ಪ್ರಸ್ತುತ ಜಗತ್ತಿನಲ್ಲಿ ನಾವಿನ್ಯತೆಗೆ ಹೆಚ್ಚು ಪ್ರಾಧಾನ್ಯತೆ ದೊರೆಯುತ್ತಿದೆ : ಪ್ರೊ. ಎಂ.ಎಸ್‌.ಖೊದ್ನಾಪೂರ

ಪ್ರಸ್ತುತ ಜಗತ್ತಿನಲ್ಲಿ ನಾವಿನ್ಯತೆಗೆ ಹೆಚ್ಚು ಪ್ರಾಧಾನ್ಯತೆ ದೊರೆಯುತ್ತಿದೆ : ಪ್ರೊ. ಎಂ.ಎಸ್‌.ಖೊದ್ನಾಪೂರ Innovation is getting more importance in the current world: Prof. M.S. Khodnapur

ವಿಜಯಪುರ 24:  ಪ್ರಸ್ತುತ ಇಂದಿನ ವಿಜ್ಞಾನ-ತಂತ್ರಜ್ಞಾನ ಯುಗದಲ್ಲಿ ಹೊಸತನ, ನಾವಿನ್ಯತೆ, ನವೋದ್ಯಮ ಮತ್ತು ಸಾರ್ಟ-ಅಪ್ ಸಂಸ್ಕೃತಿ ಮತ್ತು ವ್ಯವಹಾರಿಕ ಯೋಜನೆ-ಯೋಚನೆಗಳಿಗೆ ಹೆಚ್ಚಿನ ಮಹತ್ವ ದೊರೆಯುತ್ತಿದೆ. ಅದಕ್ಕಾಗಿ ವಿದ್ಯಾರ್ಥಿಗಳು ತಾವು ಪಡೆದ ವಿಷಯ ಜ್ಞಾನದ ಜತೆಗೆ ಭವಿಷ್ಯಕ್ಕೆ ಉಪಯೋಗಕಾರಿಯಾಗಬಲ್ಲ ಪ್ರಾಯೋಗಿಕತೆ-ವಿಶ್ಲೇಷಣಾತ್ಮಕ ಕೌಶಲ್ಯಗಳನ್ನು ನೀಡುವ ವಿನೂತನವಾದ ಇನ್ಹೋಟಿವ್ಹ್‌ ಚಿಂತನ-ಮಂಥನಗಳ ಮೂಲಕ ಸ್ವಾವಲಂಬಿ ಉದ್ಯೋಗಗಳನ್ನು ಕಂಡುಕೊಳ್ಳುವಲ್ಲಿ ರೂಪುಗೊಳ್ಳಬೇಕೆಂದು ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಎಂ.ಎಸ್‌.ಖೊದ್ನಾಪೂರ ಅವರು ಅಭಿಪ್ರಾಯಪಟ್ಟರು.

ಅವರು ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದಿನಾಂಕ:24-02-2026 ರಂದು ಪ್ಲೇಸಮೆಂಟ್ ಸೆಲ್ ಮತ್ತು ವಾಣಿಜ್ಯಶಾಸ್ತ್ರ ವಿಭಾಗದ ವತಿಯಿಂದ ಆಯೋಜಿಸಿದ್ದ ನಾವಿನ್ಯತೆ ಚಿಂತನ-ಮಂಥನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಅವರು ಮಾತನಾಡುತ್ತಾ, ಕಾಲೇಜು ಶಿಕ್ಷಣ ಇಲಾಖೆಯು ವಿಶೇಷವಾಗಿ ಪದವಿ ಹಂತದ ವಿದ್ಯಾರ್ಥಿಗಳಿಗೆ ಸ್ವ-ಉದ್ಯೋಗ ಕೈಗೊಂಡು ಸ್ವಾವಲಂಬಿ, ಸುಸ್ಥಿರ ಮತ್ತು ಓದ್ಯೋಗಿಕ ಅವಕಾಶಗಳನ್ನು ಸೃಷ್ಟಿಸಬಲ್ಲ ನವೋದ್ಯಮದ ಪಥವನ್ನು ಅನುಸರಿಸುವಂತೆ ಮತ್ತು ಸಬಲೀಕರಣಗೊಳಿಸುವ ಮಹೋನ್ನತವಾದ ಉದ್ಧೇಶವನ್ನು ಹೊಂದಿದೆ.

ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ನವೋದ್ಯಮಿಗಳಿಗೆ ತಮ್ಮ ವ್ಯವಹಾರಿಕ ಕಲ್ಪನೆ, ವೈಚಾರಿಕೆ ಪರಿಕಲ್ಪನೆ ಮತ್ತು ಯೋಜನೆಗಳನ್ನು ಪ್ರಸ್ತುತಪಡಿಸಲು ಮತ್ತು ಉದ್ಯಮದಾರರು. ಹೂಡಿಕೆದಾರರು, ಶಿಕ್ಷಣ ತಜ್ಞರು ಹಾಗೂ ಮಾರ್ಗದರ್ಶಕರೊಂದಿಗೆ ಸಂಪರ್ಕ ಸಾಧಿಸಲು ಉತ್ತಮ ವೇದಿಕೆ ನಿರ್ಮಿಸುತ್ತಿದೆ ಎಂದರು. ಪ್ಲೇಸಮೆಂಟ್ ಸೆಲ್ ಸಂಚಾಲಕ ಪ್ರೊ. ಸಿದ್ರಾಮ ಯರನಾಳ ಮಾತನಾಡಿ, ಕಾಲೇಜು ಶಿಕ್ಷಣ ಇಲಾಖೆ ಮತ್ತು ಫೆಡರೇಷನ್ ಆಫ್ ಕರ್ನಾಟಕ ಛೇಂಬರ್ ಆಫ್ ಕಾಮರ್ಸ ಆಂಡ್ ಇಂಡಸ್ಟ್ರೀ ಇವುಗಳ ಸಹಭಾಗಿತ್ವದಲ್ಲಿ ‘ಕೇವಲ ಉದ್ಯೋಗಿಯಾಗದೇ ಉದ್ಯೋಗದಾತನಾಗು’ ಎಂಬ ಮಹತ್ವಾಕಾಂಕ್ಷೆಯೊಂದಿಗೆ ‘ಇನೋವ್ಹೇಟಿವ್ ಮಂಥನ ಕಾರ್ಯಕ್ರಮ’ವನ್ನು ಹಮ್ಮಿಕೊಂಡಿದ್ದು, ವಿದ್ಯಾರ್ಥಿಗಳು ದಿನಾಂಕ: 28-02-2026 ರ ಒಳಗಾಗಿ ನೋಂದಣಿ ಮಾಡಿ ಯೋಜನೆಯ ಪ್ರಯೋಜನ ಪಡೆದುಕೊಳ್ಳಬೇಕು.

ಈ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದಲ್ಲಿ ಮೂರು ಕಾರ್ಯಾಗಾರಗಳನ್ನು ಇಲಾಖೆಯು ಹಮ್ಮಿಕೊಳ್ಳಲಾಗುತ್ತಿದ್ದು, ವ್ಯಾಪಾರ ಯೋಜನೆಗಳ ಅಭಿವೃದ್ಧಿ ಮತ್ತು ಪ್ರಸ್ತುತಿಕರಣಕ್ಕೆ ಸಂಬಂಧಪಟ್ಟಂತೆ ಕೈಗಾರಿಕೋದ್ಯಮಿಗಳಿಂದ ಮಾರ್ಗದರ್ಶನ ನೀಡಲಾಗುವುದು. ಎಲ್ಲ ವಿದ್ಯಾರ್ಥಿಗಉ ಈ ಕಾರ್ಯಕ್ರಮದ ಪ್ರಯೋಜನ ಪಡೆಯಬೇಕೆಂದು ಕಿವಿಮಾತು ಹೇಳಿದರು. ಈ ಕಾರ್ಯಕ್ರಮದಲ್ಲಿ ಬಿ.ಸಿ.ಎ ವಿಭಾಗದ ಮುಖ್ಯಸ್ಥ ಪ್ರೊ. ಮೇಘರಾಜ ನಾಯಕ ಅವರು ವೇದಿಕೆಯ ಮೇಲಿದ್ದರು. ಈ ಇನವ್ಹೋಟಿವ್ ಮಂಥನ ಕಾರ್ಯಕ್ರಮದಲ್ಲಿ ಕಾಲೇಜಿನ ಬಿ.ಕಾಂ, ಬಿ.ಬಿ.ಎ ಮತ್ತು ಬಿ.ಸಿ.ಎ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು.