ರಥವನ್ನು ಪರೀಶೀಲಿಸಿ ಅರ್ಹತಾ ಪ್ರಮಾಣ ಪತ್ರ ನೀಡಿ: ಡಾ. ಸುರೇಶ ಇಟ್ನಾಳ

ರಥವನ್ನು ಪರೀಶೀಲಿಸಿ ಅರ್ಹತಾ ಪ್ರಮಾಣ ಪತ್ರ ನೀಡಿ: ಡಾ. ಸುರೇಶ ಇಟ್ನಾಳ Inspect the chariot and issue a certificate of eligibility: Dr. Suresh Itnal

ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದ ಜಾತ್ರಾ ಮಹೋತ್ಸವದಲ್ಲಿ ಸಿ.ಸಿ.ಕ್ಯಾಮರಾಗಳನ್ನು ಅಳವಡಿಸಿ 

ಕೊಪ್ಪಳ ಏಪ್ರಿಲ್ 29: ಶ್ರೀ ಕ್ಷೇತ್ರ ಹುಲಿಗಿಯ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದ 2026ರ ವಾರ್ಷಿಕ ಜಾತ್ರಾ ಮಹೋತ್ಸವದ ನಿಮಿತ್ತ ರಥವನ್ನು ಪರೀಶೀಲಿಸಿ ಅರ್ಹತಾ ಪ್ರಮಾಣ ಪತ್ರ ನೀಡಬೇಕು ಮತ್ತು ಜಾತ್ರಾ ಅವಧಿಯಲ್ಲಿ ಸಿ.ಸಿ.ಕ್ಯಾಮರಾಗಳನ್ನು ಅಳವಡಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕೊಪ್ಪಳ ಜಿಲ್ಲಾಧಿಕಾರಿಗಳಾದ ಡಾ. ಸುರೇಶ ಬಿ. ಇಟ್ನಾಳ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 

ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದ ವಾರ್ಷಿಕ ಜಾತ್ರೆಯ ಪ್ರಯುಕ್ತ ಮೇ 11ರ ಸೋಮವಾರದಂದು ಮಹಾರಥೋತ್ಸವ ಜರುಗಲಿದ್ದು, ರಥೋತ್ಸವಕ್ಕಿಂತ ಮುಂಚಿತವಾಗಿ ರಥವನ್ನು ಕೊಪ್ಪಳ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಂದ ಸಂಪೂರ್ಣವಾಗಿ ಪರೀಶೀಲಿಸಿ ಅರ್ಹತಾ ಪ್ರಮಾಣ ಪತ್ರವನ್ನು ನೀಡಬೇಕು. ಈ ಬಗ್ಗೆ ಕೊಪ್ಪಳ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರರು ಹಾಗೂ ಶ್ರೀ ಹುಲಿಗೆಮ್ಮ ದೇವಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳು ಸೂಕ್ತ ಕ್ರಮವಹಿಸಬೇಕೆಂದರು. 

ಸಿ.ಸಿ.ಕ್ಯಾಮರಾಗಳನ್ನು ಅಳವಡಿಸಿ: ಜಾತ್ರಾ ಕಾಲದಲ್ಲಿ ದೇವಸ್ಥಾನ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಸಿ.ಸಿ.ಕ್ಯಾಮರಾಗಳನ್ನು ನದೀತೀರದ ಪ್ರದೇಶದಲ್ಲಿ, ಬಯಲು ಪ್ರದೇಶದಲ್ಲಿ, ದೇವಸ್ಥಾನದ ಮುಖ್ಯರಸ್ತೆ, ಭಕ್ತಾದಿಗಳು ಉಳಿದುಕೊಳ್ಳುವ ಜನಸಂದಣಿ ಪ್ರದೇಶದಲ್ಲಿ ನಿಗಾವಹಿಸಲು ಸಿ.ಸಿ.ಕ್ಯಾಮರಾಗಳನ್ನು ಅಳವಡಿಸಿ ಅಗತ್ಯ ಕ್ರಮ ವಹಿಸಲು ಜಿಲ್ಲಾ ಪೊಲೀಸ್ ಇಲಾಖೆ, ಮುನಿರಾಬಾದ್ ಪೊಲೀಸ್ ಠಾಣೆಯ ಆರಕ್ಷಕ ಉಪನೀರೀಕ್ಷಕರು ಮತ್ತು ಶ್ರೀ ಹುಲಿಗೆಮ್ಮ ದೇವಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.