ಇನ್ನರ್ ವೀಲ್ ಸುವರ್ಣ ಮಹೋತ್ಸವ: ಪ್ರತಿಭಾವಂತರಿಗೆ ಸೈಕಲ್ ವಿತರಣೆ

ಇನ್ನರ್ ವೀಲ್ ಸುವರ್ಣ ಮಹೋತ್ಸವ: ಪ್ರತಿಭಾವಂತರಿಗೆ ಸೈಕಲ್ ವಿತರಣೆ Inner Wheel Golden Jubilee: Bicycle distribution to talented people

ಹಾವೇರಿ 20: ಮಾನವೀಯತೆಯೇ ಹೃದಯದ ಬಡಿತ ಎಂಬ ಧ್ಯೇಯೋದ್ದೇಶ ಇಟ್ಟುಕೊಂಡು, ಸ್ನೇಹ, ಸೇವೆ ಮತ್ತು ತಿಳುವಳಿಕೆಯನ್ನು ಉತ್ತೇಜಿಸಿ ವಿಶ್ವದ ಎಲ್ಲ ಸಮುದಾಯಗಳಿಗೆ ಮಹಿಳೆಯರೇ ಸ್ವಯಂಸೇವಕರಾಗಿ ಸೇವೆ ಸಲ್ಲಿಸುವ ಒಂದು ನಿಸ್ವಾರ್ಥ ಸಂಘಟನೆಯೇ ಇನ್ನರ್ ವೀಲ್ ಸಂಸ್ಥೆಯಾಗಿದೆ ಎಂದು ಸಂಸ್ಥೆಯ ಜಿಲ್ಲಾಧ್ಯಕ್ಷೆ  ಪ್ರತಿಭಾ ಹಾವನೂರ ಹೇಳಿದರು. 

ನಗರದ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ನಂ-02 ರಲ್ಲಿ ಇನ್ನರ್ ವೀಲ್ ಸಂಸ್ಥೆಯ ಸುವರ್ಣ ಮಹೋತ್ಸವದ ಅಂಗವಾಗಿ ಬಡ, ಪ್ರತಿಭಾವಂತ ಬಾಲಕಿಯರಿಗೆ ಉಚಿತ ಬೈಸಿಕಲ್‌ಗಳನ್ನು ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. 

ಮುಖ್ಯ ಅತಿಥಿಯಾಗಿದ್ದ ಡಯಟ್‌ನ ಪ್ರಾಚಾರ್ಯ ಝಡ್‌.ಎಂ. ಖಾಜಿ ಮಾತನಾಡಿ, ಸರಕಾರಿ ಶಾಲೆಗಳ ಸಬಲೀಕಲರಣವು ಇಂದು ಅತೀ ಅವಶ್ಯವಾಗಿದೆ. ಸಾರ್ವಜನಿಕರ ಹಾಗೂ ಸಂಘ ಸಂಸ್ಥೆಗಳ  ಸಹಭಾಗಿತ್ವದಲ್ಲಿ ಶಾಲೆಗಳಿಗೆ ಉತ್ತಮ ಸೌಕರ್ಯಗಳನ್ನು ಒದಗಿಸಲು ಶಿಕ್ಷಕರು ಪ್ರಯತ್ನ ಮಾಡಿದಾಗ ಸರಕಾರಿ ಶಾಲೆಗಳೂ ಖಾಸಗಿ ಶಾಲೆಗಳಿಗೆ ಪ್ರಬಲ ಪೈಪೋಟಿಯನ್ನು ನೀಡಬಹುದೆಂದರು. 

ವಿರಾಜ್ ಕೋಟಕ್ ಮಾತನಾಡಿ ಮುಂಬರುವ ದಿನಗಳಲ್ಲಿ ಶಾಲೆಗಳಿಗೆ ಸ್ಮಾರ್ಟ ಕ್ಲಾಸ್, ಡಿಜಿಟಲ್ ಬೋರ್ಡ, ಭೋಜನಾಲಯ  ಸೇರಿದಂತೆ ಗುಣಾತ್ಮಕ ಶಿಕ್ಷಣಕ್ಕೆ ಬೇಕಾದ ಸಂಪನ್ಮೂಲಗಳನ್ನು ಒದಗಿಸಲು ಪ್ರಯತ್ನಿಸಲಾಗುವದು ಎಂದು ಹೇಳಿದರು. 

ಸಮಾರಂಭದಲ್ಲಿ ಖಜಾಂಚಿ ಶಿಲ್ಪಾ ಚುರ್ಚಿಹಾಳ, ಕಾರ್ಯದರ್ಶಿ ತೇಜಶ್ರೀ ಸುರಳಿಹಳ್ಳಿ, ಸುಧಾ ಆನೂರಶೆಟ್ರ,  ಡಯಟ್‌ನ ಉಪನ್ಯಾಸಕ ಶೇಖರ ಹಂಚಿನಮನಿ, ಮಂಜುಳಾ ಚಂದ್ರಗಿರಿ, ಜೆ. ಆರ್‌. ಯಲವದಹಳ್ಳಿ, ಸಿಆರ್‌ಪಿ ಗೀರೀಶ ಮಲ್ಲಾಡದ, ಶಕುಂತಲಾ ಗುಡಗೂರಮಠ, ಎನ್‌.ವಾಯ್‌. ವಿಜಾಪುರ, ಎಸ್‌.ಎಸ್‌. ಜೇನು, ಎಸ್‌. ಸಿ. ರೂಗಿ, ದಿಲಶಾದ್ ನದಾಫ್, ಎಸ್‌ಡಿಎಂಸಿ ಉಪಾಧ್ಯಕ್ಷೆ ಅಶ್ವಿನಿ ಕುಸನೂರ, ವಿಶ್ವನಾಥ ಪತ್ತಾರ, ನಾಗರಾಜ ದೊಡ್ಡಮನಿ, ಸಂಸ್ಥೆಯ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.