದಿ ಹೊಸ ಸಾಧನದ ಬಗ್ಗೆ ಬರೆದ ಹಾಸ್ಯ ಭರಿತ ಕವನ ವಾಚಿಸಿ ವಂದಿಸಿದರು. 

ಅಂಚೆ ನೌಕರರೆಲ್ಲ ಇಲ್ಲಿಯವರೆಗೆ ಕಲ್ಲಿನ ಕಡಲೆಯನ್ನು ತಿಂದಿದ್ದೀರಿ. ಸಧ್ಯ ಅಳವಡಿಸಲಾದ ಎಪಿಟಿ 2.0 ಸಾಧನ ನಿಜವಾದ ಕಡಲೆ. ಯಾವುದೇ ತೊಂದರೆ ಇಲ್ಲದೇ ಗ್ರಾಹಕರಿಗೆ ಸೇವೆ ನೀಡಬಹುದು.  

- ಎಸ್‌.ಎಸ್‌.ಇಲಕಲ್‌. ಅಂಚೆ ನೀರೀಕ್ಷಕಿ, ಮುದ್ದೇಬಿಹಾಳ.