ಜೂನ್ 20ಕ್ಕೆ ಕ್ರಸ್ಟ್‌ ಗೇಟ್ ಚೈನ್ ಅಳವಡಿಕೆ ಕಾರ್ಯ ಪೂರ್ಣ

ಜೂನ್ 20ಕ್ಕೆ ಕ್ರಸ್ಟ್‌ ಗೇಟ್ ಚೈನ್ ಅಳವಡಿಕೆ ಕಾರ್ಯ ಪೂರ್ಣ  Installation of crust gate chain to be completed by June 20th

ವಿಜಯನಗರ (ಹೊಸಪೇಟೆ) 26:  ತುಂಗಭದ್ರಾ ಜಲಾಶಯದ ಸುರಕ್ಷತೆ ಹಾಗೂ ಆಧುನೀಕರಣದ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿರುವ ಕ್ರಸ್ಟ್‌ ಗೇಟ್ಗಳಿಗೆ ಚೈನ್ ಅಳವಡಿಸುವ ಕಾರ್ಯವು ತ್ವರಿತಗತಿಯಿಂದ ಸಾಗುತ್ತಿದ್ದು, ಮುಂಬರುವ ಜೂನ್ 15 ಅಥವಾ 20ರ ಒಳಗಾಗಿ ಎಲ್ಲಾ ಗೇಟ್ಗಳ ಕೆಲಸ ಸಂಪೂರ್ಣವಾಗಿ ಮುಕ್ತಾಯಗೊಳ್ಳಲಿದೆ.  

ಜಲಾಶಯದ ಒಟ್ಟು 33 ಗೇಟ್ಗಳ ಫ್ಯಾಬ್ರಿಕೇಷನ್ ಕೆಲಸ ಈಗಾಗಲೇ ಯಶಸ್ವಿಯಾಗಿ ಮುಗಿದಿದೆ. ಹಳೆಯದಾಗಿದ್ದ ಹಾಗೂ ತುಕ್ಕು ಹಿಡಿದಿದ್ದ (ಖಣ) ಮೇಲ್ಭಾಗದ ತಾಂತ್ರಿಕ ವ್ಯವಸ್ಥೆಯನ್ನು ಸಂಪೂರ್ಣವಾಗಿ ಬದಲಾಯಿಸಿ ಹೊಸದಾಗಿ ನವೀಕರಿಸಲಾಗುತ್ತಿದೆ. ಈಗಾಗಲೇ ಎರಡು ಗೇಟ್ಗಳಿಗೆ ಹೊಸ ಚೈನ್ಗಳನ್ನು ಅಳವಡಿಸಲಾಗಿದ್ದು, ಈ ಮೇ ತಿಂಗಳಾಂತ್ಯಕ್ಕೆ ಒಟ್ಟು 15 ಗೇಟ್ಗಳ ಚೈನ್ ಅಳವಡಿಕೆ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಶಾಸಕ ಹೆಚ್‌.ಆರ್ ಗವಿಯಪ್ಪ ಹೇಳಿದರು.  

ಪ್ರಸ್ತುತ 17 ಗೇಟ್ಗಳಿಗೆ ತಗಲುವಷ್ಟು ಚೈನ್ಗಳು ಸಿದ್ಧವಿದ್ದು, ಇನ್ನುಳಿದ ಗೇಟ್ಗಳ ಚೈನ್ಗಳು ಜೂನ್ ಮೊದಲ ವಾರದಲ್ಲಿ ಲಭ್ಯವಾಗಲಿವೆ. ಜಲಾಶಯದ ಒಂದೊಂದು ಗೇಟ್ ಸುಮಾರು 50 ಟನ್ ತೂಕ ಹೊಂದಿದ್ದು, ಇದಕ್ಕೆ ಅಳವಡಿಸುವ ತಲಾ 1.8 ರಿಂದ 1.9 ಟನ್ ತೂಕದ ಎರಡು ಚೈನ್ಗಳು ಸೇರಿದಂತೆ ಒಟ್ಟು ತೂಕ ಸುಮಾರು 55 ಟನ್ ಆಗುತ್ತದೆ. ಇಷ್ಟು ಬಲಿಷ್ಠವಾದ ವ್ಯವಸ್ಥೆಯನ್ನು ಅತ್ಯಂತ ಸುರಕ್ಷಿತವಾಗಿ ಅಳವಡಿಸಲಾಗುತ್ತಿದೆ.  

ಮುಂದಿನ 40 ವರ್ಷ ಡ್ಯಾಂ ಸುರಕ್ಷಿತ:  

ಮೂರು-ನಾಲ್ಕು ವರ್ಷಗಳ ಹಿಂದೆಯೇ ಜಲಾಶಯದ ಸಮಗ್ರ ಸುರಕ್ಷತಾ ಸರ್ವೇ ನಡೆಸಲಾಗಿದ್ದು, ಎಲ್ಲೆಲ್ಲಿ ನೀರಿನ ಸೋರಿಕೆ ಇತ್ತೋ ಅಲ್ಲೆಲ್ಲಾ ಈಗಾಗಲೇ ’ಗ್ರೌಟಿಂಗ್‌’ ಹಾಗೂ ಇಂಜೆಕ್ಟ್‌ ಮಾಡುವ ಮೂಲಕ ದುರಸ್ತಿಪಡಿಸಲಾಗಿದೆ. ಇದರಿಂದಾಗಿ ಮುಂದಿನ 40 ವರ್ಷಗಳ ಕಾಲ ಜಲಾಶಯಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಟಿಬಿ ಬೋರ್ಡ್‌ ಅಧಿಕಾರಿಗಳು ತಾಂತ್ರಿಕ ಭರವಸೆ ನೀಡಿದ್ದಾರೆ. ಈ ಸುರಕ್ಷತಾ ವರದಿಯನ್ನು ಶೀಘ್ರದಲ್ಲೇ ಉಪಮುಖ್ಯಮಂತ್ರಿ ಹಾಗೂ ನೀರಾವರಿ ಸಚಿವರಾದ ಡಿ.ಕೆ. ಶಿವಕುಮಾರ್ ಅವರೊಂದಿಗೆ ಚರ್ಚಿಸಿ ಪರೀಶೀಲನೆ ನಡೆಸಲಾಗುವುದು.  

ನವಲಿ ಪರ್ಯಾಯ ಜಲಾಶಯಕ್ಕೆ ಸಿದ್ಧತೆ:  

ತುಂಗಭದ್ರಾ ಜಲಾಶಯದಲ್ಲಿ ಸದ್ಯ 30 ಟಿಎಂಸಿಯಷ್ಟು ಹೂಳು ತುಂಬಿಕೊಂಡಿರುವುದರಿಂದ ಪರ್ಯಾಯವಾಗಿ ನವಲಿ ಜಲಾಶಯ ನಿರ್ಮಾಣದ ಅಗತ್ಯತೆ ಹೆಚ್ಚಾಗಿದೆ. ಹೊಸ ಜಲಾಶಯ ನಿರ್ಮಾಣಕ್ಕೆ ಸಿಡಬ್ಲ್ಯೂಸಿ ಅನುಮತಿ ಸೇರಿದಂತೆ ಕನಿಷ್ಠ 10 ರಿಂದ 15 ವರ್ಷಗಳ ಕಾಲಾವಕಾಶ ಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ ಹಾಗೂ ಆಂಧ್ರ​‍್ರದೇಶದ ಕರ್ನೂಲು, ಅನಂತಪುರ ಸೇರಿದಂತೆ ಒಟ್ಟು 7-8 ಜಿಲ್ಲೆಗಳ ರೈತರ ನೀರಾವರಿ ಹಿತದೃಷ್ಟಿಯಿಂದ ಶೀಘ್ರದಲ್ಲೇ ಎಲ್ಲಾ ಶಾಸಕರನ್ನೊಳಗೊಂಡ ನಿಯೋಗದೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ನವಲಿ ಯೋಜನೆಯ ಪ್ರಕ್ರಿಯೆ ಆರಂಭಿಸಲು ಮನವಿ ಸಲ್ಲಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು. ಈ ವೇಳೆ ಟಿ.ಬಿ ಡ್ಯಾಂ ಕಾರ್ಯನಿರ್ವಾಹಕ ಅಧಿಕಾರಿ ಎನ್‌.ಚಂದ್ರಶೇಖರ್, ಎ.ಇ.ಇ ಕೆ.ಜ್ಞಾನೇಶ್ವರ, ಅಸಿಸ್ಟೆಂಟ್ ಇಂಜಿನಿಯರ್ ಕಿರಣ್ ಸೇರಿದಂತೆ ಮತ್ತಿತರರು ಇದ್ದರು.