ಮುಧೋಳ ತಾಲೂಕಿನ ವಿವಿದೆಡೆ ಭೇಟಿ ಪರೀಶೀಲನೆ: ಬರಗಿ ಗ್ರಾಮದ ನಿವಾಸಿಗಳ ಸಮಸ್ಯೆಗಳನ್ನು ಆಲಿಸಿದ ಡಿಸಿ

ಮುಧೋಳ ತಾಲೂಕಿನ ವಿವಿದೆಡೆ ಭೇಟಿ ಪರೀಶೀಲನೆ: ಬರಗಿ ಗ್ರಾಮದ ನಿವಾಸಿಗಳ ಸಮಸ್ಯೆಗಳನ್ನು ಆಲಿಸಿದ ಡಿಸಿ Inspection visit to various places in Mudhol taluk by DC

ಬಾಗಲಕೋಟೆ 26: ಮುಧೋಳ ತಾಲೂಕಿನ ಬರಗಿ ಗ್ರಾಮದಲ್ಲಿರುವ ಎಸ್‌.ಸಿ ಕಾಲೋನಿಗೆ ಜಿಲ್ಲಾಧಿಕಾರಿ ಸಂಗಪ್ಪ ಭೇಟಿ ನೀಡಿ ಅಲ್ಲಿಯ ನಿವಾಸಿಗಳ ಸಮಸ್ಯೆಗಳನ್ನು ಆಲಿಸಿ, ಕ್ರಮವಹಿಸುವುದಾಗಿ ತಿಳಿಸಿದರು. 

ಗ್ರಾಮಕ್ಕೆ ಭೇಟಿ ನೀಡಿದಾಗ ಸಮುದಾಯ ಶೌಚಾಲಯ, ಸಾರ್ವಜನಿಕ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರಕ್ಕೆ ಅವಕಾಶ ಕೊಡದೇ ಇರುವುದು, ಸ್ವಯಂ ಉದ್ಯೋಗ ಕೈಗೊಳ್ಳಲು ಬಿಡಿಸಿಸಿ ಬ್ಯಾಂಕ್‌ನಲ್ಲಿ ಸಾಲ ಸೌಲಭ್ಯ, ಜಲಜೀವನ ಮಿಷಯ ಯೋಜನೆಯಡಿ ಕೈಗೊಂಡ ಕಾಮಗಾರಿ ಪೂರ್ಣಗೊಂಡಿದ್ದು, ನೀರು ಸರಬರಾಜು ಆಗದೇ ಇರುವುದು ಸೇರಿದಂತೆ ಅನೇಕ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳು ಮುಂದಿಟ್ಟರು. ಗ್ರಾಮಕ್ಕೆ ಬಸ್‌ಗಳು ಸರಿಯಾಗಿ ಬರುತ್ತಿಲ್ಲ. ಇದರಿಂದ ಶಾಲೆಗೆ ಮಕ್ಕಳು ಸರಿಯಾದ ವೇಳೆಯಲ್ಲಿ ಹೋಗಲು ಆಗುತ್ತಿಲ್ಲವೆಂದು ತಮ್ಮ ಅಳಲನ್ನು ಹೇಳಿಕೊಂಡರು. 

