ವಿಶ್ವಸಂಸ್ಥೆ 13 : ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಗೆ ಕಣದಲ್ಲಿದ್ದ 18 ರಾಷ್ಟ್ರಗಳ ಪೈಕಿ ಅತ್ಯಧಿಕ ಮತಗಳನ್ನು ಪಡೆದು ಭಾರತ ಆಯ್ಕೆಯಾಗಿದೆ. ಇದರೊಂದಿಗೆ ಮಾನವ ಹಕ್ಕುಗಳ ಪ್ರಚಾರ ಮತ್ತು ಮೇಲ್ವಿಚಾರಣೆ ನಡೆಸುವ ಮಂಡಳಿಗೆ ಐದನೇ ಬಾರಿಗೆ ಆಯ್ಕೆಯಾದ ಗರಿಮೆ ಭಾರತಕ್ಕೆ ಸಿಕ್ಕಿದೆ.
ಕಾಶ್ಮೀರದ ಗಲಭೆಗಳನ್ನು ಉಲ್ಲೇಖಿಸಿ ಮಾನವ ಹಕ್ಕುಗಳ ಉಲ್ಲಂಘನೆಯ ಆರೋಪ ಮಾಡಿದ್ದ ಮಂಡಳಿಯ ಹೈಕಮಿಷನರ್ ಜಿಯಾದ್ ರಾದ್ ಅಲ್ ಹುಸೇನ್ ಅವರು, ಈ ಕುರಿತು ತನಿಖೆ ನಡೆಸುವಂತೆ ಅಂತರರಾಷ್ಟ್ರೀಯ ತನಿಖಾ ಸಂಸ್ಥೆಗೆ ಶಿಫಾರಸು ಮಾಡಿದ್ದರು. ಅವರ ಉತ್ತರಾಧಿಕಾರಿಯಾಗಲಿರುವ ಮಿಚೇಲ್ ಬ್ಯಾಚಲೆಟ್ ಹಾಗೂ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಂಟಾನಿಯೋ ಗುಟೇರಸ್ ಅವರು ಹುಸೇನ್ ಶಿಫಾರಸ್ಸನ್ನು ಬೆಂಬಲಿಸಿದ್ದರು. ಮಂಡಳಿಯಲ್ಲಿರುವ ಪಾಕಿಸ್ತಾನವೂ ಸಹಮತ ವ್ಯಕ್ತಪಡಿಸಿತ್ತು. ಆದರೆ ಉಳಿದ ಯಾವುದೇ ದೇಶಗಳು ಹುಸೇನ್ ಶಿಫಾರಸ್ಸಿಗೆ ಬೆಂಬಲ ನೀಡಿರಲಿಲ್ಲ. ಹೀಗಾಗಿ ಭಾರತ, ಮಂಡಳಿಗೆ ಆಯ್ಕೆಯಾಗಿರುವುದು ಮಹತ್ವ ಪಡೆದುಕೊಂಡಿದೆ.
ಮತದಾನ ಪ್ರಕ್ರಿಯೆ ವೇಳೆ ವಿಶ್ವಸಂಸ್ಥೆಯ 193 ಸದಸ್ಯ ರಾಷ್ಟ್ರಗಳು ಮತ ಚಲಾಯಿಸಿದವು. ಭಾರತ ಒಟ್ಟು 188 ಮತಗಳನ್ನು ಪಡೆದುಕೊಂಡಿದೆ. ರೋಹಿಂಗ್ಯಾ ಬಿಕ್ಕಟ್ಟನ್ನು ಎದುರಿಸುತ್ತಿರುವ ರಾಷ್ಟ್ರಗಳಲ್ಲಿ ಮುಂಚೂಣಿಯಲ್ಲಿರುವ ಬಾಂಗ್ಲಾದೇಶ 178 ಮತ ಗಳಿಸಿದೆ. ಏಷ್ಯಾ–ಪೆಸಿಫಿಕ್ ಪ್ರದೇಶಕ್ಕೆ ತೆರವಾಗಿದ್ದ ಐದು ಸ್ಥಾನಗಳಿಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಭಾರತ, ಬಾಂಗ್ಲಾ ಹೊರತುಪಡಿಸಿ ಏಷ್ಯಾ–ಪೆಸಿಫಿಕ್ ಪ್ರದೇಶದಿಂದ ಚುನಾಯಿತವಾದ ಉಳಿದ ಮೂರು ದೇಶಗಳೆಂದರೆ ಬಹರೇನ್, ಫಿಜಿ ಮತ್ತು ಫಿಲಿಪೈನ್ಸ್.
ಸದ್ಯ 47 ಸದಸ್ಯ ಬಲದ ಮಂಡಳಿಗೆ ಭಾರತವು ಜನವರಿಯಲ್ಲಿ ಸೇರ್ಪಡೆಯಾಗಲಿದ್ದು, ಏಷ್ಯಾ–ಪೆಸಿಫಿಕ್ ಭಾಗದ ಚೀನಾ, ನೇಪಾಳ, ಹಾಗೂ ಪಾಕಿಸ್ತಾನ ಜತೆ ಮುಂದಿನ ಮೂರು ವರ್ಷಗಳ ಅವಧಿಗೆ ಕಾರ್ಯ ನಿರ್ವಹಿಸಲಿದೆ.
ಮಂಡಳಿಗೆ ನಾಮನಿರ್ದೇಶನಗೊಂಡ ಬಳಿಕ, ವರ್ಣಭೇದ – ಜನಾಂಗೀಯ ತಾರತಮ್ಯ ಮತ್ತು ಸಂಬಂಧಿತ ಸಮಸ್ಯೆಗಳನ್ನು ಎದುರಿಸಲು ಅಂತರರಾಷ್ಟ್ರೀಯ ಪ್ರಯತ್ನಗಳನ್ನು ಬೆಂಬಲಿಸುವುದಾಗಿ ಭಾರತ ಹೇಳಿದೆ. 2006ರಲ್ಲಿ ಭಾರತ ಮೊದಲ ಬಾರಿ ಚುನಾಯಿತವಾಗಿತ್ತು. ಬಳಿಕ 2007, 2011 ಮತ್ತು 2014ರಲ್ಲಿ ಆಯ್ಕೆಯಾಗಿತ್ತು.