ಗ್ರಾಮದ ನಿವಾಸಿಗಳ ಸಮಸ್ಯೆಗಳನ್ನು ಆಲಿಸಿದ ಜಿಲ್ಲಾಧಿಕಾರಿಗಳು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಕ್ರಮವಹಿಸುವ ನಿಟ್ಟಿನಲ್ಲಿ ನಿರ್ದೇಶನ ನೀಡಲಾಗುವುದೆಂದು ತಿಳಿಸಿದರು. ಮಹಿಳೆಯರು ಮತ್ತು ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸುವದರ ಜೊತೆಗೆ ಹೆಣ್ಣು ಮಕ್ಕಳ ತಪ್ಪದೇ ಶಾಲೆಗೆ ಕಳುಹಿಸಲು ಮುಂದಾಗಬೇಕು ಎಂದರು. ನಂತರ ಬರಗಿ ಗ್ರಾಮ ಚಾವಡಿಗೆ ತೆರಳಿದಾಗ ಗ್ರಾಮ ಆಡಳಿತ ಅಧಿಕಾರಿಗಳ ದಪ್ತರ ತಪಾಸಣೆ ಮಾಡಿ, ಸಾರ್ವಜನಿಕರಿಗೆ ಸರಕಾರ ಯೋಜನೆ, ಸೌಲಭ್ಯಗಳನ್ನು ಸಕಾಲದಲ್ಲಿ ಒದಗಿಸುವಂತೆ ಸೂಚನೆ ನೀಡಿದರು. ಇ-ಪೌತಿ ಆಂದೋಲನದಲ್ಲಿ ವೇಗವಾಗಿ ಪ್ರಗತಿ ಸಾಧಿಸುದಂತೆ ಕಟ್ಟುನಿಟ್ಟಾಗಿ ಸೂಚನೆ ನೀಡಿದರು. 

ಕುಳಲಿ ಗ್ರಾಮದ ಕಿತ್ತೂರ ರಾಣಿಚೆನ್ನಮ್ಮ ಮುರಾರ್ಜಿ ವಸತಿ ಶಾಲೆಗೆ ಭೇಟಿ ನೀಡಿ ಅಲ್ಲಿಯ ಮಕ್ಕಳ ಜೊತೆ ಸಂವಾದ ನಡೆಸಿ, ಮಕ್ಕಳ ಆರೋಗ್ಯದ ಬಗ್ಗೆ ವಿಚಾರಿಸಿದರು. ಶಾಲಾ ಆಟದ ಮೈದಾನ, ಗಾರ್ಡನ್ ಹಾಗೂ ಶಾಲಾ ಕೊಠಡಿಗಳನ್ನು ವೀಕ್ಷಣೆ ಮಾಡಿದರು. ಶುಚಿತ್ವಕ್ಕೆ ಹೆಚ್ಚಿನ ಒತ್ತು ನೀಡಬೇಕು. ಊಟದ ಕೋಣೆ ಹಾಗೂ ದಾಸ್ತಾನು ಕೊಠಡಿಗೆ ತೆರಳಿ ಪರೀಶೀಲಿಸಿದಾಗ ತರಕಾಗಿ ತಾಜಾ ಇಲ್ಲದಿರುವದನ್ನು ಗಮನಿಸಿ ಸಂಬಂಧಿಸಿದ ಟೆಂಡರ್‌ದಾರರಿಗೆ ನೋಟಿಸ್ ನೀಡಲು ಸೂಚಿಸಿದರು. ಇದಕ್ಕಾಗಿ ಸರಕಾರ ಸಾಕಷ್ಟು ಹಣಖರ್ಚು ಮಾಡುತ್ತಿದ್ದು, ಮಕ್ಕಳಿಗೆ ಗುಣಮಟ್ಟದ ಆಹಾರ ನೀಡುವ ಕೆಲಸವಾಗಬೇಕು ಎಂದರು. 

ಭೇಟಿ ಸಮಯದಲ್ಲಿ ಜಮಖಂಡಿ ಉಪ ವಿಭಾಗಾಧಿಕಾರಿ ಶ್ವೇತಾ ಬೀಡಿಕರ, ಮುಧೋಳ ತಹಶೀಲ್ದಾರ ಮಹಾದೇವ ಸನಮೂರೆ, ರಬಕವಿ-ಬನಹಟ್ಟಿ ತಹಶೀಲ್ದಾರ ಗೀರೀಶ ಸ್ವಾದಿ ಸೇರಿದಂತೆಇತರೆ ಅಧಿಕಾರಿಗಳು ಇದ್ದರು.